ಬಾಲಕ ನಚಿಕೇತ ಮತ್ತು ಯಮ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಉದ್ದಾಲಕ ( ಯಜಶ್ರವಸ ಎಂಬ ಹೆಸರು ಕೂಡ ಇದೆ) ಎಂಬ ಮಹರ್ಷಿಯು ಅತ್ಯಂತ ಪ್ರಸಿದ್ಧ ಋಷಿಯಾಗಿದ್ದನು. ನಚಿಕೇತ ಎಂಬ ಪುತ್ರನನ್ನು ಹೊಂದಿದ್ದ ಉದ್ಧಾಲಕ ಮಹರ್ಷಿಯು ಆತನಿಗೆ ಸರ್ವ ವಿದ್ಯೆಗಳನ್ನು ಧಾರೆ ಎರೆದಿದ್ದನು. ಅತ್ಯಂತ ಸ್ಪಷ್ಟವಾಗಿ ಮಂತ್ರಗಳನ್ನು ಉಚ್ಛರಿಸುತ್ತಿದ್ದ ಬಾಲಕ ನಚಿಕೇತ ಶಾಸ್ತ್ರ, ಪುರಾಣ ಮತ್ತು ವೇದಗಳಲ್ಲಿ ಪಾರಂಗತನಾಗಿದ್ದನು. ಇದರ ಜೊತೆಗೆ ನಯ ವಿನಯ ಮತ್ತು ದೃಢತೆಗೆ ಮತ್ತೊಂದು ಹೆಸರಾಗಿದ್ದ ಬಾಲಕ ನಚಿಕೇತ ಸುತ್ತಲ ಆಶ್ರಮವಾಸಿಗಳಲ್ಲಿ ಅತ್ಯಂತ ಪ್ರೀತಿ ಪಾತ್ರನಾಗಿದ್ದನು.
ಒಂದು ಬಾರಿ ಆತನ ತಂದೆ ಅತಿ ದೊಡ್ಡ ಯಜ್ಞವೊಂದನ್ನು ಆಯೋಜಿಸಿದನು. ದೇಶದ ಮೂಲೆ ಮೂಲೆಯಲ್ಲಿರುವ ಸಂತರು, ಸನ್ಯಾಸಿಗಳು, ಮಹಾಋಷಿಗಳಿಗೆ ಆಮಂತ್ರಣ ನೀಡಲಾಯಿತು. ನ ಭೂತೋ,ನ ಭವಿಷ್ಯತಿ ಎಂಬಂತೆ ನಡೆದ ಆ ಯಜ್ಞವನ್ನು ವೀಕ್ಷಿಸಲು ಸಹಸ್ರಾರು ಜನ ಭಕ್ತರು ಕೂಡ ಬಂದು ನೆರೆಯುತ್ತಿದ್ದರು. ಹಲವಾರು ದಿನಗಳವರೆಗೆ ನಡೆದ ಈ ಯಜ್ಞವನ್ನು ನೆರವೇರಿಸಿ ಕೊಡುತ್ತಿದ್ದ ಋತ್ವಿಜರು ತಪ್ಪು ತಪ್ಪಾಗಿ ಮಂತ್ರಗಳನ್ನು ಉಚ್ಚರಿಸುತ್ತಿದ್ದುದನ್ನು ಕಂಡು ಬಾಲಕ ನಚಿಕೇತ ಕಸಿವಿಸಿಗೊಂಡನು.
