2c136fae-be38-4577-97e1-318669006cc9

ಮನೆ ಹಾನಿ ಪ್ರಕರಣಗಳಿಗೆ ಪರಿಹಾರ ಪಾವತಿ : ಎಂ.ಎಸ್.ದಿವಾಕರ

ಕರುನಾಡ ಬೆಳಗು ಸುದ್ದಿ

ವಿಜಯನಗರ, 22-  ಮಳೆಯಿಂದಾಗಿ ಹಾನಿಯಾದ 230 ಮನೆಗಳ ಪೈಕಿ 126 ಮನೆಗಳಿಗೆ ನಿಯಮಾನುಸಾರ ಸಮೀಕ್ಷೆ ಕೈಗೊಂಡು ಪರಿಹಾರ ಧನ ಪಾವತಿಸಲಾಗಿರುತ್ತದೆ. ಇನ್ನು 104 ಮನೆಗಳು ಕಳೆದ 4 ದಿನಗಳಲ್ಲಿ ಹಾನಿಯಾಗಿದ್ದು, ಶೀಘ್ರದಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಿ ನಿಯಮಾನುಸಾರ ಪರಿಹಾರವನ್ನು ಪಾವತಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆಯಿಂದಾಗಿ ಜೂನ್ ಒಂದನೇ ತಾರೀಖಿನಿಂದ ಇಂದಿನವರೆಗೂ ತಾಲ್ಲೂಕುವಾರು ಹೊಸಪೇಟೆ ತಾಲೂಕಿನಲ್ಲಿ 24, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 26, ಕೂಡ್ಲಿಗಿ ತಾಲೂಕಿನಲ್ಲಿ 81, ಹರಪನಹಳ್ಳಿ ತಾಲೂಕಿನಲ್ಲಿ 32, ಹಡಗಲಿ ತಾಲೂಕಿನಲ್ಲಿ 30 ಮತ್ತು ಕೊಟ್ಟೂರು ತಾಲೂಕಿನಲ್ಲಿ 37 ಸೇರಿ ಒಟ್ಟು 230 ಮನೆಗಳಿಗೆ ಹಾನಿಯಾಗಿದೆ.

ಹರಪನಹಳ್ಳಿ ತಾಲ್ಲೂಕು, ಕೂಡ್ಲಿಗಿ ತಾಲೂಕು ಮತ್ತು ಹಡಗಲಿ ತಾಲ್ಲೂಕಿನಲ್ಲಿ ತಲಾ ಒಂದು ಸೇರಿ 3 ದೊಡ್ಡ ಜಾನುವಾರುಗಳ ಪ್ರಾಣಹಾನಿಯಾಗಿದೆ. ಈ ಮೂರೂ ಜಾನುವಾರುಗಳ ಮಾಲೀಕರಿಗೆ ನಿಯಮಾನುಸಾರ ಪರಿಹಾರವನ್ನು ಪಾವತಿಸಲಾಗಿರುತ್ತದೆ. ಬೆಳೆಹಾನಿಯಾದ ರೈತರುಗಳಿಗೆ ಸಮೀಕ್ಷೆ ಕೈಗೊಂಡು ಶೀಘ್ರದಲ್ಲಿ ಪರಿಹಾರವನ್ನು ಪಾವತಿಸಲಾಗುವುದು. ಈ ಬಗ್ಗೆ ಯಾವುದೇ ರೈತರು ಆತಂಕಪಡುವ ಅಗತ್ಯವಿರುವುದಿಲ್ಲವೆಂದು ಈ ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸಲಾಗಿದೆ.

ಅತೀ ಹೆಚ್ಚು ಮಳೆ : 2024-25ನೇ ಸಾಲಿನಲ್ಲಿ ಮುಂಗಾರು ಮಳೆಯಿಂದಾಗಿ ಜೂನ್ 1ನೇ ತಾರೀಖಿನಿಂದ 22ನೇ ಆಗಷ್ಟ್ವರೆಗೂ 237 ಮಿ.ಮೀ ವಾಡಿಕೆ ಮಳೆ ಆಗಬೇಕಾಗಿದ್ದು, 354 ಮಿ.ಮೀ ಮಳೆ ಆಗಿರುತ್ತದೆ. ಶೇ.49ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆ ಆಗಿರುತ್ತದೆ. ಕೊಟ್ಟೂರು ಮತ್ತು ಕೂಡ್ಲಿಗಿ ತಾಲ್ಲೂಕುಗಳಲ್ಲಿ ಕ್ರಮವಾಗಿ 138 ಮತ್ತು 145 ಶೇಕಡಾ ಅತಿ ಹೆಚ್ಚು ಮಳೆ ಆಗಿದೆ.

