ಚಾರ್ ಸೌ ಎನ್ನುತ್ತಿದ್ದವರಿಗೆ ತೀನ್ ಸೌ ದಾಟಲಾಗಲಿಲ್ಲ : ಅಮರೇಗೌಡ ಬಯ್ಯಾಪುರ
ಕರುನಾಡ ಬೆಳಗು ಸುದ್ದಿ
ಕುಷ್ಟಗಿ, 5- ಪ್ರಧಾನ ಮಂತ್ರಿ ನರೇಂದ್ರ ಮೋದಿವರು ಹಾಗೂ ಅವರ ನಾಯಕರು ಚಾರ್ ಸೌ ದಾಟುತ್ತೇವೆ ಎನ್ನುತ್ತಿದ್ದವರು ಈಗ ಬಿಜೆಪಿ ಪಕ್ಷಕ್ಕೆ ತೀನ್ ಸೌ ದಾಟಲು ಆಗದೇ ದೇಶಾಧ್ಯಂತ ವಿರೋಧಿ ಅಲೆ ಸ್ಪಷ್ಟವಾಗಿದೆ ಎಂದು ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಪಟ್ಟಣದ ತಮ್ಮ ನಿವಾಸದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು
ನಾಲ್ಕು ನೂರು ಸೀಟ್ ಎನ್ನುತ್ತಿದ್ದವರು ಸರಕಾರ ರಚಿಸಲು ಈಗ ಪರದಾಡುತ್ತಿದ್ದಾರೆ. ರಾಜ್ಯದಲ್ಲಿಯೂ ಸಹ ಕಾಂಗ್ರೆಸ್ ಬೆಳವಣಿಗೆ ಶರವೇಗ ಪಡೆದುಕೊಂಡಿದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕಳೆದ ಬಾರಿ ಕೇವಲ ಒಂದು ಸೀಟು ಮಾತ್ರ ಗೆದ್ದಿತ್ತು ಆದರೆ ಈ ಬಾರಿ ನಮ್ಮ ಜನಪ್ರೀಯ ಮುಖ್ಯಮಂತ್ರಿ ಸಿ.ಎಂ.ಸಿದ್ರಾಮಯ್ಯ ಮತ್ತು ಜೋಡೆತ್ತು ಎಂದು ಕರೆಸಿಕೊಳ್ಳುವ ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಶ್ರಮದಿಂದ ಕರ್ನಾಟಕ ರಾಜ್ಯದಲ್ಲಿ ಈ ಬಾರಿ 9 ಸೀಟುಗಳನ್ನು ಗೆದ್ದಿದೆ ಮತ್ತು ನಮ್ಮ ದೇಶದಲ್ಲಿ ಇಂಡಿಯಾ ಮೈತ್ರಿಯಿಂದ 233 ಕ್ಷೇತ್ರಗಳಲ್ಲಿ ಇವತ್ತು ಕಾಂಗ್ರೆಸ್ ಪಕ್ಷ ಗೆದ್ದುಕೊಂಡಿದೆ. ಮುಂದಿನ ದಿನಮಾನಗಳಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಇನ್ನು ಹೆಚ್ಚಿನ ಸೀಟುಗಳನ್ನು ಗೆದ್ದು ಸ್ವಂತ ಬಲದಿಂದ ಅಧಿಕಾರವನ್ನು ನಡೆಸುತ್ತದೆ ಬಿಜೆಪಿ ಪಕ್ಷದಿಂದ ಇವತ್ತು ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ ಈ ದೇಶದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಜನ ರೋಷಿ ಹೋಗಿದ್ದಾರೆ. ಅದಕ್ಕಾಗಿ ಜನ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿದ್ದಾರೆ.ನಮ್ಮ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಕಾಂಗ್ರೇಸ್ ಪಕ್ಷ ಸೋಲನ್ನು ಅನುಭವಿಸಿತ್ತು. ಇವತ್ತು ಮೂರನೇ ಬಾರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಜನತೆ ಕಾಂಗ್ರೇಸ್ ಪಕ್ಷಕ್ಕೆ ಮತವನ್ನು ಕೊಟ್ಟು ಗೆಲ್ಲಿಸಿದ್ದಾರೆ. ಗೆಲುವಿಗಾಗಿ ಶ್ರಮಿಸಿದ ಕಾಂಗ್ರೇಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಕರಡಿ ಸಂಗಣ್ಣ ನಮಗೆ ಆನೆಬಲ: ನಮ್ಮ ಪಕ್ಷಕ್ಕೆ ಕರಡಿ ಸಂಗಣ್ಣನವರು ಆಗಮಿಸಿದ್ದರ ಹಿನ್ನಲೆಯಲ್ಲಿ ನಮ್ಮ ಪಕ್ಷಕ್ಕೆ ಆನೆಬಲ ಬಂದಂತಾಗಿದ್ದು ಈ ಪರಿಣಾಮವಾಗಿ ಅವರ ಅನೇಕ ಕಾರ್ಯಕರ್ತರು ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಿದರ ಪರಿಣಾಮವಾಗಿ ಇಂದು ಜಯಸಿಕ್ಕಿದೆ ಎನ್ನಬಹುದು ಹಾಗೂ ಹಿಟ್ನಾಳ ಕುಟುಂಬದ ಮೇಲಿನ ಅನುಕಂಪವು ಒಂದು ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾವರಗೇರಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ನಾಲತವಾಡ ಇದ್ದರು.