ಋತ್ವಿಜರನ್ನು ಅವರು ಮಾಡುತ್ತಿರುವ ತಪ್ಪಿಗೆ ತಡೆಗಟ್ಟಬೇಕೆಂದು ಹಲವಾರು ಬಾರಿ ತೋರಿದರೂ ಕೂಡ ತಮ್ಮ ಆಶ್ರಮದ ಯಜ್ಞ ಕಾರ್ಯವನ್ನು ನೆರವೇರಿಸಿಕೊಡಲು ಬಂದಿರುವ ಋತ್ವಿಜರನ್ನು ಅವಮಾನಿಸಿದಂತೆ ಆದೀತೆಂದು ಭಾವಿಸಿದ ಬಾಲಕ ನಚಿಕೇತ ತಂದೆಗೆ ಈ ವಿಷಯವನ್ನು ಅರುಹಿದರಾಯಿತು ಎಂದು ತನ್ನ ತಂದೆ ಯಜ್ಞ ಮಾಡುತ್ತಿದ್ದ ಯಜ್ಞ ಶಾಲೆಗೆ ಬಂದನು.
ಅಲ್ಲಿ ಯಾಗಕ್ಕೆ ಬಂದ ಬ್ರಾಹ್ಮಣರೆಲ್ಲರಿಗೂ ಉದ್ದಾಲಕ ಮುನಿಯು ಸಾವಿರಾರು ಗೋವುಗಳನ್ನು ದಾನವಾಗಿ ನೀಡುತ್ತಿದ್ದನು. ಒಂದು ಬಾರಿ ಆ ಎಲ್ಲ ಬಡಕಲಾದ ಗೋವುಗಳನ್ನು ವೀಕ್ಷಿಸಿದ ನಚಿಕೇತನಿಗೆ ತನ್ನ ತಂದೆ ವೃದ್ಧ ಮತ್ತು ಅಶಕ್ತವಾದ ಗೋವುಗಳನ್ನು ದಾನವಾಗಿ ನೀಡುತ್ತಿರುವುದು ಸರಿ ಕಾಣಲಿಲ್ಲ. ಅಂತೆಯೇ ಯಾಗದಲ್ಲಿ ನಿರತನಾದ ತಂದೆಯನ್ನು ಪದೇ ಪದೇ ಮಾತನಾಡಿಸಿ ಆತನ ಲಕ್ಷ್ಯವನ್ನು ಸೆಳೆಯಲು ಪ್ರಯತ್ನಿಸಿ ಯಶಸ್ವಿಯಾದ.ಯಾಗದ ನಡುವೆ ತನ್ನತ್ತ ನೋಡಿದ ತಂದೆಗೆ “ಈ ಗೋವುಗಳನ್ನು ಯಾರಿಗೆ ಕೊಡುತ್ತಿರುವಿರಿ?” ಎಂದು ತಂದೆಯನ್ನು ಪ್ರಶ್ನಿಸಿದ.
‘ಬಡ ಬ್ರಾಹ್ಮಣರಿಗೆ’ ಎಂದು ತಂದೆ ತುಸು ಸಿಡಿಮಿಡಿಯಿಂದಲೇ ಉತ್ತರಿಸಿದ.
“ನಿಮ್ಮೆಲ್ಲ ಸಾಧನೆಗಳನ್ನು, ಬಿರುದು ಬಾವಲಿಗಳನ್ನು ಯಾರಿಗೆ ದಾನವಾಗಿ ಕೊಡುವೆ ತಂದೆಯೇ? ಎಂದು ಕೇಳಿದ ನಚಿಕೇತನ ಪ್ರಶ್ನೆಗೆ ತುಸು ಕೋಪದಿಂದ ‘ಋಷಿಮುನಿಗಳಿಗೆ’ ಎಂದು ಉತ್ತರಿಸಿದ ಆತನ ತಂದೆ.
ಮತ್ತೆ ಪುಟ್ಟ ನಚಿಕೇತ “ಹಾಗಾದರೆ, ನನ್ನನ್ನು ಯಾರಿಗೆ ದಾನವಾಗಿ ಕೊಡುವೆ? ಎಂದು ಕೇಳಿದಾಗ ಪದೇಪದೇ ತನ್ನ ಕಾರ್ಯಕ್ಕೆ ಅಡ್ಡಿ ಮಾಡುತ್ತಿದ್ದ ನಚಿಕೇತನನ್ನು ಕುರಿತು ಸಿಟ್ಟಿನಿಂದ “ನಿನ್ನನ್ನು ಯಮನಿಗೆ ದಾನ ಕೊಡುವೆ” ಎಂದು
ಕೋಪದ ಭರದಲ್ಲಿ ಹೇಳಿದ ಆ ಮುನಿವರ. ತಂದೆಯ ಮಾತನ್ನು ಕೇಳಿದ ನಚಿಕೇತ ತಂದೆಗೆ ತಲೆಬಾಗಿದ.
