ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಅಕ್ರಮ ಪೈಪ ಲೈನ್ : ತೆರವು ಕಾರ್ಯಾಚರಣೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ,ಅ೦೬-ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಬರುವ ತಾಲ್ಲೂಕಿನ ದಾಸನಾಳ ಸೇರಿದಂತೆ ಮುಖ್ಯಕಾಲುವೆ ಮತ್ತು ವಿತರಣಾ ಕಾಲುವೆಗಳಿಗೆ ಅಕ್ರಮವಾಗಿ -ಪೈಪಲೈನ ಅಳವಡಿಸಿ ಅಪಾರ ಪ್ರಮಾಣ ನೀರು ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಕಾಲುವೆಯ ಮೇಲ್ಭಾಗದಲ್ಲಿ ನೀರು ಕದಿಯುತ್ತಿರುವ ಪರಿಣಾಮ, ಎಡದಂಡೆ ಕಾಲುವೆಯ ರಾಯಚೂರು ವರೆಗೂ ಸಮರ್ಪಕವಾಗಿ ನೀರಿನ ಪ್ರಮಾಣ ತಲುಪಿಸಲು ಸಾಧ್ಯವಾಗದ ಹಿನ್ನೆಲೆ, ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್, ಅಕ್ರಮ ಪೈಪ್ಗಳನ್ನು ಪತ್ತೆ ಹಚ್ಚಿ ತೆರವು ಮಾಡುವಂತೆ ಆದೇಶ ಮಾಡಿದ್ದಾರೆ.
ಜಲಸಂಪನ್ಮೂಲಕ ಇಲಾಖೆಯ ವಡ್ಡರಹಟ್ಟಿ ಉಪ ವಿಭಾಗದ ನಂಬರ್-೨ ಕಾಲುವೆ ಅಧಿಕಾರಿಗಳು, ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಸೋಮವಾರ ದಾಳಿ ಮಾಡಿ ಅಕ್ರಮ ಪೈಪ್ಲೈನ್ಗಳನ್ನು ಪತ್ತೆ ಹಚ್ಚಿ ತೆರವು ಕಾರ್ಯಚರಣೆ ಕೈಗೊಂಡರು.
ತುಂಗಭದ್ರಾ ಎಡದಂಡೆ ಮತ್ತು ವಿತರಣಾ ಕಾಲುವೆಗಳಿಗೆ ಕೆಲ ರೈತರು ನೇರವಾಗಿ ಪೈಪ್ಲೈನ್ ಅಳವಡಿಸಿ ನೀರು ಕದಿಯುತ್ತಿದ್ದರೆ ಇನ್ನು ಕೆಲ ರೈತರು, ಕಾಲುವೆಗಳಿಗೆ ರಂಧ್ರ ಕೊರೆದು ಭೂಮಿಯಲ್ಲಿ ನೀರಿನ ಪೈಪ್ಗಳನ್ನು ಹುದುಗಿಸಿಟ್ಟು ನೀರು ಕಳ್ಳತನ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ವಡ್ಡರಹಟ್ಟಿ ನಂಬರ್-2 ಕಾಲುವೆಯ ಸಹಾಯಕ ಕಾರ್ಯಪಾಲಕ ಎಂಜಿನೀಯರ್ ವೆಂಕಟೇಶ್ವರಮಾತನಾಡಿ ಜಿಲ್ಲಾಧಿಕಾರಿ ಸೂಚನೆ ಮೆರೆಗೆ ರಚಿಸಲಾದ ಸಮಿತಿಯಲ್ಲಿ ನಾನಾ ಇಲಾಖೆಯ ಅಧಿಕಾರಿಗಳಿದ್ದೇವೆ. ಮೂರು ದಿನಗಳ ಕಾಲ ತೆರವು ಕಾರ್ಯಾಚರಣೆ ಕೈಗೊಳ್ಳುತ್ತೇವೆ.
ದಾಸನಾಳ ಮತ್ತು ಆರಾಳ ಗ್ರಾಮದಲ್ಲಿ ಒಟ್ಟು ಹನ್ನೊಂದು ಅಕ್ರಮ ಪೈಪ್ಲೈನ್ ಹಾಗೂ ೧೩ ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಗುರುತಿಸಿದ್ದೇವೆ. ಎಲ್ಲವನ್ನು ತೆರವು ಮಾಡಿದ್ದು, ನಾಳೆ ಮತ್ತು ನಾಡಿದ್ದು,
ಕೇಸರಹಟ್ಟಿ, ಕೇಸಕಟ್ಟಿ ಹಂಚಿನಾಳ, ಮಸಾರಿಕ್ಯಾಂಪ್, ಜೀರಾಳ ಕಲ್ಗುಡಿ, ಚಿಕ್ಕಡಂಕನಕಲ್ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಕಿರಿಯ ಎಂಜಿನೀಯರ್ಗಳಾದ ಪ್ರವೀಣ, ನಾಗರಾಜ್, ಜೆಸ್ಕಾಂ ಇಲಾಖೆಯ ಕಿರಿಯ ಎಂಜಿನೀಯರ್ ಪ್ರದೀಪ್ ಕಂದಾಯ, ಪೊಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥೀತರಿದ್ದರು.
