ತಾಲೂಕ ಪಂಚಾಯತಿಯಲ್ಲಿ ಅದ್ದೂರಿಯಾಗಿ ಜರುಗಿದ ವಿಶ್ವ ಮಹಿಳಾ ದಿನಾಚರಣೆ
ನೀರು, ಮಣ್ಣು ಸಂರಕ್ಷಣೆಯಲ್ಲಿ ನಿರತರಾದ ಮಹಿಳಾ ಸಾಧಕರಿಗೆ ಗೌರವ ಸನ್ಮಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,12- ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿ ಮೂಂಚುಣಿಯಲ್ಲಿರುವದು ದೇಶದ ಅಭಿವೃದ್ದಿಗೆ ಪೂರಕವಾಗಿದೆ ಎಂದು ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಕರೆ ನೀಡಿದರು.
ತಾಲೂಕ ಪಂಚಾಯತ ಹಾಗು ಎಫ್.ಇ.ಎಸ್ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಯುಗ ಸ್ಪರ್ಧಾತ್ಮಕ ಯುಗವಾಗಿರುವದರಿಂದ ಮಹಿಳೆಯರು ಎಲ್ಲಾ ರಂಗದಲ್ಲಿ ಭಾಗವಹಿಸಿ ಸಬಲೀಕರಣವಾಗುತ್ತಿರುವದರಿಂದ ದೇಶ ಅಭಿವೃದ್ದಿಯತ್ತ ಮುನ್ನಡೆಯಲು ಸಾಧ್ಯವಾಗಿದೆ. ಭಾರತ ಸಂವಿಧಾನವು ಕೂಡಾ ಮಹಿಳೆಯರಿಗೆ ಸಮಾನ ಮೀಸಲಾತಿ ಕಲ್ಪಿಸಿರುವದರಿಂದ ಅವರ ಹಕ್ಕುಗಳನ್ನು ಎತ್ತಿ ಹಿಡಿದಿದೆ. ದೇಶ ಅಭಿವೃದ್ದಿ ಹೊಂದಿದೆ ಎಂದು ಹೇಳಬೇಕಾದರೆ ಅಲ್ಲಿನ ಮಹಿಳೆಯರಿಗೆ ನೀಡಿರುವ ಹಕ್ಕುಗಳ ಆಧಾರದ ಮೇಲೆ ನಿರ್ಧಾರಿತವಾಗಿರುತ್ತದೆ. ಮಹಿಳೆಯರು ಕುಟುಂಬದ ನೊಗವನ್ನು ಹೊತ್ತು ಜವಾಬ್ದಾರಿಯಿಂದ ಹಿಂದೆ ಸರಿಯದೇ ಮುನ್ನುಗ್ಗಿ ತನ್ನ ಶಕ್ತಿ ಮೀರಿ ತನ್ನ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಮಹಿಳೆ ಕೇವಲ ಕುಟುಂಬಕ್ಕೆ ಸೀಮಿತವಾಗಿರದೇ ತಾನು ಕೂಡಾ ಸಬಲೇ ಎನ್ನುವದನ್ನು ಕೆಲಸದ ಮೂಲಕ ತೋರ್ಪಡಿಸುತ್ತಿದ್ದಾಳೆ. ಮಕ್ಕಳ ಲಾಲನೆ-ಪಾಲನೆ, ಶಿಕ್ಷಣ, ಕುಟುಂಬ ನಿರ್ವಹಣೆ, ಕಛೇರಿ ಕೆಲಸ, ಶಿಕ್ಷಣ, ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಇತ್ಯಾದಿಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜ ನೀಡಿದ ಗುರುತರ ಜವಾಬ್ದಾರಿಯನ್ನು ಸುಗಮವಾಗಿ ಸಾಗಿಸುತ್ತಿದ್ದಾಳೆ.
ನೀರು,ಮಣ್ಣು ಸಂರಕ್ಷಣೆಯ ಮಹಿಳಾ ಸಾಧಕರಿಗೆ ಗೌರವ ಸನ್ಮಾನ:- ಕೊಪ್ಪಳ ತಾಲೂಕಿನ ಕೋಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊರತಟ್ನಾಳ ಗ್ರಾಮದ ಹುಲಿಗೆಮ್ಮ ಎಮ್ಮಿಯರ್ ರವರು ಕಳೆದ 30 ವರ್ಷಗಳಲ್ಲಿ ಪತಿ ಪತ್ನಿ ಜಂಟಿಯಾಗಿ ಕೋಳೂರು, ಗುನ್ನಳ್ಳಿ, ಹೊರತಟ್ನಾಳ ಗ್ರಾಮ ಹಾಗು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ 250 ಹೆಚ್ಚು ಬಾವಿಗಳನ್ನು ತೊಡಿದ್ದಾರೆ. ಪ್ರಸಕ್ತದಲ್ಲಿ ಬಾವಿಯಲ್ಲಿನ ನೀರಿನ ಮೂಲಕ ರೈತರು ನೀರಾವರಿ ಮಾಡಿಕೊಂಡಿರುವದು ನೀರು ಸಂರಕ್ಷಣೆಗೆ ಸಾಕ್ಷಿಯಾಗಿದ್ದಾರೆ.
