ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶ : ಕುರಿ ನೀಡಿ ಆಹ್ವಾನಿಸಿದ ಅಭಿಮಾನಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೪- ಸರ್ವೋಚ್ಚ ನ್ಯಾಯಾಲಯದ ಅನುಮತಿಯ ಮೇರೆಗೆ ಬಳ್ಳಾರಿಗೆ ಆಗಮಿಸಿದ ಮಾಜಿ ಸಚಿವ, ಗಂಗಾವತಿಯ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಯವರನ್ನು ಅಭಿಮಾನಿಗಳು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.
೧೪ ವರ್ಷಗಳ ನಂತರ ಬಳ್ಳಾರಿ ನಗರಕ್ಕೆ ಆಗಮಿಸಿದ ಜನಾರ್ದನ್ ರೆಡ್ಡಿ ಹೊರವಲಯದಲ್ಲಿರುವ ರಾಮೇಶ್ವರಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದರು, ನಂತರ ಅಲ್ಲಿಪುರ ತಾತನವರ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ರೆಡ್ಡಿಯವರ ಅಭಿಮಾನಿಗಳು ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕೌಲ್ ಬಜಾರ್ ರೇಡಿಯೋ ಪಾರ್ಕ್ ಮೋತಿ ಸರ್ಕಲ್ ರಾಯಲ್ ಸರ್ಕಲ್ ಮೂಲಕ ನಗರ ಆರಾಧ್ಯ ದೇವತೆ, ಕನಕ ದುರ್ಗಮ್ಮ ದೇವಸ್ಥಾನಕ್ಕೆ ಕರೆತಂದರು. ಅನಂತರ ರೆಡ್ಡಿಯವರು ಅವರ ಧರ್ಮಪತ್ನಿ ಲಕ್ಷ್ಮಿ ಅರುಣ ಸಮೇತವಾಗಿ, ದೇವಿಗೆ ವಿಶೇಷ ಪೂಜೆಗಳನ್ನು ನೆರೆವೇರಿಸಿದರು. ನಂತರ ಎಸ್ಪಿ ಸರ್ಕಲ್ ಮುಖಾಂತರ ತಮ್ಮ ಮನೆಗೆ ಹೊರಟರು.
ಈ ಮಧ್ಯೆ ದಾರಿ ಉದ್ದಕ್ಕೂ ಹಲವಾರು ಕ್ರೇನ್ ಮುಖಾಂತರ ಜನಾರ್ದನ ರೆಡ್ಡಿ ಅವರಿಗೆ ಭಾರಿ ಹೂವಿನ ಹಾರಗಳನ್ನು ಹಾಕುವ ಮೂಲಕ ಮತ್ತು ಪುಷ್ಪಗುಚ್ಛಗಳನ್ನು ನೀಡಿ ಪುಷ್ಪಾರ್ಚನೆಗೈದರು.
ಅಭಿಮಾನಿ ಒಬ್ಬ ರೆಡ್ಡಿಯವರಿಗೆ ಕುರಿಯನ್ನು ನೀಡಿದ್ದು ವಿಶೇಷವಾಗಿತ್ತು. ಈ ಮೆರವಣಿಗೆಯಲ್ಲಿ ಜನಾರ್ದನ ರೆಡ್ಡಿ ಅವರ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು. ೧೪ ವರ್ಷಗಳ ನಂತರವೂ ಸಹ ಅವರ ಮೇಲೆ ಇಟ್ಟ ವಿಶ್ವಾಸ ಮತ್ತು ನಂಬಿಕೆಯನ್ನೂ ಕಂಡ ರೆಡ್ಡಿ ಭಾವುಕರಾದರು.
