IMG-20240206-WA0013

ಸಂವಿಧಾನ ಜಾಗೃತಿ ಜಾಥಾಗೆ ಅದ್ದೂರಿಯಾಗಿ ಸ್ವಾಗತಿಸಿದ ಶಾಸಕ ಬಿ.ಎಂ.ನಾಗರಾಜ

ಕರುನಾಡು ಬೆಳಗು ಸುದ್ದಿ 

ಬಳ್ಳಾರಿ,6- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಮಗಳಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ರಥವು ಸೋಮವಾರದಂದು ಸಿರುಗುಪ್ಪ ತಾಲ್ಲೂಕಿನ ಬೀರಹಳ್ಳಿ, ಹಚ್ಚೊಳ್ಳಿ, ಕುಡದರಹಾಳ್, ಬಾಗೇವಾಡಿ ಹಾಗೂ ದೇಶನೂರು ಗ್ರಾಮ ಪಂಚಾಯಿತಿಗಳ  ವ್ಯಾಪ್ತಿಯಲ್ಲಿ ಸಂಚರಿಸಿದ್ದು, ಸಿರುಗುಪ್ಪ ತಾಲ್ಲೂಕಿನ ಬಾಗೇವಾಡಿ ಗ್ರಾಮದಲ್ಲಿ ಶಾಸಕ ಬಿ.ಎಂ.ನಾಗರಾಜ ಅವರು ಸಂವಿಧಾನ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಬಾಗೇವಾಡಿ ಗ್ರಾಮದಲ್ಲಿ ದಾರಿಯುದ್ದಕ್ಕೂ ಜಾಥಾದ ಜೊತೆಗೆ ಹೆಜ್ಜೆ ಹಾಕಿ ಗ್ರಾಮಸ್ಥರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದರು.

ಜಾಥಾದ ಮಾರ್ಗದಲ್ಲಿ ಪ್ರತೀ ಹಳ್ಳಿಗಳಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಕಾಯಿ-ಕರ್ಪೂರ-ತೆಂಗಿನ ಕಾಯಿಗಳಿಂದ ಭಕ್ತಿಪೂರ್ವಕವಾಗಿ ಪೂಜಿಸುವುದರೊಂದಿಗೆ ಜಾಥಾಕ್ಕೆ ಸ್ವಾಗತ ಕೋರಿ ಭಾರತದ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕಳಶ ಹಿಡಿದ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಜಾಥಾಗೆ ಮೆರಗು ನೀಡಿದರು.

ಹಚ್ಚೊಳ್ಳಿ ಹಾಗೂ ಕುಡದರಹಾಳ್ ಗ್ರಾಮಗಳಲ್ಲಿ ಅದ್ದೂರಿ ಮೆರವಣಿಗೆ : ಹಚ್ಚೊಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ವಿವಿಧ ನಾಯಕರ ವೇಷ ಭೂಷಣಗಳೊಂದಿಗೆ ಭಾಗವಹಿಸಿ, ವಿದ್ಯಾರ್ಥಿಗಳಿಂದ ಪ್ರಸ್ತಾವನೆಯನ್ನು ಓದಿಸಿ,  ಒಂದು ಕಿ.ಮೀ ವರೆಗೆ ಪಥ ಸಂಚಲನ ಮಾಡುವ ಮೂಲಕ ಜಾಥಾದಲ್ಲಿ ಪಾಲ್ಗೊಂಡಿದ್ದು ಉತ್ಸಾಹ ಇಮ್ಮಡಿಸಿತು. ಹಚ್ಚೊಳ್ಳಿ ಗ್ರಾಮದ ವಿವಿಧ ಶಾಲೆಗಳ 25-30 ವಿದ್ಯಾರ್ಥಿಗಳು ವಿವಿಧ ವೇಷ ಭೂಷಣಗಳನ್ನು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

Leave a Reply

Your email address will not be published. Required fields are marked *

error: Content is protected !!