ಕಿತ್ತೂರು ರಾಣಿ ಚನ್ನಮ್ಮಳ ಧೈರ್ಯ, ಶಕ್ತಿ ಪ್ರತಿ ಮಹಿಳೆಯರಲ್ಲಿ ಮೂಡಲಿ: ಶಾಸಕ ಹೆಚ್.ಆರ್.ಗವಿಯಪ್ಪ
ಕರುನಾಡ ಬೆಳಗು ಸುದ್ದಿ
ವಿಜಯನಗರ, 23- ಮಹಿಳೆಯರು ಕಿತ್ತೂರು ರಾಣಿ ಚನ್ನಮ್ಮಳಂತೆ ಹೋರಾಟದ ಮನೋಭಾವ ಬೆಳೆಸಿಕೊಂಡು ರಾಣಿ ಚನ್ನಮ್ಮಳಂತಹ ಧೈರ್ಯ, ಶಕ್ತಿ ಪ್ರತಿ ಮಹಿಳೆಯಲ್ಲಿ ಮೂಡಲಿ ಎಂದು ವಿಜಯನಗರ ಶಾಸಕರಾದ ಹೆಚ್.ಆರ್. ಗವಿಯಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ನಗರಸಭೆ, ಹೊಸಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 23 ರಂದು ಕೊಟ್ಟೂರು ಸ್ವಾಮಿ ಮಠದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೊಕ್ಕಿನಿಂದ ಮೆರೆಯುತಿದ್ದ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ ವೀರ ರಾಣಿ ಚನ್ನಮ್ಮಳ ಸಾಧನೆ ಶ್ಲಾಘನೀಯ. ಅವರಂತೆ ಈ ನೆಲದಲ್ಲಿ ಸಹಸ್ರಾರು ಮಹಿಳೆಯರು ಹುಟ್ಟಿಬರಬೇಕು. ಮಹಿಳೆಯರು ಚನ್ನಮ್ಮಳ ಧಿಟ್ಟತನ, ಸ್ವಾಭಿಮಾನ, ಹೋರಾಟದ ಛಲವನ್ನು ರೂಪಿಸಿಕೊಳ್ಳಬೇಕು ಎಂದರು.
ಹೆಣ್ಣುಮಕ್ಕಳಲ್ಲಿ ಚನ್ನಮ್ಮಳ ಗುಣಗಳು ಬರಲು, ಪ್ರೇರಣೆ ನೀಡಲು ತಾಲೂಕಿನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹೆಸರಿನ ಶಾಲೆಯನ್ನು ಆರಂಭಿಸುತ್ತೇವೆ ಎಂದು ಹೊಸಪೇಟೆಯಲ್ಲಿರುವ ಸರ್ಕಾರಿ ಬಾಲಕಿಯರ ಶಾಲೆಯನ್ನು ಚನ್ನಮ್ಮಳ ಹೆಸರಿಡಲು ಇಲಾಖೆಯೊಂದಿಗೆ ಚರ್ಚಿಸಿ ಸರ್ಕಾರದ ಅದೇಶ ಪಡೆದು ನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಗರದಲ್ಲಿನ ಗಣ್ಯರು ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಲು ಮುಂದೆ ಬಂದರೆ, ಅಂತಹವರ ಜೊತೆ ನಿಂತು ಎಲ್ಲ ತರಹದ ಸಹಾಯ ಮಾಡುದಾಗಿ ತಿಳಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಬ್ರಟಿಷರ ವಿರುದ್ಧ ಹೊರಾಟ ಮಾಡಿ ವಿಜಯಗಳಿಸಿ 200 ವರ್ಷ ಪೂರ್ಣವಾಗಿದೆ. ನಮ್ಮ ದೇಶ ಹಿಂದಿನ ಕಾಲದಿಂದಲೂ ಮಹಿಳಾ ಸ್ವಾತಂತ್ರ್ಯ ಹೊಂದಿತ್ತು ಎಂಬುದಕ್ಕೆ ಕಿತ್ತೂರು ರಾಣಿ ಚನ್ನಮ್ಮ ಸಾಕ್ಷಿ. ಅನೇಕ ಮಹಾ ಪುರಷರು, ಮಹಾತ್ಮರ ಜಯಂತಿಗಳನ್ನು ಸರ್ಕಾರದಿಂದ ಆಚರಣೆ ಮಾಡುವುದು ಅವರ ತತ್ವ ಸಿದ್ದಾಂತ, ಸಾಧನೆಗಳನ್ನು ಮಕ್ಕಳಿಗೆ ತಿಳಿಸಿ ಮುಂದಿನ ಪೀಳಿಗೆಗೆ ತಲುಪಲುಪಿಸುವ ಉದ್ದೇಶವಿದೆ. ಧೀರ ಸ್ವಾತಂತ್ರ ಹೋರಾಟ ಗಾರ್ತಿಯನ್ನು ಒಂದು ಸಮಾಜಕ್ಕೆ ಸೀಮಿತ ಮಾಡದೆ, ರಾಜ್ಯ, ದೇಶವಷ್ಟೇ ಅಲ್ಲದೆ ವಿಶ್ವದಲ್ಲಿಯೂ ಭಾರತ ದೇಶದ ಮಹಿಳೆಯರ ಸಾಧನೆ ತಿಳಿಯುವಂತಾಗಬೇಕು ಎಂದು ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರ ಮೆರವಣಿಗೆ : ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಪುಷ್ಪ ನಮನಸಲ್ಲಿಸಿ, ಕಿತ್ತೂರು ರಾಣಿ ಚನ್ನಮ್ಮ ಪ್ರೌಢಶಾಲೆಯಿಂದ ಜಂಬುನಾಥ ರಸ್ತೆ, ಬಳ್ಳಾರಿ ರಸ್ತೆ ಮತ್ತು ವಡಕರಾಯ ದೇವಸ್ಥಾನದ ವೃತ್ತದ ಮೂಲಕ ವಿವಿಧ ಕಲಾ ತಂಡಗಳು, ಎನ್ಸಿಸಿ, ಎನ್ಎಸ್ಎಸ್ ಮತ್ತು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡ ಮೆರವಣಿಗೆ ಕೊಟ್ಟೂರುಸ್ವಾಮಿ ಮಠ ತಲುಪಿತು.
ಕಾರ್ಯಕ್ರಮದಲ್ಲಿ ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದ ಬಸವಲಿಂಗ ಜಗದ್ಗುರು ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು., ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್.ಎಫ್ ಇಮಾಮ್ ನಿಯಾಜಿ, ಹೊಸಪೇಟೆ ತಾಹಶಿಲ್ದಾರರಾದ ಶೃತಿ ಎಂ.ಎ., ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ.ಕೆ ರಂಗಣ್ಣನವರ ಮತ್ತು ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