ಹಲಗೇರಿ ಗ್ರಾಮದ ದ್ಯಾಮಮ್ಮ ಮೆಕ್ಕಾಳಿ ಮೂಲತಃ ವಿಶೇಷಚೇತನರಾಗಿದ್ದು ಗ್ರಾಮ ಪಂಚಾಯತಿಯ ನರೇಗಾ ಕೆಲಸದಲ್ಲಿ ನಿರತರಾಗುವದರ ಜೊತೆಗೆ ತಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಸಸಿಗಳಿಗೆ ಪ್ರತಿ ದಿನ ನಿರುಣಿಸುವ ಮೂಲಕ ಸಸಿಗಳ ಪೋಷಣೆಗೆ ಕೈ ಜೋಡಿಸಿದ್ದಾರೆ.
ಬೋಚನಹಳ್ಳಿ ಗ್ರಾಮ ಪಂಚಾಯತಿಯ ಬೋಚನಹಳ್ಳಿ ಗ್ರಾಮದ ದೇವಮ್ಮ ಆವೋಜಿ ರವರು ಗ್ರಾಮದ ರಸ್ತೆಯ ಬದಿಯಲ್ಲಿರುವ ಸಸಿಗಳಿಗೆ ಪತಿ, ಪತ್ನಿ ಜಂಟಿಯಾಗಿ ಅವುಗಳಿಗೆ ಪ್ರತಿ ದಿನ ಚಾಚು ತಪ್ಪದೇ ನೀರುಣಿಸುವದ ಜೊತೆಗೆ ಜಾನುವಾರುಗಳಿಂದ ಹಾಳಗದಂತೆ ಅವುಗಳನ್ನು ಪೋಷಣೆ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಶಾಲು ಹೋದಿಸಿ, ಹೂವಿನ ಹಾರ ಹಾಗು ನೆನಪಿನ ಕಾಣಿಕೆ ನೀಡುವದರ ಮೂಲಕ ಗೌರವಿಸಲಾಯಿತು. ಮಹಿಳಾ ಸಾಧಕರು ಮಣ್ಣು, ನೀರು ಸಂರಕ್ಷಣೆ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.
ನಂತರ ಸಾಮೂಹಿಕ ಆಸ್ತಿಗಳ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಎಫ್ ಇಎಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ವಾಸುದೇವ ಮೂರ್ತಿ ಮಾತನಾಡಿ ಸಾಮೂಹಿಕ ಆಸ್ತಿಗಳಾದ ಕೆರೆ, ಕುಂಟೆ, ಕಲ್ಯಾಣಿ, ಗೋಮಾಳ,ಸ್ಮಶಾನ, ಶಾಲೆ,ಹಾಗು ಗ್ರಾಮ ಪಂಚಾಯತಿ ಆಸ್ತಿಗಳ ರಕ್ಷಣೆಯಲ್ಲಿ ಮಹಿಳೆಯರು ಯಾವ ರೀತಿಯಾಗಿ ಕಾರ್ಯನಿರ್ವಹಿಸಬೇಕೆನ್ನುವದರ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ನಿರ್ವಹಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿಯ ವ್ಯವಸ್ಥಾಪಕರಾದ ಲಲಿತಾ ಸುರಳ, ಅನುಷ್ಠಾನ ಇಲಾಖೆಯ ತಾಂತ್ರಿಕ ಸಂಯೋಜಕಿ ಕವಿತಾ ಸಿ, ತಾ.ಪಂ ವಿಷಯ ನಿರ್ವಾಹಕರಾದ ಜ್ಯೋತಿ ಕವಿತಾ ಕಳಕಾಪುರ ಸೇರಿದಂತೆ ತಾಲೂಕಿನ ಗ್ರಾಮ ಕಾಯಕ ಮಿತ್ರರು, ಮಹಿಳಾ ಕಾಯಕ ಬಂಧುಗಳು, ಸಂಜೀವಿನಿ ಯೋಜನೆಯ ಸಂಘದ ಸದಸ್ಯರು ಹಾಜರಿದ್ದರು.

