ಯುವಕ ವೃಂದದ 30 ಅಭ್ಯರ್ಥಿಗಳನ್ನು ಗೆಲ್ಲಿಸಿ, ಉತ್ತಮ ಆಡಳಿತಕ್ಕೆ, ಆರ್ಥಿಕ ಶಿಸ್ತಿಗೆ ಅವಕಾಶ ನೀಡಿರಿ : ಯುವಕ ವೃಂದ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,21- ವೀರಶೈವ ವಿದ್ಯಾವರ್ಧಕ ಸಂಘದ ನೂತನ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ `ಯುವಕ ವೃಂದ’ದ ಎಲ್ಲಾ 30 ಅಭ್ಯರ್ಥಿಗಳಿಗೆ ಮತ ನೀಡಿ ಸ್ಪಷ್ಟ ಬಹುಮತ ನೀಡಬೇಕು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್. ರಾಮನಗೌಡ ಅವರು ಮನವಿ ಮಾಡಿದ್ದಾರೆ.
ಶ್ರೀ ಸನಾತನ ವೀರಶೈವ ಗುರುಕುಲ ಮಠದಲ್ಲಿ ಬುಧವಾರ ನಡೆದ ಯುವಕವೃಂದದ ಬೆಂಬಲಿಗರು, ಹಿತೈಷಿಗಳು, ಅಭಿಮಾನಿಗಳು ಮತ್ತು ದಾನಿಗಳು, ಆಜೀವ ಸದಸ್ಯರು ಹಾಗೂ ಪೋಷಕ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಭ್ಯರ್ಥಿ ಡಾ. ಭಾಗ್ಯಲಕ್ಷ್ಮಿ ಅವರು, ಆಜೀವ ಸದಸ್ಯ ಮತದಾರರು `ಯುವಕ ವೃಂದ’ದ ಎಲ್ಲಾ ಅಭ್ಯರ್ಥಿಗಳಿಗೆ ಮತ ನೀಡಿ, ಎಲ್ಲಾ 30 ಅಭ್ಯರ್ಥಿಗಳನ್ನು ಗೆಲ್ಲಿಸಿ ಉತ್ತಮ, ಪಾರದರ್ಶಕ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಆಶೀರ್ವಾದ ಮಾಡಿರಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ಡಾ. ಕೆ. ಮಹಾಂತೇಶ್ ಅವರು, ಹಾಲಿ ಅಧ್ಯಕ್ಷ ಆರ್. ರಾಮನಗೌಡರ ನೇತೃತ್ವದಲ್ಲಿ ಸಂಘದ ಕೋಟ್ಯಾಂತರ ರೂಪಾಯಿ ಮೌಲ್ಯದ 14 ಎಕರೆ ಭೂಮಿಯನ್ನು ಸಂಪೂರ್ಣವಾಗಿ ಸಂಘದ ಸ್ವಾಧೀನಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವ ಮೂಲಕ ಸಂಸ್ಥೆಯಲ್ಲಿ ಆರ್ಥಿಕ ಶಿಸ್ತು ಮತ್ತು ಶೈಕ್ಷಣಿಕ ಸುಧಾರಣೆಗಾಗಿ ಪ್ರಯತ್ನ ಮಾಡುತ್ತೇವೆ. ಕಾರಣ ಆಜೀವ ಸದಸ್ಯರು `ಯುವಕ ವೃಂದ’ಕ್ಕೆ ಸ್ಪಷ್ಟ ಬಹುಮತ ನೀಡಬೇಕು ಎಂದು ಕೋರಿದರು.
ಮುಖಂಡರಾದ ಎಚ್. ಹಂಪನಗೌಡ, ಅಲ್ಲಂ ಬಸವರಾಜ್, ಹಾವಿನಹಾಳ್ ಶರಣ ಬಸ್ಸಪ್ಪ, ಎಸ್.ಎಂ. ಷಡಕ್ಷರಯ್ಯ, ಡಾ. ಎಂ.ಜೆ. ವೆಂಕಟ್ ಮಹಿಪಾಲ್ ಮತ್ತು ಕಣ್ಣಿ ರಾಜಶೇಖರ್ ಅವರು, `ಯುವಕ ವೃಂದ’ವನ್ನು ಕಟ್ಟಿ ಬೆಳೆಸಿದ ಬಗ್ಗೆ, ಹೊಸ ಕೋರ್ಸ್‍ಗಳು, ಹೊಸ ಕಾಲೇಜುಗಳನ್ನು ಪ್ರಾರಂಭಿಸಿದ ಕುರಿತು, ತಂಡ ಸದಾಕಾಲ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ರಿಯಾಶೀಲವಾಗಿ – ಸೃಜಲಶೀಲವಾಗಿ ಕಾರ್ಯತತ್ಪರವಾಗಿರುವ ಕುರಿತು ವಿವರಿಸಿ, `ಯುವಕ ವೃಂದ’ ಕ್ಕೆ ಮತ ಚಲಾಯಿಸಿ, ಸ್ಪಷ್ಟ ಬಹುಮತವನ್ನು ನೀಡಬೇಕು ಎಂದು ಕೋರಿದರು.