ಶೇ.100ರಷ್ಟು ಬಿತ್ತನೆ : ಜಿಲ್ಲೆಯಲ್ಲಿ ಕೃಷಿ ಪ್ರದೇಶದಲ್ಲಿ ಶೇ.100 ರಷ್ಟು ಬಿತ್ತನೆಯಾಗಿದೆ. 2,94,000 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಪ್ರಮುಖ ಬೆಳೆಗಳು ಮುಸುಕಿನ ಜೋಳ, ಶೇಂಗಾ, ಭತ್ತ, ಜೋಳ, ಸಜ್ಜೆ, ತೊಗರಿ ಮತ್ತು ರಾಗಿ ಬೆಳೆಗಳು ಬಿತ್ತನೆಯಾಗಿದೆ. ಹಾಗೂ ತೋಟಗಾರಿಕಾ ಪ್ರದೇಶದಲ್ಲಿ 4795 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತದೆ. ಪ್ರಮುಖ ಬೆಳೆಗಳು ಮೆಣಸಿನಕಾಯಿ, ಟಮೊಟೋ, ಈರುಳ್ಳಿ, ಬದನೆ ಬೆಳೆಗಳು ಸಹ ಬಿತ್ತನೆಯಾಗಿರುತ್ತವೆ.

ಕೃಷಿ ಬೆಳೆ ಹಾನಿ : ಮಳೆಯಿಂದಾಗಿ 309.35 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿದೆ. ಪ್ರಮಖವಾಗಿ ಮುಸುಕಿನ ಜೋಳ 136.29 ಹೆಕ್ಟೇರ್, ಭತ್ತ 118.71 ಹೆಕ್ಟೇರ್, ಹತ್ತಿ 21.1 ಹೆಕ್ಟೇರ್, ಸೂರ್ಯಕಾಂತಿ 11.3 ಹೆಕ್ಟೇರ್, ಜೋಳ 8.14 ಹೆಕ್ಟೇರ್, ಸಜ್ಜೆ 6.88 ಹೆಕ್ಟೇರ್, ಕಬ್ಬು 2.23 ಹೆಕ್ಟೇರ್, ರಾಗಿ 3.2 ಹೆಕ್ಟೇರ್, ಶೇಂಗಾ 1.1 ಹೆಕ್ಟೇರ್ ಮತ್ತು ಹೆಸರು 0.4 ಹೆಕ್ಟೇರ್‌ನಷ್ಟು ಕೃಷಿ ಬೆಳೆಗಳಿಗೆ ಹಾನಿಯಾಗಿದೆ.

ತೋಟಗಾರಿಕಾ ಬೆಳೆ ಹಾನಿ : ತೋಟಗಾರಿಕಾ ಬೆಳೆಗಳಿಗೆ 90.93 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿರುತ್ತವೆ. ಇವುಗಳ ಪೈಕಿ ಮೆಣಸಿನಕಾಯಿ 32.4 ಹೆಕ್ಟೇರ್, ಈರುಳ್ಳಿ 23.1 ಹೆಕ್ಟೇರ್, ಪಪ್ಪಾಯ 3.2 ಹೆಕ್ಟೇರ್, ಬಾಳೆ 5.8 ಹೆಕ್ಟೇರ್, ಟಮೊಟೋ 4.8 ಹೆಕ್ಟೇರ್, ಹಾಗಲಕಾಯಿ 5.8 ಹೆಕ್ಟೇರ್, ಕುಂಬಳ ಕಾಯಿ 1.8 ಹೆಕ್ಟೇರ್, ನುಗ್ಗೇ 5.2 ಹೆಕ್ಟೇರ್, ವಿಳ್ಲೇದೆಲೆ 2.73 ಹೆಕ್ಟೇರ್, ಗುಲಾಬಿ 3.5 ಹೆಕ್ಟೇರ್, ಸುಗಂಧರಾಜ 1.2 ಹೆಕ್ಟೇರ್, ಅಡಿಕೆ 0.8 ಹೆಕ್ಟೇರ್, ಹಿರೇಕಾಯಿ 0.8 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಹಾನಿಯಾಗಿರುತ್ತವೆ.

ಜಂಟಿ ಸಮೀಕ್ಷೆ ಕಾರ್ಯ ಪ್ರಗತಿ : ಪೂರ್ವ ಮುಂಗಾರಿನಲ್ಲಿ ಒಟ್ಟು 186.00 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯ ಜಂಟಿ ಸಮೀಕ್ಷೆ ಕಾರ್ಯವು ಪೂರ್ಣಗೊಂಡಿದ್ದು, ರೈತರ ದಾಖಲೆಗಳನ್ನು ಪರಿಹಾರ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಲಾಗಿರುತ್ತದೆ. ಈ ಫಲಾನುಭವಿಗಳಿಗೆ ಸರ್ಕಾರದಿಂದ ಶೀಘ್ರದಲ್ಲಿ ಪರಿಹಾರ ಮೊತ್ತವನ್ನು ಜಮಾ ಮಾಡಲಾಗುವುದು. ಮುಂಗಾರು ಋತುವಿನಲ್ಲಿ ಆದ ಬೆಳೆಹಾನಿಗಳ ಜಂಟಿ ಸಮೀಕ್ಷೆ ಕಾರ್ಯವು ಪ್ರಗತಿಯಲ್ಲಿದ್ದು, ಹಾನಿಯಾದ ರೈತರ ಪಟ್ಟಿಯನ್ನು ತಯಾರಿಸಿ ಸರ್ಕಾರದಿಂದ ನೇರವಾಗಿ ರೈತರ ಖಾತೆಗಳಿಗೆ ಬೆಳೆ ಪರಿಹಾರ ಮೊತ್ತವನ್ನು ಮುಂದಿನ ದಿನಗಳಲ್ಲಿ ಜಮಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!