ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ರಾಜಮನೆತನಗಳ ತವರೂರು ಆನೆಗೊಂದಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ,10- ತುಂಗಭದ್ರಾ ತಟದ ನೆಲೆವೀಡು ಸಾಂಸ್ಕೃತಿಕ ಪುರಾಣ ಪ್ರಸಿದ್ಧ ರಾಮಾಯಣ ಕಾಲದ ಗತವೈಭವ ಸಾರುವ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ (ಕಿಷ್ಕಿಂದಾ ನಾಡು) ವಿಜಯನಗರ ಸಾಮ್ರಾಜ್ಯದ ಅಳಿಯ ರಾಜರಾಯರ ಅರವೀಡು ವಂಶದ ಆನೆಗೊಂದಿ ಭಾಗದಲ್ಲಿ ಸಂಸ್ಥಾನವನ್ನು ನಡೆಸಿದ ಕುರುಹುಗುಳು ಅನೇಕ ಇವೆ.
ಈ ಆನೆಗೊಂದಿಯ ಇತಿಹಾಸದಲ್ಲಿ ಇಡಿ ಸಂಸ್ಥಾನ ಮೂಲ ದೇವತೆಯಾದ ವಾಲಿಕಿಲ್ಲಾ ದುರ್ಗಾದೇವಿಗೆ ನಮಿಸಿಯೇ ಪ್ರತಿಯೊಂದು ಕಾರ್ಯಕೈಂಕರ್ಯಗಳನ್ನು ಸಂಸ್ಥಾನದ ದೊರೆಗಳು ಮಾಡುತ್ತಿದ್ದದ್ದು ಐತಿಹ್ಯವಾಗಿದೆ.
ವೆಂಕಟ ದೇವರಾಯಲು, ತಿರುಮಲ ದೇವರಾಯಲು, ದರ್ಬಾರು ಕೃಷ್ಣದೇವರಾಯಲು, ಶ್ರೀರಂಗದೇವರಾಯಲು, ಅಚ್ಯುತ ದೇವರಾಯಲು, ಶ್ರೀರಾಮ ದೇವರಾಯಲು, ನರಸಿಂಹ ದೇವರಾಯಲು ಅನೇಕ ಆನೆಗೊಂದಿಯ ದೊರೆಗಳು ಸಂಸ್ಥಾನದ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದನ್ನು ಮರೆಯುವಂತಿಲ್ಲ.
ದರ್ಬಾರು ಕೃಷ್ಣದೇವರಾಯಲು ಆನೆಗೊಂದಿ ಸಂಸ್ಥಾನದ ಕೊನೆಯ ದೊರೆಯಾಗಿ ಆಳಿದ ಅನೇಕ ಇತಿಹಾಸ ದಾಖಲೆಗಳು ಇವತ್ತಿಗೂ ದಾಖಲೆಯಾಗಿವೆ.
ತಿರುಮಲ ದೇವರಾಯಲು ಗಂಗಾವತಿ ಕ್ಷೇತ್ರದ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಹಾಗೂ ರಾಜಾ ಶ್ರೀರಂಗದೇವರಾಯಲುರವರು ಮೂರು ಬಾರಿ ಗಂಗಾವತಿ ಕ್ಷೇತ್ರದ ಶಾಸಕರಾಗಿ ಎರಡು ಬಾರಿ ಕನಕಗಿರಿ ಕ್ಷೇತ್ರದ ಶಾಸಕರಾಗಿ ಹಾಗೂ ಸಚಿವರಾಗಿಯೂ ಆಗಿನ ಕಾಲದಲ್ಲಿ ಅಭಿವೃದ್ಧಿಯ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆಂದರೆ ಅತಿಶಯೋಕ್ತಿಯಾಗಲಾರದು.
ರಾಜಾ ಶ್ರೀರಂಗದೇವರಾಯಲು ಶಾಸಕರಾಗಿದ್ದಾಗ ಆನೆಗೊಂದಿ ಉತ್ಸವಕ್ಕೆ ಚಾಲನೆ ನೀಡಿದ್ದನ್ನು ಮರೆಯುವಂತಿಲ್ಲ. ಅಂದಿನ ಸಂಸದರಾಗಿದ್ದ ಹೆಚ್.ಜಿ.ರಾಮುಲು ಮತ್ತು ಆಗಿನ ಕಾಲದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸ್ಕೃತಿ ರಾಯಭಾರಿ ಎಂದೇ ಬಿಂಬಿತರಾಗಿದ್ದ ಎಂ.ಪಿ.ಪ್ರಕಾಶರು ಹಂಪಿ ಉತ್ಸವ ಮತ್ತು ಆನೆಗೊಂದಿ ಉತ್ಸವವನ್ನು ಒಂದೇ ಬಾರಿ ಪ್ರಾರಂಭಿಸಿ ಸಾಂಸ್ಕೃತಿಕ ನೆಲೆವಿಡುಗಳಿಗೆ ಕೊಡುಗೆ ಕೊಟ್ಟಿದ್ದನ್ನು ಮರೆಯವಂತಿಲ್ಲ.
ಆನೆಗೊಂದಿ ಭಾಗದಲ್ಲಿ ವಾಲಿ ಕಿಲ್ಲಾದ ದುರ್ಗಾದೇವಸ್ಥಾನ, ನವವೃಂದಾವನ ಗಡ್ಡೆ, ಋಷಿಮುಖ ಪರ್ವತ, ಪುರಾಣಪ್ರಸಿದ್ಧ ರಾಮಾಯಣ ಕಾಲದ ಅಂಜನಾದ್ರಿ ದೇವಾಲಯ, ಚಿಂತಾಮಣಿ, ಹುಚ್ಚಪ್ಪಯ್ಯನ ಮಂಟಪ, ಅನೇಕ ಸಾಂಸ್ಕೃತಿಕ ನೆಲೆಯನ್ನು ಪ್ರತಿಬಿಂಬಿಸುವ ಕುರುಹುಗಳು ಪ್ರತಿಯೊಬ್ಬರನ್ನು ಕೈಬೀಸಿ ಕರೆಯುವಂತಿದೆ.
ಪ್ರಸ್ತುತ ಗಂಗಾವತಿ ಜನಪ್ರಿಯ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಆನೆಗೊಂದಿ ಉತ್ಸವ ಆಚರಿಸುವದಕ್ಕೆ ಪುಷ್ಠಿಯನ್ನು ನೀಡಿ ಮುಖ್ಯ ವೇದಿಕೆಗೆ ರಾಜಾ ಶ್ರೀರಂಗದೇವರಾಯಲು ವೇದಿಕೆಯನ್ನಾಗಿಸಿ ರಾಜಮನೆತನದವರಿಗೆ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಇನ್ನು ರಾಮಾಯಣ ಕಾಲದ ಪರಮ ಭಕ್ತೆ ಶಬರಿಯ ಹೆಸರಿನಲ್ಲಿ ಇನ್ನೊಂದು ವೇದಿಕೆ ಮಾಡಿರುವುದು ಸಾಂಸ್ಕೃತಿಕ ಇತಿಹಾಸವನ್ನೇ ಪ್ರತಿಬಿಂಬಿಸುವಂತಿದೆ.

