ವೀಣಾ ಪಾಟೀಲ್

ಸಾಮಾಜಿಕ ಪರಿವರ್ತನೆಯ ಹರಿಕಾರ ದೇವರಾಜ ಅರಸು : ವೀಣಾ ಪಾಟೀಲ್

ಕರುನಾಡ ಬೆಳಗು ಸುದ್ದಿ

ಅದು 70 -80 ರ ದಶಕ. ಆಗಿನ ಮುಖ್ಯಮಂತ್ರಿ ಆಗಿದ್ದ ಡಿ ದೇವರಾಜ ಅರಸ್ ಅವರು ದೇಶದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಭೂ ಸುಧಾರಣೆ ಕಾಯ್ದೆಯನ್ನು ಇಡೀ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತಂದರು. ಇದೊಂದು ಕ್ರಾಂತಿಕಾರಕ ನಿರ್ಧಾರವಾಗಿದ್ದು ಮೇಲ್ವರ್ಗದ ಜನರ ಆಕ್ರೋಶ ಮುಗಿಲು ಮುಟ್ಟುವಂತಿತ್ತು.

ಈ ಹಿಂದೆ ಜಮೀನುಗಳು ಶ್ರೀಮಂತರ, ಜಮೀನ್ದಾರರ, ಗೌಡರ, ಜಹಗೀರುದಾರರ ಮತ್ತು ಉಳ್ಳವರ ಸ್ವಂತ ಆಸ್ತಿಗಳಾಗಿದ್ದು ನೂರಾರು ಸಾವಿರಾರು ಎಕರೆ ಜಮೀನುಗಳನ್ನು ಉಳಲು ಅವರು ಬಡ ಮತ್ತು ಕೆಳವರ್ಗದ ರೈತಾಪಿ ಜನರ ಮೇಲೆ ಅವಲಂಬಿತರಾಗಿದ್ದರು. ಭೂಮಿ ಶ್ರೀಮಂತ ಜಮೀನ್ದಾರರ ಸೊತ್ತಾಗಿದ್ದರಿಂದ ಬೆಳೆದ ಬೆಳೆಯ ಸಿಂಹ ಪಾಲು ಶ್ರೀಮಂತರಿಗೆ ಸೇರಿದರೆ ವರ್ಷವಿಡೀ ಕಷ್ಟಪಟ್ಟು ಹಗಲು ರಾತ್ರಿ ದುಡಿದ ರೈತನಿಗೆ ಎರಡು ಹೊತ್ತಿನ ಗಂಜಿಗೂ ಸಾಲುತ್ತಿರಲಿಲ್ಲ.

ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿ ಬಡವರು ಬಡತನದ ಕೂಪದಲ್ಲಿ ಮುಳುಗಿ ಹೋಗುತ್ತಿದ್ದರು. ಇದರ ಜೊತೆ ಅಜ್ಞಾನ, ಮೂಢನಂಬಿಕೆ, ಬಡತನ, ಅಸಾಕ್ಷರತೆ ತಂದೊಡ್ದುವ ಅಸಹಾಯಕತೆ ಮತ್ತು ಅಸಮಾಧಾನಗಳು ಬಡ ಜನರಲ್ಲಿ ತುಂಬಿ ತುಳುಕುತ್ತಿದ್ದವು. ಉಳ್ಳವರ ತಿರಸ್ಕಾರ, ತಾತ್ಸಾರ, ದರ್ಪಗಳಿಗೆ ಬಲಿಯಾಗಿ ತಮ್ಮ ಅಸ್ತಿತ್ವವನ್ನೇ ಮರೆತಂತದ ಸಮುದಾಯದ ನೋವಿಗೆ ಕಿವಿಯಾದವರು ದೇವರಾಜ ಅರಸ್. ಭೂ ಸುಧಾರಣಾ ಕಾಯ್ದೆ ಒಳ್ಳೆಯದೇ ಆದರೂ ಕೂಡ ಉಳ್ಳವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಮತ್ತು ಅವರ ಆಕ್ರೋಶದಿಂದ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಅರಿವಿದ್ದು ಕರ್ನಾಟಕದಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಅದನ್ನು ಜಾರಿಗೊಳಿಸಿದವರು ದೇವರಾಜ ಅರಸ್.