ಮುಂದಿನ ಹಂತದಲ್ಲಿ ಸಶರೀರನಾಗಿ ನಚಿಕೇತ ಯಮಧರ್ಮರಾಯನ ಆಸ್ಥಾನದ ಬಾಗಿಲು ತಟ್ಟಿದ. ಯಮಧರ್ಮರಾಯ ಮನೆಯಲ್ಲಿಲ್ಲದ ಕಾರಣ ಯಮದೂತರು ಪುಟ್ಟ ಬಾಲಕ ನಚಿಕೇತನನ್ನು ಯಮಲೋಕದ ಬಾಗಿಲಲ್ಲಿಯೇ ತಡೆದು ನಿಲ್ಲಿಸಿದರು. ಮೂರು ಹಗಲು ಮತ್ತು ಮೂರು ರಾತ್ರಿ ನೀರು, ಆಹಾರಗಳಿಲ್ಲದೆ ಯಮಲೋಕದ ಬಾಗಿಲಲ್ಲಿಯೇ ಕಳೆದನು ಆ ಪುಟ್ಟ ಬಾಲಕ.
ಮೂರನೆಯ ದಿನ ಮುಂಜಾನೆ ತನ್ನ ಲೋಕಕ್ಕೆ ಮರಳಿದ ಯಮಧರ್ಮರಾಯನು ಪುಟ್ಟ ಬಾಲಕನನ್ನು ಅಲ್ಲಿ ನೋಡಿ ಹುಬ್ಬೇರಿಸಿದರೂ ತನ್ನ ದಿವ್ಯ ದೃಷ್ಟಿಯಿಂದ ನಡೆದ ವಿದ್ಯಮಾನಗಳನ್ನು ಅರಿತನು.
ಬ್ರಾಹ್ಮಣ ಬಾಲಕನನ್ನು ಮೂರು ದಿನಗಳ ಕಾಲ ಯಮಲೋಕದ ಹೊರಗೆ ನಿಲ್ಲಿಸಿದ ಪಾಪದ ಪಶ್ಚಾತಾಪವಾಗಿ ಯಮಧರ್ಮನು ಆ ಬಾಲಕನನ್ನು ಕುರಿತು ಮೂರು ವರಗಳನ್ನು ಕೇಳಲು ಹೇಳಿದನು.
