ಅಮ್ಮಾ ನನ್ನನ್ನು ಯಾಕೆ ಕೊಂದೆ..??
ತಾಯಿ ಎಂದರೆ ಹರುಷವಲ್ಲ ದ್ವೇಷ ..
ಗಂಡನ ಮೇಲಿನ ಸಿಟ್ಟಿಗೆ ಹೆತ್ತ ಮಗುವನ್ನೇ ಕೊಂದ ಮಾರಿ
ಸಂತೋಷ ದೇಶಪಾಂಡೆ
ಕರುನಾಡ ಬೆಳಗು ಸುದ್ದಿ ಕೊಪ್ಪಳ
“ಅಮ್ಮಾ ಎಂದರೆ ಏನೋ ಹರುಷವೋ.. ನಮ್ಮ ಬಾಳಿಗೆ ಅವಳೇ ದೈವವೋ…” ಇದು ತಾಯಿ ಮಹತ್ವ ತಿಳಿಸುವ ಕನ್ನಡದ ಮಧುರ ಗೀತೆ. ಜಗತ್ತಿನಲ್ಲಿ ಕೆಟ್ಟ ಮಗ ಇರಲು ಸಾಧ್ಯ ಹೊರತು, ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬುದು ಹಿರಿಯರ ನುಡಿ. ಆದರೆ, ತಾಯಿಯೇ ತನ್ನ ಮಗುವನ್ನು ಕೊಂದು ಅಮಾನುಷವಾಗಿ ಬ್ಯಾಗ್ನಲ್ಲಿ ಹಾಕಿಕೊಂಡು ಸಾಗಿಸಿದ ಘಟನೆ ಇಡೀ ಮಾತೃ ಭಾವನೆಯನ್ನೇ ಬುಡಮೇಲು ಮಾಡಿದೆ.ಇಂಥದ್ದೊಂದು ಟನೆ ಗೋವಾದಲ್ಲಿ ನಡೆದಿದ್ದು, ಮಗುವನ್ನು ಕೊಂದ ಕೊಲೆಪಾತಕಿ ತಾಯಿ ಚಿತ್ರದುರ್ಗದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಏನೂ ಅರಿಯದ ಹಸುಳೆ ಕಂದ ಅಮ್ಮಾ… ಅಮ್ಮಾ… ಎಂದು ಗೋಳಿಡುತ್ತಿದ್ದರೂ ಮನ ಕರಗದ ಕಲ್ಲು ಹೃದಯದ ಮಹಿಳೆ ಕೈಗೆ ಸಿಕ್ಕಿ ಭವಿಷ್ಯ ಅರಳುವ ಮುನ್ನವೇ ಬಾಡಿ ಹೋದ ಹೂವಿನಂತೆ ಉಸಿರು ಚೆಲ್ಲಿದೆ. ಮುಗ್ಧ ಮಗುವಿನ ಆಕ್ರಂದನ, ಅಮ್ಮ ತನ್ನನ್ನು ಏಕೆ ಕೊಂದಳು ಎಂಬ ಬಿಸಿ ಉಸಿರಿನ ಪ್ರಶ್ನೆಗೆ ನಾಗರಿಕ ಸಮಾಜವೇ ಉತ್ತರಿಸಲು ಸಾಧ್ಯವಾಗದೇ ತಲೆ ತಗ್ಗಿಸುವಂತಾಗಿದೆ.
ತನ್ನ ಒಡಲು ತುಂಬಿ ತಾಯಿ ಎಂಬ ಪಟ್ಟವನ್ನು ಕರುಣಿಸಿದ ಮಗುವನ್ನು ಕೊಂದ ಮಹಿಳೆ ಬೆಂಗಳೂರಿನ ಕೃತಕ ಬುದ್ಧಿಮತ್ತೆ ಸ್ಟಾರ್ಟ್ ಅಪ್ ಕಂಪನಿಯ ಸಿಇಒ ಸುಚನಾ ಸೇರ್ ಎಂಬಾಕೆ.
ಉತ್ತರ ಗೋವಾದ ಕ್ಯಾಂಡೋಲಿಮ್ ಅಪಾರ್ಟ್ ಮೆಂಟ್ ನಲ್ಲಿ ತನ್ನ ಮಗನನ್ನು ಹತ್ಯೆಗೈದು ಬ್ಯಾಗ್ನಲ್ಲಿ ತುಂಬಿಕೊಂಡು ಬೆಂಗಳೂರಿಗೆ ಸಾಗುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಸೋಲ್ ಬನ್ಯಾನ್ ಗ್ರಾಂಡೆ ಅಪಾರ್ಟ್ ಮೆಂಟ್ ಗೆ ಸುಚನಾ ಸೇರ್ ತನ್ನ ಮಗನೊಂದಿಗೆ ಶನಿವಾರ ಚೆಕ್ ಇನ್ ಆಗಿದ್ದಳು.
