
ಸಂಸ್ಕಾರದಿಂದ ಮಾತ್ರ ಉಜ್ಜಲ ಭವಿಷ್ಯ ನಿರ್ಮಾಣ ಸಾಧ್ಯ : ಶ್ರೀಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- ಸಂಸ್ಕಾರದಿಂದ ಮಾತ್ರ ಉಜ್ಜಲ ಭವಿಷ್ಯ ನಿರ್ಮಾಣ ಸಾಧ್ಯವಿದೆ ಹೀಗಾಗಿ ಜಂಗಮ ಸಮಾಜದಲ್ಲಿ ಜನಿಸಿದ ಪ್ರತಿಯೊಬ್ಬರೂ ಅಯ್ಯಚಾರ ಸಂಸ್ಕಾರ ಪಡೆದು ಪೂಜೆ ಅನುಷ್ಟಾನಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಮೈನಳ್ಳಿ- ಬಿಕನಳ್ಳಿ ಉಜ್ಜಯನಿ ಶಾಖಾ ಮಠದ ಪೂಜ್ಯ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳವರು ಹೇಳಿದರು.
ಮಂಗಳವಾರ ನಗರದ ಶ್ರೀ ಮಹಾಂತಯ್ಯಮಠ ಕಲ್ಯಾಣ ಮಂಟಪದಲ್ಲಿ ಜಂಗಮ ವಟುಗಳ ಅಯ್ಯಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿತ್ಯವೂ ಸ್ನಾನ ಮಾಡಿ ಪೂಜೆ ಮಾಡಿದ ನಂತರ ಪ್ರಸಾದ ಸ್ವೀಕರಿಸುವ ಪದ್ಧತಿ ರೂಢಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಂಸ್ಕಾರ ಹೊಂದಲು ಸಾಧ್ಯ ಎಂದು ಆಶೀರ್ವಚನ ನೀಡಿದರು.
ವೀರೇಶ ಮಹಾಂತಯ್ಯಮಠ ಅವರು ಅಯ್ಯಾಚಾರ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು. ನಂತರ ಪೂಜ್ಯರು ಜಂಗಮ ವಟುಗಳಿಗೆ ಮಂತ್ರೋಪದೇಶ ಮಾಡುವುದರೊಂದಿಗೆ ಆಚಾರ ವಿಚಾರದಿಂದ ನಡೆದುಕೊಳ್ಳಬೇಕು. ನಿತ್ಯ ಲಿಂಗಧಾರಿಗಳಾಗಬೇಕು. ನಿತ್ಯ ಪಂಚಾಕ್ಷರಿ ಮಹಾಮಂತ್ರ ಪಠಿಸಬೇಕು. ಭಸ್ಮ, ಮಂತ್ರ, ಪೂಜೆ, ಶಿವನ ಆರಾಧನೆ, ಗುರುಕಾರುಣ್ಯ, ಜಂಗಮ ಮೂಲ ಮಂತ್ರವಾಗಿದೆ. ಜನನ ಮತ್ತು ಮರಣದಲ್ಲಿಯೂ ಸಹ ಜಂಗಮರ ಅಗತ್ಯವಿದೆ. ನಾವು ಮಾಡುವ ಕಾಯಕದಲ್ಲಿ ಆನಂದ ಕಾಣಬೇಕು ಎಂದು ಉಪದೇಶ ಮಾಡಿದರು.
ಹರ್ಷ ಹೆಚ್.ಎಂ. ಮಂಜುನಾಥ, ಆಕಾಶ ರಾಜಶೇಖರಯ್ಯ ಎಸ್, ಸಮರ್ಥ ಶಿವಕುಮಾರ್ ಹಿರೇಮಠ ಸೇರಿದಂತೆ ಅನೇಕರು ಅಯ್ಯಾಚಾರ ಹಾಗೂ ಲಿಂಗದೀಕ್ಷೆ ಪಡೆದರು.
ಈ ವೇಳೆ ಮುರುಗೇಶ ಜಂಗೀನ, ವೀರೇಶ ಮಹಾಂತಯ್ಯಮಠ, ವಿಶ್ವನಾಥ ಮಹಾಂತಯ್ಯಮಠ, ಶಿವಮೂರ್ತಯ್ಯ ಮಹಾಂತಯ್ಯಮಠ ಸೇರಿದಂತೆ ಮಹಾಂತಯ್ಯಮಠ ಕುಟುಂಬದ ಸದಸ್ಯರು ಭಾಗವಹಿಸಿ ಜಂಗಮ ವಟುಗಳ ಅಯ್ಯಚಾರ ಕಾರ್ಯಕ್ರಮ ನೆರವೇರಿಸಿದರು.