ಈ ಭೂ ಸುಧಾರಣೆ ಕಾಯ್ದೆಯಲ್ಲಿ ‘ಉಳುವವನಿಗೆ ಭೂಮಿ’ ಎಂಬ ಕಾನೂನಿನ ಮೂಲಕ ತಾವು ಉಳುವ ಭೂಮಿಯ ಒಡೆತನವನ್ನು ಬಡ ರೈತರು ಹೊಂದಿದರೆ, ಶ್ರೀಮಂತರು ತಮ್ಮ ಜಮೀನನ್ನು ಕಳೆದುಕೊಂಡರು.
ಸಾಕಷ್ಟು ಜನ ಶ್ರೀಮಂತ ಜಮೀನ್ದಾರರು ಯಾವುದೇ ತಕರಾರಿಲ್ಲದೆ ಈ ಭೂ ಸುಧಾರಣಾ ಕಾಯ್ದೆಯನ್ನು ಒಪ್ಪಿಕೊಂಡರೆ, ಇದುವರೆಗೂ ದಬ್ಬಾಳಿಕೆಯಿಂದ ಬಡ ಜನರನ್ನು ಶೋಷಿಸುತ್ತಿದ್ದ ಹಲಕೆಲವರು ಈ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿದರು. ಯಾರ ಬೆದರಿಕೆಗೂ ಜಗ್ಗದೆ, ಹಿಂಜರಿಯದೆ ಕಾರ್ಯನಿರ್ವಹಿಸಿದ ವ್ಯಕ್ತಿ ಸಾಮಾಜಿಕ ಅಭಿವೃದ್ಧಿಯ ಹರಿಕಾರ ಎಂದೇ ಹೆಸರಾದ ಡಿ ದೇವರಾಜ ಅರಸು.

ಮೈಸೂರಿನ ಬಳಿಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ 1915 ಆಗಸ್ಟ್ 20ರಂದು ಜನಿಸಿದ ದೇವರಾಜ ಅರಸು ಅವರು ಅರಸು ಮನೆತನದ ಕುಡಿಯಾಗಿದ್ದರೂ ಅರಸೊತ್ತಿಗೆಯನ್ನು ದೂರಸರಿಸಿ ಜನಸೇವೆಯಲ್ಲಿ ಜನಾರ್ಧನನ ಸೇವೆಯನ್ನು ಕಂಡವರು.

ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ದಕ್ಷ ನೇತೃತ್ವದಲ್ಲಿ 1972ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅರಸ್ ಅವರು ಸಂಪುಟ ಸಹೋದ್ಯೋಗಿಗಳಾಗಿದ್ದ ಹುಚ್ಚ ಮಾಸ್ತಿ ಗೌಡ ಮತ್ತು ಹೆಚ್ ಎಂ ಚನ್ನಬಸಪ್ಪ ಇವರ ದಕ್ಷ ಜೊತೆಗಾರಿಕೆಯಲ್ಲಿ ರಾಜ್ಯವನ್ನು ಮುನ್ನಡೆಸಿದರು. ಇಂದಿರಾಗಾಂಧಿಯವರ ಪರಮ ನಿಷ್ಠರಾಗಿದ್ದವರು ಮುಂದೆ ಬದಲಾದ ಕಾಲಘಟ್ಟದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ ಅರಸು ಮುಂದೆ ಇಂದಿರಾ ಗಾಂಧಿಯವರ ಪ್ರಬಲ ವಿರೋಧಿಯಾದರು.