ಸೋಮವಾರ ಸೇರ್ ರೂಂ ಚೆಕ್ ಔಟ್ ಮಾಡಿದ್ದು, ಸಿಬಂದಿ ಬಳಿ ಬೆಂಗಳೂರಿಗೆ ತೆರಳಲು ಕಾರು ಬುಕ್ ಮಾಡಲು ಹೇಳಿದ್ದಳು. ಕಾರು ಬೇಡ, ವಿಮಾನದಲ್ಲಿ ತೆರಳಿ ಎಂಬ ಸಿಬಂದಿ ಸಲಹೆ ನೀಡಿದರೂ ತಿರಸ್ಕರಿಸಿದ್ದಾಳೆ. ಈ ಸಂದರ್ಭದಲ್ಲಿ ಸುಚನಾ ಸೇರ್ ಜತೆ ಮಗು ಇಲ್ಲದಿರುವುದನ್ನು ಅಪಾರ್ಟ್ ಮೆಂಟ್ ಸಿಬಂದಿ ಗಮನಿಸಿದ್ದರು.

ಆಕೆ ಕಾರಿನಲ್ಲಿ ಹೊರಟು ಹೋದ ನಂತರ ಹೌಸ್ ಕೀಪರ್ ರೂಂ ಅನ್ನು ಪರಿಶೀಲಿಸಿದಾಗ ರಕ್ತದ ಕಲೆಗಳು ಬಿದ್ದಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಕಾರು ಚಾಲಕನಿಗೆ ಕರೆ ಮಾಡಿ, ಸೇರ್ ಬಳಿ ಮಗು ಎಲ್ಲಿ ಎಂದು ಪ್ರಶ್ನಿಸಿದ್ದರು. ಆಗ ಆಕೆ ಆತನನ್ನು ಗೆಳೆಯನ ಜತೆ ಬಿಟ್ಟಿರುವುದಾಗಿ ಹೇಳಿ, ವಿಳಾಸ ಕೊಟ್ಟಿದ್ದಳು. ಪೊಲೀಸರು ವಿಳಾಸ ಹುಡುಕಿದಾಗ ಅದು ನಕಲಿ ಎಂದು ತಿಳಿಯಿತು.
ಗೋವಾ ಪೊಲೀಸರು ಮತ್ತೆ ಕಾರು ಚಾಲಕನಿಗೆ ಕರೆ ಮಾಡಿದ್ದರು. ಆದರೆ ಈ ಬಾರಿ ಅವರು ಸುಚನಾಳಿಗೆ ಅರ್ಥವಾಗಬಾರದು ಎಂದು ಚಾಲಕನ ಬಳಿ ಕೊಂಕಣಿ ಭಾಷೆಯಲ್ಲಿ ಸಂಭಾಷಣೆ ನಡೆಸಿ, ಕಾರನ್ನು ಸಮೀಪದ ಚಿತ್ರದುರ್ಗ ಠಾಣೆಗೆ ಕೊಂಡೊಯ್ಯುವಂತೆ ಸೂಚನೆ ನೀಡಿದ್ದರು ಎಂದು ತಿಳಿದು ಬಂದಿದೆ.
ನಂತರ ಚಾಲಕ ಕಾರನ್ನು ನೇರವಾಗಿ ಚಿತ್ರದುರ್ಗ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದ. ಬಳಿಕ ಪೊಲೀಸರು ಸುಚನಾ ಸೇರ್ಳನ್ನು ಬಂಧಿಸಿದ್ದರು. ಕಾರಿನೊಳಗೆ ಇದ್ದ ಬ್ಯಾಗ್ ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಡೆವಲಪರ್, ಸೇರ್ ಪತಿ ವೆಂಕಟ ರಾಮನ್ ಚಿತ್ರದುರ್ಗಕ್ಕೆ ಆಗಮಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಡನ ಮೇಲಿನ ದ್ವೇಷಕ್ಕೆ ಮಗು ಕೊಂದಳು : ಸುಚನಾ ಸೇರ್ಳನ್ನು ಹೆಚ್ಚಿನ ತನಿಖೆಗಾಗಿ ಗೋವಾಕ್ಕೆ ಕರೆ ತರಲಾಗಿದೆ. ತನ್ನ ಮಾಜಿ ಪತಿ ಮಗುವಿನ ಜತೆ ಮಾತನಾಡಬಾರದು ಎಂಬ ಕಾರಣಕ್ಕಾಗಿ ಸುಚನಾ ಸೇರ್ ಹತ್ಯೆಗೈದಿರುವುದಾಗಿ ತಿಳಿದು ಬಂದಿದೆ. 2010ರಲ್ಲಿ ವಿವಾಹವಾಗಿದ್ದ ದಂಪತಿಗೆ 2019ರಲ್ಲಿ ಗಂಡು ಮಗು ಜನಿಸಿತ್ತು. ಇಬ್ಬರ ನಡುವಿನ ವಿರಸದಿಂದಾಗಿ 2020ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ಪ್ರತಿ ಭಾನುವಾರ ಮಗುವನ್ನು ಭೇಟಿಯಾಗಲು ತಂದೆಗೆ ಕೋರ್ಟ್ ಅನುಮತಿ ನೀಡಿತ್ತ ಎನ್ನಲಾಗಿದೆ. ಇದರಿಂದ ಅಸಮಾಧಾನಿತಳಾಗಿದ್ದ ಸುಚನಾ ಮಗು ಕೊಂದು ಸಿಕ್ಕಿಬಿದ್ದಿದ್ದಾಳೆ.