ತನ್ನ ತಂದೆಯ ಕೋಪ ಶಾಂತವಾಗಲು, ನನ್ನ ತಂದೆ ತನ್ನೊಂದಿಗೆ ಮೊದಲಿನಂತೆಯೇ ಪ್ರೀತಿಯಿಂದ ವ್ಯವಹರಿಸಲು ಸಾಧ್ಯವಾಗುವಂತೆ ವರವನ್ನು ಕೊಡಲು ಯಮಧರ್ಮರಾಯನನ್ನು ಕೋರಿಕೊಂಡ ಬಾಲಕ ನಚಿಕೇತ. ಯಮನಿಗೆ ಆಶ್ಚರ್ಯವಾಯಿತು. ಮೊದಲೆರಡು ವರಗಳಿಗೆ ತಥಾಸ್ತು ಎಂದು ಹೇಳಿದ ಯಮಧರ್ಮರಾಯ ಬಾಲಕನ ನಮ್ರತೆ ಮತ್ತು ಜಾಣ್ಮೆಯನ್ನು ಕಂಡು ಬೆರಗಾಗಿ ಮತ್ತೊಂದು ವರವನ್ನು ಕೇಳು ಎಂದು ಹೇಳಲು ಆತ್ಮದ ಕುರಿತಾದ ಪ್ರಶ್ನೆಯನ್ನು, ಮರಣದ ನಂತರದ ಮನುಷ್ಯ ಬದುಕಿನ ಕುರಿತು ತಿಳಿಸಿ ಹೇಳಲು ಬಾಲಕ ನಚಿಕೇತ ಯಮಧರ್ಮರಾಯನನ್ನು ಕೋರಿದ. ಎಂತೆಂಥ ಮಹಾನ್ ಋಷಿಗಳಿಗೂ ಅರ್ಥವಾಗದ ಜೀವನ್ಮರಣದ ಕುರಿತಾದ ಆತ್ಮವಿದ್ಯೆಯನ್ನು ಅನುಗ್ರಹಿಸಲು ಕೇಳುವುದರ ಬದಲು ಆಯುಷ್ಯ, ಐಶ್ವರ್ಯ, ಅರಮನೆ, ದಾಸ ದಾಸಿಯರು, ಇಡೀ ಜಗತ್ತಿನ ಒಡೆತನ ಏನು ಬೇಕಾದರೂ ಕೇಳಿಕೋ ಎಂದು ಯಮಧರ್ಮರಾಯ ನಚಿಕೇತನಿಗೆ ಸಲಹೆ ಮಾಡಿದ.
ಇದಾವುದಕ್ಕೂ ಒಪ್ಪದ ಕಾರಣ ಯಮರಾಜನು ಜನನ ಮರಣಗಳ ಚಕ್ರದ ಕುರಿತಾದ ವಿವರ, ಆತ್ಮ ವಿದ್ಯೆ, ಮೋಕ್ಷ ಪ್ರಾಪ್ತಿಯ ಕುರಿತು ಸಂಪೂರ್ಣ ವಿವರವಾಗಿ ಬಾಲಕ ನಚಿಕೇತನಿಗೆ ವಿವರಿಸಿದನು. ಜಗತ್ತಿನ ಅತಿರಥ ಮಹಾರಥರೆನ್ನಿಸಿಕೊಂಡ ಮಹರ್ಷಿಗಳು ಸಾಧಿಸಲಾಗದ ವಿಷಯಗಳನ್ನು 5 ವರ್ಷದ ಪುಟ್ಟ ಬಾಲಕ ನಚಿಕೇತ ಸಂಪೂರ್ಣವಾಗಿ ಅರಿತುಕೊಂಡನು. ಬಾಲಕನ ಅಗಾಧ ಗ್ರಹಣ ಶಕ್ತಿಯನ್ನು ಕಂಡು ಯಮ ಆಶ್ಚರ್ಯ ಚಕಿತನಾದನು.
ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಎರಡು ಮಾರ್ಗಗಳನ್ನು ಆಯ್ದುಕೊಳ್ಳಬಹುದು, ಒಂದು ಆತ್ಮಜ್ಞಾನದ ದಾರಿಯಾದರೆ ಮತ್ತೊಂದು ಇಂದ್ರಿಯ ಸುಖದ ದಾರಿ. ಎಷ್ಟೋ ಬಾರಿ ಮನುಷ್ಯ ಇಂದ್ರಿಯ ಸುಖದ ಲೋಲುಪತೆಯಲ್ಲಿ ಮುಳುಗಿ ತನ್ನ ಗುರಿಯನ್ನು ಮರೆತು ನಿರಾಶೆಯನ್ನು ಹೊಂದುತ್ತಾನೆ. ಕೆಲ ಮಹಾನ್ ವ್ಯಕ್ತಿಗಳು ಮಾತ್ರ ಇಂತಹ ಇಂದ್ರಿಯ ಸುಖದ ಲೋಲುಪತೆಯನ್ನು ತಿರಸ್ಕರಿಸಿ, ಬದುಕಿನ ನಶ್ವರತೆಯನ್ನು ಅರಿತು ಮಹಾನ್ ಋಷಿಗಳಾಗಿ ಪರಿವರ್ತಿತರಾಗುತ್ತಾರೆ. ಚಿಕ್ಕ ಬಾಲಕನಾದ ನೀನು ಇಂತಹ ಸಾಧನಾ ಪಥವನ್ನು ಆರಿಸಿಕೊಂಡು ಅದಕ್ಕಾಗಿ ಹಂಬಲಿಸುತ್ತಿರುವುದು ಕಂಡು ನನಗೆ ಸಂತಸವಾಗಿದೆ ಎಂದು ಯಮರಾಜ ಉಸುರಿದ.