ಪಕ್ಷದ ಒಳ ಜಗಳದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಸ್ಥಾನಗಳೆರಡನ್ನು ಹೊಂದಿದ್ದ ದೇವರಾಜ ಅರಸು ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲು ಇಂದಿರಾ ಅವರು ಹೇಳಿದ್ದು ಅರಸು ಅವರು ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಆಯ್ಕೆಯಾಗಿರುವ ತಾನು ಬಿಟ್ಟುಕೊಡಲು ಸಾಧ್ಯವಿಲ್ಲ, ಮುಂದೆಯೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಬೇಕು ಎಂದು ಆಗ್ರಹಿಸಿದರು.
ಇದರಿಂದ ಪಕ್ಷದ ಆಂತರಿಕ ಜಗಳ ತಾರಕಕ್ಕೇರಿ ಕಾಂಗ್ರೆಸ್ ಇಬ್ಭಾಗವಾಯಿತು. ಈ ಸಮಯದಲ್ಲಿ ಒಟ್ಟು 155 ಶಾಸಕರಲ್ಲಿ 140 ಶಾಸಕರು ದೇವರಾಜ್ ಅರಸ್ ಅವರ ಪರವಾಗಿದ್ದರು. ಆದರೆ 1980 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಶಾಸಕರು ತಮ್ಮ ನಿಷ್ಠೆಯನ್ನು ಬದಲಿಸಿದ ಪರಿಣಾಮವಾಗಿ ಎಲ್ಲಾ ಲೋಕಸಭಾ ಸೀಟುಗಳನ್ನು ಕಳೆದುಕೊಂಡ ಕರ್ನಾಟಕದಲ್ಲಿ ದೇವರಾಜ ಅರಸು ಅವರು ಒಬ್ಬಂಟಿಯಾದರು.1980 ರಲ್ಲಿ ಗುಂಡುರಾವ್ ಅವರು ಮುಖ್ಯಮಂತ್ರಿ ಪದವಿಯನ್ನು ಸ್ವೀಕರಿಸಿದರು. ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೂ ಕೂಡ ತಮ್ಮ ಅಂತಿಮ ದಿನಗಳಲ್ಲಿ ಒಬ್ಬಂಟಿಯಾದ ಡಿ ದೇವರಾಜ ಅರಸು ಅವರು ಸರ್ಪ ಸುತ್ತಿನ ಕಾಯಿಲೆಯಿಂದ ತೀವ್ರವಾಗಿ ಬಳಲಿ 1982 ರಲ್ಲಿ ಕಣ್ಮುಚ್ಚಿದರು.

ಸಾಮಾಜಿಕ ಸಮಾನತೆಗೆ ಒತ್ತು ಕೊಟ್ಟು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ದೇವರಾಜ ಅರಸು ಅವರ ಜನಪರ ಕಾರ್ಯಗಳು, ಬಡತನ ನಿರ್ಮೂಲನೆಗೆ ಅವರು ಕೈಗೊಂಡ ಕಾರ್ಯಕ್ರಮಗಳು, ಭೂ ಸುಧಾರಣಾ ಕಾಯ್ದೆ ಜಾರಿ, ಕರ್ನಾಟಕದಲ್ಲಿ ಹಿಂದುಳಿದವರ, ದೀನದಲಿತರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ದೇವರಾಜ ಅರಸು ಅವರ ಹೆಸರಿನಲ್ಲಿಯೇ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಅವರ ಪ್ರಗತಿಪರ ಯೋಜನೆಗಳ ಫಲವನ್ನು ನಾವಿಂದು ಕಾಣುತ್ತಿದ್ದೇವೆ.

ಅರಸು ಮನೆತನದಲ್ಲಿ ಹುಟ್ಟಿದ್ದರೂ ಕೂಡ ಸಮಾಜದ ಕಟ್ಟ ಕಡೆಯ ಮನುಷ್ಯನ ನೋವಿನ ಆಕ್ರಂದನಕ್ಕೆ ಕಿವಿಯಾಗಿ ಆತನ ಸಮಸ್ಯೆಯನ್ನು ಬಗೆಹರಿಸಲು ಅಹರ್ನಿಶಿ ಶ್ರಮಿಸಿದ ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಡಿ ದೇವರಾಜ್ ಅರಸು ಅವರು ಕೈಗೊಂಡ ಜನಪರ ಕಾರ್ಯಗಳು ಅವರನ್ನು ಅಮರರನ್ನಾಗಿಸಿವೆ.
ಕರ್ನಾಟಕ ಘನ ಸರ್ಕಾರವು ಡಿ ದೇವರಾಜ ಅರಸು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು ಪ್ರತಿ ವರ್ಷ ಅವರ ಜನ್ಮದಿನದಂದು ಡಿ ದೇವರಾಜ ಅರಸು ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.

ವರ್ಣ, ವರ್ಗ ಸಂಕರಗಳನ್ನು ಮೀರಿ ಮನುಷ್ಯ ಸಮಾಜ ಜೀವಿ, ಪ್ರತಿಯೊಬ್ಬರು ಸಮಾನರು ಎಂಬ ಸಾಮಾಜಿಕ ಸಮಾನತೆಯನ್ನು ಸಾರಿದ ದೇವರಾಜ ಅರಸು ಅವರಿಗೆ ನಮನಗಳು.

ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ ಗದಗ್

Leave a Reply

Your email address will not be published. Required fields are marked *

error: Content is protected !!