ಉದ್ಯೋಗಿಗಳ 25 ಲಕ್ಷ ಕೋಟಿ ಸಾಲಮನ್ನಾ ಮಾಡದ ಮೋದಿ : ಸಿಪಿಎಂ ಆರೋಪ
ಕರುನಾಡ ಬೆಳಗು ಸುದ್ದಿ
ವಿಜಯನಗರ,9 – ಅಧಿಕಾರಕ್ಕೆ ಬರುವ ಮುನ್ನ ಜನಸಾಮಾನ್ಯರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ನೂರಾರು ಭರವಸೆ ನೀಡಿದ ಪ್ರಧಾನಿ ಮೋದಿ, 100 ಮಂದಿ ಬಂಡವಾಳಶಾಯಿಗಳ 25 ಲಕ್ಷ ಕೋಟಿ ಸಾಲಮನ್ನಾ ಮಾಡಿ, ಜನಸಾಮಾನ್ಯರ ಒಂದೇ ಒಂದು ಭರವಸೆ ಈಡೇರಿಸದೇ ದೇಶದ ಜನತೆಗೆ ದ್ರೋಹವೆಸಗಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಆರೋಪಿಸಿದರು.
ನಗರದ ಶ್ರಮಿಕ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಜನಸಾಮಾನ್ಯರ ಖಾತೆಗೆ ಹಣ, ವರ್ಷಕ್ಕೆ 2 ಕೋಟಿ ಉದ್ಯೋಗ, ರೈತರಿಗೆ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿ ಒಂದೇ ಒಂದು ಭರವಸೆ ಈಡೇರಿಸದೇ ದೇಶದ ಜನತೆಗೆ ದ್ರೋಹವೆಸಗಿದ್ದಾರೆ. ಬಡವರ ತೆರಿಗೆ ದುಡ್ಡಿನಲ್ಲಿ100 ಮಂದಿ ಬಂಡವಾಳಶಾಯಿಗಳ 25 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲಮನ್ನಾ, ಬರ ಪರಿಹಾರ ನೀಡಲು ಇವರ ಬಳಿ ದುಡ್ಡಿಲ್ಲ ಎಂದು ಕುಟುಕಿದರು.
ಬೆಲೆ ಏರಿಕೆ ನಿಯಂತ್ರಿಸದೇ, ಬಡವರಿಗೆ ನಿವೇಶನ, ಮನೆ ನಿರ್ಮಿಸಿ ಕೊಡಲು ಭೂಮಿ ನೀಡದೇ, ಪತಂಜಲಿ ಸಂಸ್ಥೆಗೆ 5 ಲಕ್ಷ ಎಕರೆ ಜಮೀನು ತಾಳೆ ಮರ ಬೆಳೆಯಲು ನೀಡಿದೆ. ಇವರಿಗೆ ದೇಶದ ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಉದ್ಯಮಿಗಳಿಗಾಗಿ ಸರ್ಕಾರ ನಡೆಸುತ್ತಿದೆ. ಅದಕ್ಕಾಗಿ ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಿದೆ. ಇದರ ಬಗ್ಗೆ ದೇಶದ ಜನ ಜಾಗೃತಿವಹಿಸಬೇಕು ಎಂದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಬಡವರ, ಜನಸಾಮಾನ್ಯರ, ಕಾರ್ಮಿಕರ, ರೈತರ ತೆರಿಗೆ ದುಡ್ಡನ್ನು ಅವರಿಗೆ ನೀಡದೇ, ಉದ್ಯಮಿಗಳಿಗೆ ನೀಡುವ ಭ್ರಷ್ಟ ಕೇಂದ್ರದ ಬಿಜೆಪಿ ಸರ್ಕಾರವನ್ನು ಮತದಾರರು ಕಿತ್ತೆಸೆಯಬೇಕು. ಜನಸಾಮಾನ್ಯರ ಹಿತ ಕಾಯುವ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಆರ್.ಭಾಸ್ಕರರೆಡ್ಡಿ, ಕೆ.ನಾಗರತ್ನಮ್ಮ, ಸ್ವಪ್ನಾ, ವಿ.ಸ್ವಾಮಿ ಇತರರಿದ್ದರು.
