ಪ್ರಕೃತಿ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ : ನ್ಯಾ.ಕೆ.ಜಿ ಶಾಂತಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 11- ಪ್ರಕೃತಿಯಿಂದ ಸ್ವಚ್ಚಂದ ಗಾಳಿ, ಉತ್ತಮ ಮಳೆ-ಬೆಳೆ ದೊರೆಯುತ್ತಲಿದ್ದು, ಅರಣ್ಯ ಅಥವಾ ಪ್ರಕೃತಿ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾತ್ರವಲ್ಲದೇ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ನ್ಯಾ.ಕೆ.ಜಿ ಶಾಂತಿ ಅವರು ಹೇಳಿದರು.
ಅರಣ್ಯ ಇಲಾಖೆ ಬಳ್ಳಾರಿ ವೃತ್ತ ಹಾಗೂ ಬಳ್ಳಾರಿ ವಿಭಾಗ ವತಿಯಿಂದ ನಗರದ ರೇಡಿಯೋ ಪಾರ್ಕ್ನ ಐಟಿಐ ಕಾಲೇಜು ಎದುರುಗಡೆಯ ಕಿರು ಮೃಗಾಲಯ ಆವರಣದ ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಅವರು ಮಾತನಾಡಿದರು.
ಅರಣ್ಯ ರಕ್ಷಣೆಗೆ ಅನೇಕ ಮಹನೀಯರು ತಮ್ಮ ಜೀವದ ಹಂಗು ತೊರೆದು ಪ್ರಕೃತಿಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಕೆಲವರು ಪ್ರಾಣ ತ್ಯಾಗ ಬಲಿದಾನದಿಂದ ಹುತಾತ್ಮರಾಗಿದ್ದು, ಅಂತಹ ಹುತಾತ್ಮರನ್ನು ಪ್ರತಿದಿನ ಸ್ಮರಿಸಸಿಕೊಂಡು ಕಾಡು-ನಾಡು ಸಂರಕ್ಷಿಸುವ ಸಂಕಲ್ಪ ಹೊಂದಬೇಕು ಎಂದು ತಿಳಿಸಿದರು.
ಸಮಾಜ-ಅರಣ್ಯ ನಡುವಿನ ಸಂಘರ್ಷದಲ್ಲಿ ಮನುಷ್ಯನ ಸ್ವಾರ್ಥ ಇರುತ್ತದೆ ಹೊರತು, ಪ್ರಾಣಿ-ಪಕ್ಷಿಗಳ ಸ್ವಾರ್ಥ ಇರುವುದಿಲ್ಲ. ಮನುಷ್ಯರು ಅರಣ್ಯ ಪ್ರದೇಶಗಳನ್ನು ಕಾನೂನು ಬಾಹಿರವಾಗಿ ಅಕ್ರಮಿಸುತ್ತಾ ಅರಣ್ಯ ಕಬಳಿಸುವುದು, ಕಾಡು-ಪ್ರಾಣಿ ಸಂಕುಲಗಳನ್ನು ನಾಶಪಡಿಸುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ನಮ್ಮ ದೇಶ, ನಮ್ಮ ಅರಣ್ಯ, ನಮ್ಮ ಪ್ರಕೃತಿ ರಕ್ಷಣೆಗೆ ನಮ್ಮ ಕೊಡುಗೆ ಕುರಿತು ವಿಚಾರ ಮಾಡಬೇಕು. ಪ್ರಸ್ತುತ ದಿನಮಾನಗಳಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಏಕ್ ಮಾ ಏಕ್ ಪೇಡ್ (ತಾಯಿಯ ಹೆಸರಲ್ಲಿ ಒಂದು ಗಿಡ) ಕಾರ್ಯಕ್ರಮವು ಒಳ್ಳೆಯ ಉದ್ದೇಶದಿಂದ ಕೂಡಿದ್ದು, ಸಾರ್ವಜನಿಕರಲ್ಲಿ ಪರಿಸರ ಜವಾಬ್ದಾರಿಯನ್ನು ಜ್ಞಾಪಿಸಲು ಸಹಕಾರಿಯಾಗಿದೆ.
