ರಮಾಬಾಯಿ ಅಂಬೇಡ್ಕರ್ ನಮೆಲ್ಲರಿಗೂ ಸ್ಪೂರ್ತಿ
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 13- ಡಾ.ಬಿ.ಆರ್.ಅಂಬೇಡ್ಕರ್ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ, ರಮಾಬಾಯಿ ಅಂಬೇಡ್ಕರ್ ನಮೆಲ್ಲರಿಗೂ ಸ್ಪೂರ್ತಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.

ನಗರದ ಸಾಹಿತ್ಯಭವನದಲ್ಲಿ ಶನಿವಾರ ಸಂಜೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ವತಿಯಿಂದ ನಡೆದ ಬಾಗಲಕೋಟೆಯ ಸಂಗಮ ಕಲಾ ತಂಡದ ‘ರಮಾಭಾಯಿ ಅಂಬೇಡ್ಕರ್’ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಜೀವನದಲ್ಲಿ ರಮಾಬಾಯಿಯವರ ಪಾತ್ರ ಬಹುದೊಡ್ಡದಾಗಿದ್ದು, ರಮಾಬಾಯಿ ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿರುವುದಕ್ಕೆ ಅಂಬೇಡ್ಕರವರು ಸಾಧನೆ ಮಾಡಲು ಸಾಧ್ಯವಾಯಿತು. ದೇಶದ ಆಡಳಿತದ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಇರಬೇಕು. ಬಹುತ್ವ ಭಾರತದಲ್ಲಿ ಎಲ್ಲಾ ವರ್ಗದ ಜನರಿಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಯೋಚಿಸಿ, ಅಂಬೇಡ್ಕರ್ ಅವರು ಶ್ರೇಷ್ಠವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಅನೇಕ ಕಷ್ಟ ಕೋಟಲೆಗಳು, ಅವಮಾನಗಳನ್ನು ಎದುರಿಸಿ, ಉನ್ನತ ಸ್ಥಾನ ತಲುಪಿದ ವ್ಯಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್. ಅವರು ಕೊಟ್ಟ ಸಂವಿಧಾನದಿಂದಲೇ ನಾನು ವಿಧಾನ ಪರಿಷತ್ತಿನ ಸದಸ್ಯೆಯಾಗಿದ್ದೇನೆ ಎಂದರು.
ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಅಂಬೇಡ್ಕರ್ ಎಲ್ಲಾ ವರ್ಗದ ಜನರ ಹಿತವನ್ನು ಬಯಸಿದವರು. ಮಹಿಳೆಯರು, ಶೋಷಿತರು, ಕಾರ್ಮಿಕರು ಅನುಭವಿಸುವ ನೋವನ್ನು ಅರ್ಥೈಸಿಕೊಂಡು, ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾ ಮಾನವತಾವಾದಿ ಅಂಬೇಡ್ಕರ್ ಆಗಿದ್ದಾರೆ. ಅದಕ್ಕಾಗಿ ರಮಾ ಬಾಯಿಯವರ ತ್ಯಾಗವು ಬಹುದೊಡ್ಡದಾಗಿದೆ ಎಂದು ಸ್ಮರಿಸಿದರು.
ದದೇಗಲ್ ನ ಸಿದ್ಧಾರೂಢ ಮಠದ ಆತ್ಮಾನಂದ ಭಾರತಿ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ನಾಟಕದಲ್ಲಿರುವ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ, ಬದುಕು ಸಾರ್ಥಕ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರೇಕ್ಷಕರು ಗಮನ ಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ್ ಮ್ಯಾಗಳಮನಿ ಮಾತನಾಡಿ, ಸದಭಿರುಚಿಯ, ಆದರ್ಶ ಮೌಲ್ಯವುಳ್ಳ ನಾಟಕಗಳು ಸಮಾಜವನ್ನು ಬದಲಿಸುವ ಶಕ್ತಿಯನ್ನು ಹೊಂದಿವೆ. ಹೀಗಾಗಿ ಈ ನಾಟಕವನ್ನು ಆಯೋಜಿಸಿದ್ದೇವೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ರಮಾಬಾಯಿಯವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವೇದಿಕೆ ಮೇಲೆ ಹನುಮಂತಪ್ಪ ಛಲವಾದಿ, ಕ್ಷೇತ್ರ ಶಿಕ್ಷಣಾ ಧಿಕಾರಿ ಪ್ರಕಾಶ್ ತಗಡಿನ ಮನಿ, ಪ್ರಾಥಮಿಕ ಶಾಲಾ ಶಿಕ್ಷಕರ
ಸಂಘದ ಅಧ್ಯಕ್ಷ ಹೋಳಿಬಸಯ್ಯ, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕಲ್ಲಣ್ಣವರ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಚಾಂದಪಾಷಾ ಕಿಲೇದಾರ, ಗುರುರಾಜ್ ಕುಲಕರ್ಣಿ, ಲಾಯಕ್ಕಲಿ, ಮಾಜಿದ, ಯುವರಾಜ್ ಬಡಿಗೇರ್, ಬಾಳಪ್ಪ ಕಾಳೆ, ನಫೀಸ್ ಖಾನ್, ಹನುಮಂತ ಕುರಿ, ಅಣ್ಣಪ್ಪ ಹಳ್ಳಿ ಇದ್ದರು.
——————————
ಸಂಗಮ ಕಲಾ ತಂಡದಿಂದ ಮನೋಜ್ಞ ಅಭಿನಯ
ಸಂಗಮ ಕಲಾ ತಂಡ ಬಾಗಲಕೋಟೆ ನಾಟಕ ಪ್ರದರ್ಶಿಸಿದ್ದು, ನಿರ್ದೇಶನ ಶ್ರೀಕಾಂತ್ ನವಲ್ಗರಿ, ಸಂಗೀತ ಮಹೇಶ್ ಹುಂಡೇಕಾರ, ಬೆಳಕು ವಿನ್ಯಾಸ ರಾಹುಲ್ ಪಿ., ನಟರಾಗಿ ಅಕ್ಕಮ್ಮ, ಅಂಬಿಕಾ, ಶಿವು, ರಾಜು ಮನೋಜ್ಞವಾಗಿ ರಂಗದ ಮೇಲೆ ಅಭಿನಯಿಸಿದರು. ಐದು ಮಹಿಳಾ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಚಿತ್ರಕಲಾ ಶಿಕ್ಷಕರಾದ ತಿರುಪತಿ ಶಿವನಗುತ್ತಿ ಅವರ ‘ಅಣು ಅಣುವಿನಲ್ಲೂ ಅಂಬೇಡ್ಕರ್’ ಶೀರ್ಷಿಕೆಯ ಚಿತ್ರಕಲಾ ಪ್ರದರ್ಶನ ಜನಮನ ಸೆಳೆಯಿತು.