ಆತ್ಮಕ್ಕೆ ಹುಟ್ಟಿಲ್ಲ ಸಾವು ಇಲ್ಲ, ಆತ್ಮವು ಯಾವುದರಿಂದಲೂ ಉದ್ಭವಿಸಿಲ್ಲ ಮತ್ತು ಆತ್ಮದಿಂದ ಕೂಡ ಏನು ಉದ್ಭವಿಸುವುದಿಲ್ಲ… ದೇಹ ನಶಿಸಿ ಹೋಗಬಹುದು ಆದರೆ ಆತ್ಮ ಅವಿನಾಶಿ. ಆತ್ಮ ಎಂಬುದು ಕಾಲಾತೀತ, ಗುಣಾತೀತ, ಅನಂತ, ಆತ್ಮವು ತರ್ಕಕ್ಕೆ ಅತೀತವಾದದ್ದು, ಸೂಕ್ಷ್ಮಾತಿ ಸೂಕ್ಷ್ಮ ವಾದದ್ದು. ಅನಿರ್ದಿಷ್ಟ, ಅಸೀಮವಾದದ್ದು. ಆತ್ಮ ಅಣುವಿಗಿಂತಲೂ ಚಿಕ್ಕದು, ಬ್ರಹ್ಮಾಂಡಕ್ಕಿಂತಲೂ ದೊಡ್ಡದು. ಆತ್ಮದೊಂದಿಗೆ ಏಕಾತ್ಮತೆಯನ್ನು ಹೊಂದಿರುವ ವ್ಯಕ್ತಿಯನ್ನು ಹೊರತುಪಡಿಸಿ ಬೇರಾರಿಂದಲೂ ಆತ್ಮ ವಿದ್ಯೆಯನ್ನು ಕಲಿಯಲು ಸಾಧ್ಯವಿಲ್ಲ.
ದೇಹ ಮತ್ತು ಆತ್ಮಗಳು ಬೇರೆ ಬೇರೆ ಎಂಬ ಸತ್ಯವನ್ನು ಅರಿತೂ ಕೂಡ ಮನುಷ್ಯ ಇಂದ್ರಿಯ ಸುಖದ ಲಾಲಸೆಯಲ್ಲಿ ಜನನ ಮರಣಗಳ ಚಕ್ರದ ಸುಳಿಯಲ್ಲಿ ಸುತ್ತುತ್ತಾನೆ.
ಆತ್ಮವಿದ್ಯೆಯನ್ನು ಬ್ರಹ್ಮ ಜಿಜ್ಞಾಸೆ ಮತ್ತು ಚಿಂತನೆಗಳಿಂದ ಮಾತ್ರ ಅರಿಯಬಹುದು.
ಹನ್ನೊಂದು ರಂಧ್ರಗಳಾದ ಎರಡು ಕಣ್ಣುಗಳು, ಎರಡು ಮೂಗಿನ ಹೊರಳೆಗಳು, ಎರಡು ಕಿವಿಗಳು, ಒಂದು ಬಾಯಿ, ಹೊಕ್ಕಳು, ಬ್ರಹ್ಮ ರಂಧ್ರ(ನೆತ್ತಿಯ ಭಾಗ) ಮತ್ತು 2 ವಿಸರ್ಜನಾಂಗಗಳನ್ನು ಹೊಂದಿರುವ ದೇಹವನ್ನು ಕಾಪಾಡುವ ಶಕ್ತಿಯನ್ನು ಆತ್ಮವು ಹೊಂದಿದೆ.
