ಎರೆಹುಳು ಗೊಬ್ಬರ ಘಟಕ ಆರಂಭಿಸಲು ಚಿಂತನೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಚಿಲವಾಡಗಿ
ಕೊಪ್ಪಳ, ೨೪- ರೈತರ ಹಾಗೂ ಗ್ರಾಹಕರ ಸಹಕಾರದಿಂದ ಈ ಸಾಲಿನಲ್ಲಿ ಸಂಘಕ್ಕೆ ೧೦೫.೪೫ ಲಕ್ಷ ಲಾಭವಾಗಿದ್ದು ಲಾಭವಾದ ಹಣವನ್ನು ಸದಸ್ಯರಿಗೆ ನೀಡುವುದರ ಜೋತೆಗೆ ಬರುವ ದಿನಗಳಲ್ಲಿ ರೈತರಿಗಾಗಿ ಎರೆಹುಳು ಗೊಬ್ಬರ ಘಟಕ ಮಾಡಲು ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಕಿನ್ನಾಳದ ಅಧ್ಯಕ್ಷ ಬಸವರಾಜ ಚಿಲವಾಡಗಿ ಹೇಳಿದರು.
ಅವರು ಸಂಘದ ಕಚೇರಿಯಲ್ಲಿ ಜರುಗಿದ ೬೫ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
೨೦೦೮ ಏಪ್ರೀಲ್ ೦೧ ರಿಂದ ಇಲ್ಲಿಯವರೆಗೆ ಎಲ್ಲ ಲೆಕ್ಕ ಪತ್ರಗಳನ್ನು ಗಣಕೀಕರಣಗೊಳಿಸಿದ್ದು ಕಾಗದ ರಹಿತ ಸಹಕಾರ ಸಂಘ ನಮ್ಮದು ರಾಜ್ಯದಲ್ಲಿ ಮೊದಲನೆಯದಾಗಿದೆ , ಗಣಕೀರಣದಿಂದ ಸದಸ್ಯರಿಗೆ ಶೀಘ್ರದಲ್ಲಿ ತ್ವರಿತ ಸೇವೆ ತಲುಪಿಸುವ ಉದ್ದೇಶ ನಮ್ಮದಾಗಿದ್ದು ಸದಸ್ಯರ ವ್ಯವಹಾರಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.
ರೈತರಿಗಾಗಿ ಹೆಚ್ಚು ರಸಗೊಬ್ಬರ ಹಾಗೂ ಬೀಜಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ರೈತರ ಹಿತಕ್ಕಾಗಿ ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ ಮಾತನಾಡಿ ಈ ಸಂಘವು ಮಾದರಿ ಸಹಕಾರ ಸಂಘವಾಗಿದ್ದು, ಇಲ್ಲಿಯ ಸದಸ್ಯರ ಸಹಕಾರ ಸಿಬ್ಬಂದಿಯ ಶ್ರಮದಿಂದ ರೈತರಿಗೆ ರಸಗೊಬ್ಬರ ಗೋದಾಮು ಸೇರಿದಂತೆ ಎಲ್ಲ ಸೌಲಭ್ಯಗಳು ನೀಡುವಲ್ಲಿ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ಸಹಕಾರಿ ಅಮರೇಶ ಉಪಲಾಪುರ ಮಾತನಾಡಿ ನಮ್ಮ ಸಹಕಾರಿ ಸಂಘ ವ್ಯವಹಾರ ಹಾಗೂ ಮರುಪಾವತಿಗೆ ರಾಜ್ಯದಲ್ಲೇ ಎಂಟನೇ ಹಾಗೂ ಹೈದ್ರಾಬಾದ್ ಕರ್ನಾಟದಲ್ಲಿ ಪ್ರಥಮ ಸ್ಥಾನ ಹೊಂದಿದ್ದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ.
ಆರಂಭದಲ್ಲಿ ಮೂರು ಜನ ಉದ್ಯೋಗಿಗಳಿಂದ ಆರಂಭವಾದ ನಮ್ಮ ಸಹಕಾರಿ ಸಂಘ ಇಂದು ೨೦ ಜನ ಸಿಬ್ಬಂದಿ ರೈತರಿಗೆ ಹಾಗೂ ಗ್ರಾಹಕರಿಗೆ ಮಾದರಿ ಸೇವೆ ಸಲ್ಲಿಸುತ್ತಿದ್ದಾರೆ. ರೈತರಿಗೆ ೮.೩೫ಕೋಟಿ ಕೃಷಿ ಸಾಲ (ಬಡ್ಡಿ ರಹಿತ) ಹಾಗೂ ೪೩.೬೦ ಕೋಟಿ ಕೃಷಿಯೇತರ ಸಾಲ ಸೇರಿದಂತೆ ಇತರ ಸೇವೆಗಳನ್ನು ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಪ್ರಗತಿಪರ ಕೃಷಿಕ ಹನುಮಂತ ವಾಲಿಕಾರ ಮಾತನಾಡಿ ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು, ಆಧುನಿಕ ರಸಗೊಬ್ಬರ ಹಾಗೂ ಬೀಜದಿಂದ ಭೂಮಿ ವಿಷಮಯವಾಗುತ್ತಿದ್ದು, ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಕೊಡಲು ರೈತರು ಚಿಂತಿಸಬೇಕು.
ರೈತ ಎಣ್ಣೆ, ಗೊಬ್ಬರ ಭ್ರಮೆಯಿಂದ ಹೊರಬಂದು ಸಾವಯವ ಕೃಷಿಯತ್ತ ಒತ್ತು ನೀಡಿ ಜಾಗೃತರಾಗಬೇಕು. ನಾನು ಕೇವಲ ೩.೦೫ ಎಕರೆ ಹೊಲದಲ್ಲಿ ಪ್ರತಿ ವರ್ಷ ಸಾವಯವ ಕೃಷಿ ಮೂಲಕ ೮ ರಿಂದ ೧೦ ಲಕ್ಷ ಆದಾಯ ತಗೆಯುತ್ತಿದ್ದು, ನೀವು ಸಹ ನಮ್ಮ ಪ್ರಾಚೀನ ಕೃಷಿ ಪದ್ದತಿಗೆ ಮರಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುದರಿಮೋತಿ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಅಮೃತಾ ಅಶೋಕ, ನಿರ್ದೇಶಕರಾದ ಮಹಾದೇವಯ್ಯ ಹಿರೇಮಠ, ಕೆ. ಮಲ್ಲಿಕಾರ್ಜುನ, ರವೀಂದ್ರನಾಥ, ಶ್ರೀಮತಿ ಮಲ್ಲಮ್ಮ, ಮೌನೇಶ ಕಳ್ಳಿಮನಿ, ಈರಣ್ಣ ವಾಲ್ಮೀಕಿ, ಮಂಜುನಾಥ, ರಮೇಶ, ಜಗದೀಶ, ಬ್ಯಾಂಕ್ ಪ್ರತಿನಿಧಿ ಚಂದ್ರಶೇಖರಗೌಡ ಪಾಟೀಲ ಇದ್ದರು.
