IMG_20240416_192014

ಎಸ್. ಯು. ಸಿ. ಐ. ( ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಿಂದ ಮತಯಾಚನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 17- ಜನಹೋರಾಟಗಳಿಂದ ಹೊರಹೊಮ್ಮಿದ ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾದ ಶರಣು ಗಡ್ಡಿ ಅವರು ಹುಲಿಗಿ ಗ್ರಾಮದಲ್ಲಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದವರು ಸಾಮಾನ್ಯ ಜನರ ನಿಜವಾದ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದೇ ನಿಜವಾದ ರಾಜಕೀಯ. ಶಿಕ್ಷಣ, ಉದ್ಯೋಗ, ಆರೋಗ್ಯ ಸೌಲಭ್ಯಗಳು, ಇಂತಹ ಮೂಲಭೂತ ಅವಶ್ಯಕತೆಗಳು ಎಲ್ಲರಿಗೂ ಸಿಗುವಂತಹ ನೀತಿಗಳಿಗಾಗಿ ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿಯೂ ಸಹ ಇವುಗಳೇ ನಮ್ಮ ಮುಖ್ಯ ವಿಷಯಗಳು ಎಂದರು.

ಮುಂದುವರೆದು ಶಹೀದ್ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ರ ಹೋರಾಟದ ಗುರಿ ಕೇವಲ ಬ್ರಿಟಿಷರನ್ನು ಹೊರ ಹಾಕುವುದಾಗಿರಲಿಲ್ಲ. ಯಾವುದೇ ತಾರತಮ್ಯವಿಲ್ಲದ ಸಮ ಸಮಾಜದ ನಿರ್ಮಾಣದ ಗುರಿ ಅವರದಾಗಿತ್ತು. ಅವರ ವಿಚಾರಗಳ ಆಧಾರದ ಮೇಲೆ ನಾವು ಮುನ್ನಡೆಯುತ್ತಿದ್ದೇವೆ.

ಇಂದು ನಮ್ಮನ್ನಾಳುತ್ತಿರುವ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳು, ಶ್ರೀಮಂತರಿಂದ (ಬಂಡವಾಳಶಾಹಿಗಳಿಂದ) ಹುಟ್ಟಿಸಲ್ಪಟ್ಟ ಪಕ್ಷಗಳು ಮತ್ತು ಅವುಗಳು ಇರುವುದೇ ಶ್ರೀಮಂತರ ಉದ್ಧಾರಕ್ಕಾಗಿ. ಹಾಗಾಗಿ ಭಾರತ ಇಂದು ಬಡವರಿಂದ ತುಂಬಿದ ಶ್ರೀಮಂತರ ರಾಷ್ಟ್ರವಾಗಿದೆ. ಕೆಲವೇ ಕೆಲವು ಮನೆತನಗಳು ದೇಶದ ಗರಿಷ್ಠ ಸಂಪತ್ತನ್ನು ಲೂಟಿ ಮಾಡಿವೆ.. ಈ ದೊಡ್ಡ ದೊಡ್ಡ ಮನೆತನಗಳು ಎಲ್ಲಾ ಮುಖ್ಯ ವಾಹಿನಿಯ ಪಕ್ಷಗಳನ್ನು ಸಾಕುತ್ತಿವೆ ಮತ್ತು ಬೆಳೆಸುತ್ತಿವೆ. ಇತ್ತೀಚಿನ ಇಲೆಕ್ಟ್ರಾಲ್ ಬಾಂಡ್ ಹಗರಣ ಇದಕ್ಕೆ ತಾಜ ಉದಾಹರಣೆ.

ಹಾಗಾಗಿ ಬಿ. ಜೆ. ಪಿ ನೇತೃತ್ವದ NDA ಆಗಲಿ ಕಾಂಗ್ರೆಸ್ ನೇತೃತ್ವದ INDIA ಆಗಲಿ ಜನಸಾಮಾನ್ಯರ ಪಕ್ಷಗಳಲ್ಲ. ಇವುಗಳು ಶ್ರೀಮಂತ ಬಂಡವಾಳಿಗರ ಅತ್ಯಂತ ನಿಷ್ಠ ಪಕ್ಷಗಳು. ಇಂದು ಬಿ.ಜೆ.ಪಿ.ಯ ದುರಾಡಳಿತದ ಮುಂದೆ ಕಾಂಗ್ರೆಸ್ ಸಹ ಒಳ್ಳೆಯ ಪಕ್ಷದಂತೆ ಕಾಣುತ್ತಿದೆ, ಆದರೆ ಕಾಂಗ್ರೆಸ್ ತನ್ನ 55 ವರ್ಷಗಳ ಆಡಳಿತದಲ್ಲಿ ಈ ದೇಶವನ್ನು ದುರ್ಗತಿಗೆ ತಂದಿರುವ ಖ್ಯಾತಿಯನ್ನು ಹೊಂದಿದೆ.

ಈ ಕಾರಣದಿಂದಲೇ 2014ರಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದ್ದು. ಜಾಗತೀಕರಣ ನೀತಿಯಿಂದ ದೇಶವನ್ನು ಸರ್ವನಾಶ ಮಾಡಿದ್ದು ಇದೇ ಕಾಂಗ್ರೆಸ್. ಉಳಿದ ಪ್ರಾದೇಶಿಕ ಪಕ್ಷಗಳು ಸಹ ಅವಕಾಶವಾದಿ ರಾಜಕಾರಣದಲ್ಲಿ ಸಂಪೂರ್ಣವಾಗಿ ಮುಳುಗಿವೆ. ಎಲ್ಲಾ ಪಕ್ಷಗಳಲ್ಲಿ ಕುಟುಂಬ ರಾಜಕೀಯ ನಗ್ನ ನರ್ತನ ಮಾಡುತ್ತಿದೆ. ಎಂದು ಟೀಕಿಸಿದರು.

ಜನಪರ ಹೋರಾಟವನ್ನು ಗೆಲ್ಲಿಸಲು,ದುಡಿಯುವ ಜನರ ನೈಜ ಪ್ರತಿನಿಧಿಯಾದ SUCI (ಕಮ್ಯುನಿಸ್ಟ್ ) ಪಕ್ಷವನ್ನು ಬೆಂಬಲಿಸಬೇಕೆಂದು ಜನರಲ್ಲಿ ಮನವಿ ಮಾಡಿದರು.. ಈ ಸಂದರ್ಭದಲ್ಲಿ ಪಕ್ಷದ ಸದಸ್ಯರಾದ, ಶರಣು ಪಾಟೀಲ್, ರಮೇಶ್ ವಂಕಲಕುಂಟಿ, ಗಂಗರಾಜ ಅಳ್ಳಳ್ಳಿ, ಬೆಂಬಲಿಗರಾದ, ಮೌನೇಶ್ ಹಲಗೇರಿ, ಶರಣಪ್ಪ ಗೋರ್ಪಡೆ, ಚಂದ್ರಶೇಖರ್ ಹುಲಿಗಿ, ಶಿವು, ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!