
ನಿಗಧಿತ ದರಕ್ಕಿಂತ ಹೆಚ್ಚು ಹಣ ಪಡೆದರೆ ಗ್ಯಾಸ್ ಏಜೆನ್ಸಿ ಮೇಲೆ ಕಠಿಣ ಕ್ರಮ : ಡಿಸಿ ದಿವಾಕರ್
ಕರುನಾಡ ಬೆಳಗು ಸುದ್ದಿ
ವಿಜಯನಗರ, 31- ಗೃಹೋಪಯೋಗಿ ಅನಿಲ ಸಿಲಿಂಡರ್ ವಿತರಣೆ ವೇಳೆ ಬಿಲ್ ಮೊತ್ತಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುವಂತಿಲ್ಲ. ಹಾಗೇನಾದರೂ ತೆಗೆದುಕೊಂಡಲ್ಲಿ ಅಂತಹ ಗ್ಯಾಸ್ ಏಜೆನ್ಸಿ ರವರ ವಿರುದ್ಧವು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವುದಷ್ಟೇ ಅಲ್ಲದೇ ಲೈಸನ್ಸ್ ಅನ್ನು ರದ್ದು ಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಅಕ್ರಮ ಮಾರಾಟ, ಅನಧಿಕೃತ ಸಾಗಾಣಿಕೆ, ಅಕ್ರಮ ಸಂಗ್ರಹಣೆ ಮಾಡುವಂತಿಲ್ಲ ಮತ್ತು ಗ್ಯಾಸ್ ಏಜೆನ್ಸಿಗಳು ನಿರ್ವಹಿಸುತ್ತಿರುವ ಸಿಲಿಂಡರ್ ಗಳ ಲೆಕ್ಕಪತ್ರ ನಿರ್ವಹಣೆ ಹಾಗೂ ಗ್ರಾಹಕರೊಂದಿಗೆ ಇರುವ ವ್ಯವಹಾರಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಗ್ಯಾಸ್ ಏಜೆನ್ಸಿಗಳು ಮತ್ತು ಸೆಲ್ಸ್ ಅಧಿಕಾರಿಗಳೊಂದಿಗೆ ಹಾಗೂ ಆಹಾರ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಸಿಲಿಂಡರ್ ಅನ್ನು ಮನೆಗಳಿಗೆ ತಲುಪಿಸುತ್ತಿರುವ ಏಜೆನ್ಸಿಯ ಸಿಬ್ಬಂದಿಯವರು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತನೆ ಮಾಡಬಾರದು ಎಂದು ಹೇಳಿದರು.
5 ಕಿಲೋ ಮೀಟರ್ ವರೆಗೂ ಗ್ಯಾಸ್ ಸಿಲಿಂಡರ್ ಗಳನ್ನು ಎಲ್ಲಾ ಗ್ರಾಹಕರಿಗೆ ಉಚಿತವಾಗಿ ಮನೆಗೆ ತಲುಪಿಸುವುದು ಏಜೆನ್ಸಿಯವರ ಜವಬ್ದಾರಿಯಾಗಿರುವುದರಿಂದ, ಯಾವುದೇ ಕಾರಣವನ್ನು ನೀಡದೆ ಗ್ರಾಹಕರ ಹತ್ತಿರ ಹೆಚ್ಚುವರಿಯಾಗಿ ಹಣ ಪಡೆಯುವಂತಿಲ್ಲ. ಗ್ರಾಹಕರೂ ಕೂಡ ಹಣ ಕೊಡುವಂತಿಲ್ಲ ಎಂದರು.
ಗ್ಯಾಸ್ ಬುಕ್ ಮಾಡಿದ 2 ರಿಂದ 3 ದಿನದೊಳಗಾಗಿ ಸಿಲಿಂಡರ್ ಅನ್ನು ವಿತರಿಸಬೇಕು.
ಅನಾವಶ್ಯಕವಾಗಿ ಹೆಚ್ಚಿನ ಮೊತ್ತವನ್ನು ಕೊಡುವುದು ಕ್ರಿಮಿನಲ್ ಅಪರಾಧವಾಗಿದೆ. ಗೃಹಪಯೋಗಿ ಸಿಲಿಂಡರ್ ಗಳನ್ನು ಯಾವುದೇ ಕಾರಣಕ್ಕೂ ಹೋಟೆಲ್ ಗೆ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಹಾಗೂ ಯಾವುದೇ ಕ್ಯಾಶ್ ಮೆಮೋ ಇಲ್ಲದೇ ಸಿಲಿಂಡರ್ ವಿತರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೆಚ್ಚು ದರ ಪಡೆದ ಬಗ್ಗೆ ಸಾರ್ವಜನಿಕರು ಹಾಗೂ ಗ್ರಾಹಕರು ಸಂಬಂಧಿಸಿದ ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರಿಗೆ ವಿವರದೊಂದಿಗೆ ದೂರು ನೀಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ದೂರು ಸ್ವೀಕರಿಸಿದ ಆಹಾರ ನಿರೀಕ್ಷಕರು 15 ದಿನದೊಳಗಾಗಿ ಎಲ್ಲಾ ಏಜೆನ್ಸಿಗಳಿಗೆ ಭೇಟಿ ನೀಡಿ ನಿಯಮಾನುಸಾರವಾಗಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಹಾಗೂ ಜಿಎಸ್ ಟಿ ಪ್ರಮಾಣಪತ್ರ ಸೇರಿ ಎಲ್ಲಾ ಮಾರ್ಗಸೂಚಿಗಳ ಪರಿಶೀಲನೆ ಮಾಡಿ ನಿಗಧಿತ ನಮೂನೆಯಲ್ಲಿ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ಸಂಬಂಧಿಸಿದ ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರಿಗೆ ಸೂಚಿಸಿದರು.
ಪ್ರಸ್ತುತ ಇ-ಕೆವೈಸಿ ಪ್ರಕ್ರಿಯೆ ಜಾರಿಯಲ್ಲಿದ್ದು ಗ್ರಾಹಕರಿಂದ ಯಾವುದೇ ಶುಲ್ಕ ಪಡೆಯದೇ ನೊಂದಣಿ ಮಾಡಿಸಲು ಕ್ರಮ ಕೈಗೊಳ್ಳವುಂತೆ ಏಜೆನ್ಸಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲಾ ಗ್ಯಾಸ್ ಏಜೆನ್ಸಿಗಳ ವರ್ತಕರು ಮತ್ತು ಸೆಲ್ಸ್ ಅಧಿಕಾರಿಗಳು ಹಾಗೂ ಆಹಾರ ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು