
ಸೇವಾನಿರತ ಪ್ರಾಥಮಿಕ ಶಾಲೆ ಶಿಕ್ಷಕರಿಂದ ಬೀದಿಗೆ ಇಳಿದು ಹೋರಾಟ
ಕುಷ್ಟಗಿ:- ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು, ತಾಲೂಕು ಘಟಕ ಕುಷ್ಟಗಿ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರು ಬೀದಿಗೆ ಇಳಿದು ಹೋರಾಟವನ್ನು ಮಾಡುವ ಮೂಲಕ ಶಾಲಾ ಶಿಕ್ಷಕರ ಹಿಂಬಡ್ತಿಯ ವಿರುದ್ಧ ಹಾಗೂ ಶಿಕ್ಷಕರಿಗೆ ಮುಖ್ಯ ಗುರುಗಳ ಬಡ್ತಿ ನೀಡುತ್ತಿರುವ ಅನ್ಯಾಯವನ್ನು ಖಂಡಿಸಿ ಜಾಥಾ ಮೂಲಕ ತೆರಳಿ ತಹಶಿಲ್ದಾರ ಅಶೋಕ ಶಿಗ್ಗಾವಿ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಕುದರಿ ಮಾತನಾಡಿ 2017ರ ವರಗೆ ನೇಮಕವಾದ ಶಿಕ್ಷಕರನ್ನು 1 ರಿಂದ 7ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಿ ಉಲ್ಲೇಖ ( 1)ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು, 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು ಹಾಗೂ ಯಾವುದೇ ಕಾರಣಕ್ಕೂ 2018ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು. 2018ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ, ಮೂಲತ 1-7/ ಕ್ಕೆ ನೇಮಕ ಹೊಂದಿದವರನ್ನು PST ಎಂದು ಪದನಾಮ ಮಾಡಿ 1-5 ಕ್ಕೆ ನಿಯಮಿತಗೊಳಿಸಿರುವುದನ್ನು ಹಿಂಪಡೆಯಬೇಕು.ಅರ್ಹ ವಿದ್ಯಾರ್ಹತೆ ಪೂರೈಸಿದ 1 ರಿಂದ 8ನೇ ತರಗತಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಮುಗಿಯುವವರೆಗೂ ಈ ಮೊದಲಿನಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು, ಮುಖ್ಯ ಗುರುಗಳು ಹಾಗೂ ಹಿರಿಯ ಮುಖ್ಯ ಗುರಿಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು, ಅರ್ಹ ಪದವಿ ಶಿಕ್ಷಣ ತರಬೇತಿ ಹೊಂದಿದ 2016ಕ್ಕಿಂತ ಪೂರ್ವದಲ್ಲಿ ನೇಮಕಾತಿ ಆಗಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಸೇವಾ ಜೇಷ್ಟತೆಯ ರಕ್ಷಣೆಯೊಂದಿಗೆ ಬಡ್ತಿ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೈದರಅಲಿ ಜಾಲಿಹಾಳ, ಶ್ರೀಮತಿ ಎಚ್.ಗಿರಿಜಾದೇವಿ, ಗುರಪ್ಪ ಕುರಿ, ರುದ್ರಪ್ಪ ಬೂದಿಹಾಳ, ಸಿದ್ರಾಮಪ್ಪ ಅಮರಾವತಿ, ಮಂಜಪ್ಪ ಪೂಜಾರ, ಲಕ್ಷ್ಮಣ ಪೂಜಾರ ನಿಂಗಪ್ಪ , ಹೊನ್ನಪ್ಪ ಡೊಳ್ಳಿನ್, ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.