ಸಂಶೋಧಕ ಡಾ.ಜಾಜಿ ದೇವೇಂದ್ರಪ್ಪ ಕರ್ನಾಟಕ ೪ನೇ ಕವಿಕಾವ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 18- ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ), ಬೆಂಗಳೂರು ಕೊಪ್ಪಳ ಜಿಲ್ಲಾ ಘಟಕ ಹಾಗೂ ಗಂಗಾವತಿ ತಾಲ್ಲೂಕು ಘಟಕಗಳ ಸಹಯೋಗದಲ್ಲಿ ೨೦೨೫ ಜನವರಿ-೧೨ ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹಮ್ಮಿಕೊಳ್ಳಲಿರುವ ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ, ಸಂಶೋಧಕ, ಸಂಶೋಧನಾ ಮಾರ್ಗದರ್ಶಿ ಡಾ.ಜಾಜಿ ದೇವೇಂದ್ರಪ್ಪರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ತಿಳಿಸಿದ್ದಾರೆ.
ನಗರದ ನೀಲಕಂಠೇಶ್ವರ ದೇವಾಲಯ ಆವರಣದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ, ದಿನಾಂಕ, ಸ್ಥಳ ಹಾಗೂ ರೂಪುರೇಷೆಗಳ ಕುರಿತು ಚರ್ಚಿಸಲಾಗಿ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಹಿರಿಯ ಸಾಹಿತಿ ಹೇಮಾ ಪಟ್ಟಣಶೆಟ್ಟಿ, ಅಲ್ಲಮಪ್ರಭು ಬೆಟ್ಟದೂರು, ಶರಣಪ್ಪ ಮೆಟ್ರಿ, ವಿನಯ ಒಕ್ಕುಂದ, ಡಾ.ಜಾಜಿ ದೇವೇಂದ್ರಪ್ಪ, ಡಾ.ಮಮ್ತಾಜ್ ಬೇಗಂ, ರಾಘವೇಂದ್ರ ದಂಡಿನ್, ಪವನ್ ಕುಮಾರ್ ಗುಂಡೂರು, ಎಸ್.ವಿ.ಪಾಟೀಲ್ ಗುಂಡೂರು ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು.
ಅಂತಿಮವಾಗಿ ಹಿರಿಯ ಸಾಹಿತಿ, ಸಂಶೋಧಕ, ಸಂಶೋಧನಾ ಮಾರ್ಗದರ್ಶಿ ಡಾ. ಜಾಜಿ ದೇವೇಂದ್ರಪ್ಪನವರನ್ನು ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ರಾಜ್ಯ ಕಾರ್ಯದರ್ಶಿ ಡಾ.ದಿವಾಕರ ನಾರಾಯಣ, ಪದಾಧಿಕಾರಿ ಎಸ್.ಪರಶುರಾಮಪ್ಪ, ವೇದಿಕೆಯ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷೆ ಅನಸೂಯ ಜಹಗೀರದಾರ, ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ತಳ್ಳಿ ಕುಪ್ಪಿಗುಡ್ಡ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗಂಗಾವತಿ ತಾಲ್ಲೂಕು ಪದಾಧಿಕಾರಿಗಳಾದ ಮಹಾದೇವ ಮೋಟಿ, ಯಲ್ಲಪ್ಪ ಕಲಾಲ್, ಶ್ರೀಧರ ತಳವಾರ, ವಿಜಯಲಕ್ಷ್ಮೀ ವೈ.ಕಲಾಲ್ ದಿಗ್ಗಾವಿ, ಗಂಗಾವತಿ ತಾಲ್ಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಅಂಗಡಿ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಪ್ರಾಂತೀಯ ಸಂಚಾಲಕ ಅಶೋಕ್ ಕುಮಾರ್ ರಾಯ್ಕರ್ ಮುಂತಾದವರು ಭಾಗವಹಿಸಿದ್ದರು.
