ಭಕ್ತಾಧಿಗಳ ಜಯ ಘೋಷದೊಂದಿಗೆ ಅದ್ದೂರಿಯಾಗಿ ಜರುಗಿದ ಮಹಾಮಾಯ ದೇವಿ ಜಾತ್ರೆ
ಕರುನಾಡ ಬೆಳಗು ಸುದ್ದಿ
ಕುಕನೂರ, 11- ಪಟ್ಟಣದ ಐತಿಹಾಸಿಕ ಸುಪ್ರಸಿದ್ದ ಮಹಾಮಾಯ (ದ್ಯಾಮವ್ವ) ದೇವಿಯ ಜಾತ್ರಾ ಮಹೋತ್ಸವವು ಶುಕ್ರವಾರದಂದು ಸಾಯಂಕಾಲ ೪ ಗಂಟೆಗೆ ನೆರೆದ ಸಾವಿರಾರು ಭಕ್ತಾಧಿಗಳ ಜಯಘೋಷದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಈ ಜಾತ್ರಾ ಮಹೋತ್ಸಕ್ಕೆ ಗದಗ, ಹುಬ್ಬಳ್ಳಿ, ಧಾರವಾಡ, ಬಿಜಾಪೂರ, ಸವದತ್ತಿ, ಹಳ್ಯಾಳ ಇನ್ನೂ ಹಲವಾರು ಭಾಗಗಳಿಂದ ಸಾವಿರಾರು ಭಕ್ತಾಧಿಗಳು ಒಂದು ದಿನ ಮೊದಲೇ ಪೂಜೆ ಹಾಗೂ ಜಾತ್ರೆಗೆ ಆಗಮಿಸಿದ್ದರು.
ನೆರೆದ ಸಾವಿರಾರು ಭಕ್ತಾಧಿಗಳ ಮಧ್ಯೆ ಸಾಗಿದ ರಥೋತ್ಸವಕ್ಕೆ ಭಕ್ತಾಧಿಗಳು ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ, ಜಯಘೋಷ ಹಾಕಿ ಭಕ್ತಿ ಮೆರೆದರು.
ಮಹಾನವಮಿ ಪ್ರಯುಕ್ತ ಶರನ್ನವರಾತ್ರಿ ಉತ್ಸವಗಳು ಒಂಬತ್ತು ದಿನಗಳ ಕಾಲ ಅತ್ಯಂತ ಸಡಗರ, ಸಂಭ್ರಮ, ಭಕ್ತಿಗಳಿಂದ ನಡೆದವು.
ರಥೋತ್ಸವದ ನಿಮಿತ್ಯ ಶುಕ್ರವಾರದಂದು ಬೆಳಗಿನ ಜಾವದಿಂದ ಮಹಾಮಾಯ ದೇವಸ್ಥಾನದಲ್ಲಿ ಶ್ರೀ ದೇವಿಗೆ ವಿಷೇಶ ಅಭಿಷೇಕ, ಕುಂಕಮಾರ್ಚನೆ ಹಾಗೂ ವಿವಿಧ ಪೂಜಾ ವಿಧಾನಗಳು ನೆರವೇರಿದವು.
ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತಾಧಿಗಳಿಗೆ ಮೂಲ ಸೌಲಭ್ಯಗಳನ್ನು ಹಾಗೂ ಪ್ರಸಾದ ವ್ಯವಸ್ಥೆಯನ್ನು ದೇವಸ್ಥಾನ ಮಂಡಳಿಯವರು ಆಯೋಜಿಸಿದ್ದರು.
ಈ ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರು, ಧರ್ಮಾಧಿಕಾರಿಗಳು, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಪಟ್ಟಣ ಪಂಚಾಯತಿ ಪೋಲಿಸ್ ಇಲಾಖೆಯವರು, ಅಧಿಕಾರಿಗಳು, ಸದಸ್ಯರು ಸೇರಿದಂತೆ ಎಲ್ಲಾ ಇಲಾಖೆಯ ಸಿಬ್ಬಂದಿಯವರು, ಗ್ರಾಮಸ್ಥರು ಪ್ರಮುಖರು ಇದ್ದರು.
