ಬೆಣಕಲ್ ಗ್ರಾಮದ ನರೇಗಾ ಕೂಲಿಕಾರರಿಗೆ ಮತದಾನ ಸ್ವೀಪ್ ಜಾಗೃತಿ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,10- ಬೆಣಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಬುಧವಾರದಂದು ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ, ದುಡಿಮೆಯ ಖಾತ್ರ‍್ರಿ ಅಭಿಯಾನ, ಆರೋಗ್ಯ ತಪಾಸಣಾ ಶಿಬಿರ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಹಾಯಕ ನಿರ್ದೇಶಕರಾದ (ಗಾ.ಉ) ಶರಣಪ್ಪ ಕೆಳಗಿನಮನಿ ಮಾತನಾಡಿ, ಮಹಾತ್ಮಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಅಕುಶಲ ಕೂಲಿಕಾರ್ಮಿಕರು ಗುಳೆ ಹೋಗದಂತೆ ನೆಮ್ಮದಿಯ ಜೀವನ ನಿರ್ವಹಣೆಗೆ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದು. ಕೂಲಿಕಾರರು ರೈತಾಪಿ ಕೃಷಿ ಚಟುವಟಿಕೆ ಇಲ್ಲದೇ ಇರುವ, ಅಂದರೆ ಬೇಸಿಗೆ ಅವಧಿಯಲ್ಲಿ ಕೂಲಿಕಾರರು ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಸುಧಾರಣೆ, ಕೆರೆಹೂಳೆತ್ತುವ ಕಾಮಗಾರಿ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಒಳ್ಳೆಯ ಅವಕಾಶವಿದೆ. ನರೇಗಾ ಆಯುಕ್ತಾಲಯವು ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ, ದುಡಿಮೆಯ ಖಾತ್ರಿ ಅಭಿಯಾನವನ್ನು ಪ್ರಾರಂಭಿಸಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿರಂತರ ಕೆಲಸ ನೀಡುತ್ತಿದೆ. ಇದನ್ನು ಎಲ್ಲಾ ಕೂಲಿಕಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರಸ್ತುತ ವರ್ಷದಲ್ಲಿ ಶೇ.10 ಕೂಲಿ ಮೊತ್ತವನ್ನು ಸರ್ಕಾರ ಹೆಚ್ಚಿಸಿದ್ದು, ಕೂಲಿ ಮೊತ್ತ ರೂ.349/- ಆಗಿದೆ. ಇದರ ಸದುಪಯೋಗವನ್ನು ಎಲ್ಲ ಕೂಲಿಕಾರರು ಪಡೆದುಕೊಳ್ಳಬೇಕು, ಅಳತೆ ಪ್ರಕಾರ ಕೆಲಸ ಮಾಡಿ ಪೂರ್ಣ ಪ್ರಮಾಣದ ಕೂಲಿಯನ್ನ ಪಡೆದುಕೊಳ್ಳಬೇಕು ಎಂದರು.
ಕೂಲಿಕಾರರ ಆರೋಗ್ಯ ತಪಾಸಣೆ : ಇದೇ ಸಂದರ್ಭ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು. ಈ ಕುರಿತು ಮಾತನಾಡಿದ ಸಹಾಯಕ ನಿರ್ದೇಶಕರು, ಆರೋಗ್ಯವೇ ಭಾಗ್ಯ. ಆರೋಗ್ಯಕ್ಕಿಂತ ಮತ್ತೊಂದಿಲ್ಲ ಎಲ್ಲರೂ ಆರೋಗ್ಯವಂತರಾಗಬೇಕು. ಪ್ರಸ್ತುತ ದಿನಗಳಲ್ಲಿ ಅಸಹಜ ಸಾವುಗಳು ಸಂಭವಿಸುತ್ತಿದ್ದು ಸಕ್ಕರೆ ಖಾಯಿಲೆ, ಅಧಿಕ ರಕ್ತದೊತ್ತಡ ಖಾಯಿಲೆಗಳಂತಹ ರೋಗಗಳಿಂದ ಮುಕ್ತರಿರಬೇಕು.
ಅದಕ್ಕಾಗಿ 40 ವರ್ಷ ಮೇಲ್ಪಟ್ಟ ಎಲ್ಲರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಮತದಾನ ಜಾಗೃತಿ : ಈಗಾಗಲೇ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಎಲ್ಲರೂ ಮೇ-7 ರಂದು ತಪ್ಪದೇ ಮತದಾನ ಮಾಡಬೇಕು. ಸುಭದ್ರ ದೇಶಕ್ಕಾಗಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ, ಉತ್ತಮ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಎಲ್ಲರ ಮೇಲೆ ಇದೆ. ಜನರೇ ತಮ್ಮನ್ನು ಆಳುವ ರಾಜರನ್ನು ಆಯ್ಕೆ ಮಾಡಿಕೊಳ್ಳಲು ನಮ್ಮ ಸಂವಿಧಾನ ಅವಕಾಶ ಕೊಟ್ಟಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದರು.
ತಾಲೂಕು ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ಥಳದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬಿ. ಕೃಷ್ಣಾ ರಡ್ಡಿ, ಆರೋಗ್ಯ ಅಧಿಕಾರಿಗಳಾದ ಡಾ. ಶಕುಂತಲಾ ಅಂಗಡಿ, ಗ್ರಾ.ಪಂ ಕಾರ್ಯದರ್ಶಿ ಮಾರುತಿ ಗೊಂಡಬಾಳ, ಆರೋಗ್ಯ ನಿರೀಕ್ಷಕರಾದ ಸೋಮರಡ್ಡಿ, ಸಮುದಾಯ ಆರೋಗ್ಯಾಧಿಕಾರಿಗಳಾದ ಶಂಭುಲಿಂಗೇಶ್, ಗ್ರಾ.ಪಂ ಕಂಪ್ಯೂಟರ್ ಅಪರೇಟರ್ ಉಮೇಶ್ ಯಡಿಯಪ್ಪ ಗೌಡ್ರ, ಗ್ರಾಮ ಕಾಯಕ ಮಿತ್ರರಾದ ಸವಿತಾ ಗೂಳಪ್ಪ ಮುತ್ತಾಳ, ಕಾಯಕ ಮಿತ್ರರು, ಕೂಲಿಕಾರರು ಹಾಜರಿದ್ದರು.

