ಗಿಣಿಗೇರಾ ನರೇಗಾ ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 17- ಮತದಾನ ಎನ್ನುವದು ಪವಿತ್ರ ಕಾರ್ಯ. ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆಗೆ ಅವಕಾಶ ಇರುವದು ಸಂವಿಧಾನವು ನಮಗೆ ದೊಡ್ಡ ಕೊಡುಗೆಯಾಗಿದೆಂದು ಗಿಣಿಗೇರಾ ಪಂಚಾಯತ ಅಭಿವೃದ್ದಿ ಅಧಿಕಾರಿ ಮಂಜುಳಾ ದೇವಿ ಹೂಗಾರ ಹೇಳಿದರು.
ಬುಧವಾರದಂದು ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮ ಪಂಚಾಯತಿಯ ನರೇಗಾ ಕಾಮಗಾರಿ ಸ್ಥಳವಾದ ಗಿಣಿಗೇರಾ ಗ್ರಾಮದ ಕೆರೆ ಕಾಮಗಾರಿಯಲ್ಲಿ ಗ್ರಾಮ ಪಂಚಾಯತಿ ಸ್ವೀಪ್ ಸಮಿತಿ ವತಿಯಿಂದ ಕೂಲಿಕಾರರಿಗೆ ಜರುಗಿದ ಸ್ವೀಪ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೇ-7ರಂದು ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸೋಣ. ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ಚಲಾಯಿಸಬೇಕು. ಸ್ವೀಪ್ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ಜಾಗೃತಿ ಮೂಡಿಸಲಾಗುತ್ತಿದ್ದು, ನರೇಗಾ ಕೂಲಿಕಾರರು ಮತದಾನ ಮಾಡಿ ಇತರರಿಗೆ ಮಾದರಿಯಾಗಬೇಕೆಂದು ಕರೆ ನೀಡಿದರು.
ಕಳೆದ ಬಾರಿಗಿಂತ ಈ ಬಾರಿ ವಿನೂತನವಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಜರುಗಿಸುವ ಮೂಲಕ ಜಿಲ್ಲೆಯ ಮತದಾನ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ನಾವೆಲ್ಲರೂ ಚುನಾವಣಾ ಆಯೋಗಕ್ಕೆ ಕೈ ಜೋಡಿಸೋಣ. ಮತದಾನ ಪವಿತ್ರವಾದ ಕಾರ್ಯ. ಮತದಾನ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಸ್ವೀಪ್ ಕಾರ್ಯಕ್ರಮದಲ್ಲಿ ಸೇರಿರುವ ಎಲ್ಲಾ ನರೇಗಾ ಕೂಲಿಕಾರರು ನಿಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟ ಸದಸ್ಯರು ಮತ ಚಲಾಯಿಸುವ ಮೂಲಕ ದೇಶಕ್ಕೆ ಸುಭದ್ರ ಆಡಳಿತ ಒದಗಿಸಲು ಕೈ ಜೋಡಿಸಿ. ಮತ ಚಲಾವಣೆ ತುಂಬಾ ಜವಾಬ್ದಾರಿಯುತವಾದ ಕಾರ್ಯ. ಆ ಮೂಲಕ ನಾವುಗಳು ಯಾವುದೇ ಆಸೆ, ಅಮೀಷಗಳಿಗೆ ಬಲಿಯಾಗದೇ ನಿರ್ಭಯವಾಗಿ ಮತ ಚಲಾಯಿಸಬೇಕೆಂದು ಕರೆ ನೀಡಿದರು. ನಂತರ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಸ್ವೀಪ್ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮಂಜುನಾಥ ಭಾವಿಕಟ್ಟಿ, ತಾಂತ್ರಿಕ ಸಹಾಯಕಿ ಅಕ್ಷತಾ ಕುಮಾರಿ, ಬೇರ್ ಫೂಟ್ ಟೆಕ್ನಿಷಿಯನ್ ದಾವಲಸಾಬ ಮುಲ್ಲಾ, ಕರವಸೂಲಿಗಾರ ಈಶ್ವರಯ್ಯ, ಡಿಇಒ ರಾಜಾಭಕ್ಷಿ, ನೀರಗಂಟಿ ಶ್ರೀಕಾಂತ ಪೂಜಾರ, ಕಾಯಕ ಬಂಧುಗಳು, 825 ನರೇಗಾ ಕೂಲಿಕಾರರು ಭಾಗವಹಿಸಿದ್ದರು.