ಹೀಗೆ ಆತ್ಮವಿದ್ಯೆಯ ಕುರಿತಾದ ಎಲ್ಲ ವಿವರಗಳನ್ನು ನಚಿಕೇತನಿಗೆ ನೀಡಿದ ಯಮ ಮತ್ತೆ ಮುಂದುವರಿಸಿ ಮತ್ತು ಮ ಕಾರಗಳನ್ನು ಒಳಗೊಂಡಿರುವ ಓಂಕಾರವು ಪರಬ್ರಹ್ಮ ಸ್ವರೂಪವಾಗಿದ್ದು ಓಂ ಎಂಬ ಪದವನ್ನು ಪುರುಷ, ಸ್ತ್ರೀ,ಮಕ್ಕಳು ಮುದುಕರು ಎಂಬ ಭೇದವಿಲ್ಲದೆ ಯಾರು ಬೇಕಾದರೂ ಉಚ್ಛರಿಸಬಹುದು. ಸೃಷ್ಟಿ, ಸ್ಥಿತಿ, ಲಯಗಳ ರೂಪವಾಗಿರುವ, ಅ ಉ ಮ ಕಾರಗಳನ್ನು ದೀರ್ಘವಾಗಿ ಉಸಿರನ್ನೆಳೆದುಕೊಂಡು ಒಂದೊಂದಾಗಿ ಹೇಳುವ ಮೂಲಕ ಅಂತಿಮವಾಗಿ ಓಂಕಾರವನ್ನು ಒಟ್ಟಾಗಿ ಹೇಳುವ ಮೂಲಕ ಆತ್ಮ ಸಾಕ್ಷಾತ್ಕಾರವನ್ನು ಕಂಡುಕೊಳ್ಳಬಹುದು. ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ ಎಲ್ಲವೂ ಒಂದಲ್ಲ ಒಂದು ದಿನ ನಶಿಸಿ ಹೋಗುತ್ತದೆ ಎಂಬುದು ಮಾತ್ರ ಶಾಶ್ವತ ಸತ್ಯ.
ಹೀಗೆ ಸಾವಿನ ನಂತರದ ರಹಸ್ಯವನ್ನು ಹೇಳಿದ ಯಮ ಮಹಾರಾಜ ನಚಿಕೇತನನ್ನು ಸಗೌರವದಿಂದ ಪೃಥ್ವಿಗೆ ಕಳುಹಿಸಿಕೊಟ್ಟನು.
ನೋಡಿದಿರಾ ಸ್ನೇಹಿತರೆ!
ಯಮ ಮತ್ತು ನಚಿಕೇತರ ಸಂವಾದದ ಈ ಕಥೆ ನಮ್ಮ ಉಪನಿಷತ್ತುಗಳಲ್ಲಿ ಪ್ರಮುಖವಾಗಿ ಉಲ್ಲೇಖಿತವಾಗಿದ್ದು, ಆತ್ಮವಿದ್ಯೆಯ ಕುರಿತಾದ ಅನೇಕ ವಿಷಯಗಳನ್ನು ಒಳಗೊಂಡಿದ್ದು ಮುಖ್ಯವಾಗಿ ಬಾಲಕ ನಚಿಕೇತನ ಧೈರ್ಯ, ಶ್ರದ್ಧೆ ಮತ್ತು ಆತ್ಮವಿದ್ಯೆಯನ್ನು ಕಲಿಯಬೇಕೆಂಬ ಹಂಬಲಗಳು ಇಲ್ಲಿ ವ್ಯಕ್ತವಾಗಿದೆ.
