3

ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ : ಜನಜಾಗೃತಿ ಜಾಥಕ್ಕೆ ಚಾಲನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 10- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ” ಅಂಗವಾಗಿ ಜನಜಾಗೃತಿ ಜಾಥಾ ಕಾರ್ಯಕ್ರಮವು ಜಿಲ್ಲಾ ಕೇಂದ್ರದಲ್ಲಿ ನಡೆಯಿತು.

ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರ್ಗದ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಘೋಷವಾಕ್ಯ- ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ, ಇದರ ಕುರಿತು ತಿಳಿಸುತ್ತಾ, ಮಾನಸಿಕ ಒತ್ತಡದಲ್ಲಿ ಸಿಲುಕಿರುವವರಿಗೆ ನೈತಿಕ ಹಾಗೂ ಸಾಮಾಜಿಕ ಬೆಂಬಲ ನೀಡುವುದು ಸಮುದಾಯದ ಕರ್ತವ್ಯವಾಗಿದೆ ಎಂದು ಹೇಳಿದರು. ಯಾವುದೇ ಸಮಸ್ಯೆಗೆ ಆತ್ಮಹತ್ಯೆಯ ಪರಿಹಾರವಲ್ಲ. ಒಂಟಿ ಭಾವನೆ, ಸದಾ ಬೇಜಾರು ಇತರರಿಗೆ ಹೊರೆ ಎಂಬ ಭಾವನೆ, ಆತ್ಮಹತ್ಯೆಯ ಮಾರ್ಗಗಳ ಹುಡುಕಾಟ, ಮದ್ಯದಂತಹ ವ್ಯಸನಕಾರಿ ವಸ್ತುಗಳ ಸೇವನೆಯಲ್ಲಿ ಹೆಚ್ಚಳ, ಇವು ವ್ಯಕ್ತಿಯಲ್ಲಿ ಆತ್ಮಹತ್ಯೆಯ ಎಚ್ಚರಿಕೆಯ ಚಿಹ್ನೆಗಳಾಗಿರುತ್ತವೆ. ಆತ್ಮಹತ್ಯೆಗೆ ಪ್ರಮುಖ ಕಾರಣಗಳು ಹತಾಶೆ, ಉದ್ವೇಗ, ಪ್ರವೃತ್ತಿ, ತೀವ್ರ ಅನಾರೋಗ್ಯ ಜೀವನದ ಒತ್ತಡಗಳು, ಮಾನಸಿಕ ಸಮಸ್ಯೆಗಳು, ನಿಕಟ ವ್ಯಕ್ತಿಯ ಆತ್ಮಹತ್ಯೆ, ಮದ್ಯಪಾನ, ಮಾದಕ ವಸ್ತುಗಳ ಬಳಕೆ, ವ್ಯಸನ, ಇವು ಸಹ ಕಾರಣಗಳಾಗಿರುತ್ತವೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಮಾನಸಿಕ ಸಮಸ್ಯೆಗಳು, ಆತ್ಮಹತ್ಯೆಯ ಆಲೋಚನೆಗಳಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಕಾನೂನು ಸೇವೆಗಳ ಇಲಾಖೆಯಲ್ಲಿ ವಿವಿಧ ಕಾರ್ಯಕ್ರಮಗಳು ಇದ್ದು, ಸಮಸ್ಯೆ ಕಂಡು ಬಂದಲ್ಲಿ ಇದರ ಉಪಯೋಗಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ. ಹೆಚ್ ಪ್ರಕಾಶ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ.ವೆಂಕಟೇಶ ಕೆ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ರಾಮಾಂಜಿನೇಯ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಶಿವಾನಂದ ವಿ ಪೂಜಾರ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!