8

ಆಶ್ರಯ ಯೋಜನೆ ಮನೆಗಳ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸುವಂತೆ ಸೂಚನೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 13- ಆಶ್ರಯ ಯೋಜನೆಯ ಅಡಿ ನಿರ್ಮಾಣ ಆಗಿರುವ ಮನೆಗಳ ಹಸ್ತಾಂತರ ಕೆಲಸವನ್ನು ಶೀಘ್ರ ಆರಂಭಿಸುವಂತೆ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳ್ಳಾರಿ ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ನಡೆದ ಆಶ್ರಯ ಯೋಜನೆ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಂದ ಯೋಜನೆಯ ಸ್ಥಿತಿ ಗತಿಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

ನಗರದ ವಾರ್ಡ್’ವಾರು ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿ, ನಿರ್ಮಾಣ ಆಗಿರುವ 809 ಮನೆಗಳ ಹಸ್ತಾಂತರ ಕೆಲಸ ಶೀಘ್ರ ಆರಂಭ ಆಗಬೇಕು, ಯುದ್ಧೋಪಾದಿಯಲ್ಲಿ ಈ ಕೆಲಸ ನಡೆಯಬೇಕು ಎಂದು ಆದೇಶಿಸಿದರು.

ಮಹಾತ್ಮ ಗಾಂಧಿ ಟೌನ್’ಶಿಪ್ ಯೋಜನೆಯನ್ನು ಸಮರ್ಥವಾಗಿ ಪೂರ್ಣಗೊಳಿಸಬೇಕು, ಈ ಟೌನ್’ಶಿಪ್’ಗೆ ಅಗತ್ಯ ಇರುವ ಎಲ್ಲ ಮೂಲಭೂತ ಸೌಕರ್ಯ ಈಡೇರಿಸಿ ಟೌನ್’ಶಿಪ್ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಚಿಂತನೆ: ಮಹಾತ್ಮ ಗಾಂಧಿ ಟೌನ್’ಶಿಪ್ ಸಮೀಪ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಯೋಜನೆಯೊಂದು ನೆನೆಗುದಿಗೆ ಬಿದ್ದಿದ್ದು, ಹಳೆಯ ಯೋಜನೆಯನ್ನು ಮರು ವಿನ್ಯಾಸಗೊಳಿಸಿ, ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸರ್ಕಾರದ ವತಿಯಿಂದ 39 ಎಕರೆ 40 ಸೆಂಟ್ಸ್ ವಿಸ್ತಾರದ ಬೃಹತ್ ಬಡಾವಣೆಯನ್ನು ನಿರ್ಮಿಸಿ ಕೈಗಾರಿಕೆಗಳಿಗೆ ಗುತ್ತಿಗೆ ನೀಡಲಾಗುವುದು, ಈ ಪ್ರದೇಶದಲ್ಲಿ ಕೈಗಾರಿಕೆಗಳು ತಲೆ ಎತ್ತಿದರೆ, ಟೌನ್’ಶಿಪ್ ನ ನಿವಾಸಿಗಳಿಗೆ ಉದ್ಯೋಗ ಅವಕಾಶ ಸಿಗುತ್ತದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.

ಸಭೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಆಯುಕ್ತ ಖಲೀಲಸಾಬ, ಪಾಲಿಕೆಯ ಅಧಿಕಾರಿಗಳು, ಸಹಾಯಕ ಆಯುಕ್ತರ ಕಚೇರಿಯ ಅಧಿಕಾರಿಗಳು ಹಾಗೂ ಪಾಲಿಕೆಯ ಸದಸ್ಯರು ಹಾಜರಿದ್ದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!