ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸುವೆ – ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,21- ನಾನಾ ಕಾರಣಗಳಿಂದ ಪಕ್ಷ ತೊರೆದ ಎಲ್ಲ ನಾಯಕರು, ಮುಖಂಡರನ್ನು ಮತ್ತೆ ಪಕ್ಷಕ್ಕೆ ಕರೆ ತರಲು
ಪ್ರಾಮಾಣಿಕವಾಗಿ ಶ್ರಮಿಸುವೆ, ಪಕ್ಷ ನನಗೆ ತಾಯಿ ಸಮಾನ ಇದ್ದಂತೆ, ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲರನ್ನೂ
ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಹೇಳಿದರು.
ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಪ್ರಧಾನ ಮಂತ್ರಿ ಎಚ್. ಡಿ.ದೇವೇಗೌಡ್ರು, ಮಾಜಿ ಸಿ.ಎಂ. ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಅವರು ಸೇರಿದಂತೆ ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸ, ನಂಬಿಕೆ ಇಟ್ಟು, ಎರಡನೇ ಬಾರಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಅವರ ನಂಬಿಕೆ, ನಿರೀಕ್ಷೆಯಂತೆ ಅವಧಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ, ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ತಳಮಟ್ಟದಿಂದ ಸಂಘಟಿಸಿ, ಬಲಿಷ್ಟಗೊಳಿಸುವೆ. ಚುನಾವಣೆ ವೇಳೆ ವರಿಷ್ಠರು ಮಹತ್ವದ ಜವಾಬ್ದಾರಿಯನ್ನು ನೀಡಿದ್ದು, ಅವರ ನಿರೀಕ್ಷೆಯಂತೆ ಕೆಲಸ ನಿರ್ವಹಿಸುವೆ, ನಾನು ಎಂದು ಅಧಿಕಾರಕ್ಕಾಗಿ ಅಂಟಿಕೊಂಡ ವ್ಯಕ್ತಿ ನಾನಲ್ಲ, ಪಕ್ಷ ಸಂಘಟನೆ, ಜನರ ದನಿಯಾಗಿ ಅನೇಕ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ನ್ಯಾಯ ಕಲ್ಪಿಸುವ ಕೆಲಸ ಮಾಡಿರುವೆ, ಎಲ್ಲರಂತೆ ಸುಳ್ಳು ಹೇಳುವ ಜಾಯಮಾನ ನನ್ನದಲ್ಲ, ಅದು ನನಗೆ ಬೇಕಿಲ್ಲ ಎಂದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ವರಿಷ್ಟರು ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಅತ್ಯಂತ ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸುವೆ, ಕಾರ್ಯಕರ್ತರೇ ಪಕ್ಷದ ಮಾಲೀಕರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಸಂಚರಿಸಿ ಪಕ್ಷವನ್ನು ಸಂಘಟಿಸುವೆ. ನಮ್ಮ ಗುರಿ ಮುಂದಿನ ಚುನಾವಣೆ, ಜಿ.ಪಂ. ಹಾಗೂ ತಾ.ಪಂ.ಹಾಗೂ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬುದನ್ನು ಸಾಬೀತುಪಡಿಸುವೆ. ಜಿಲ್ಲೆಯಲ್ಲಿ ಜೆಡಿಎಸ್ ಗಟ್ಟಿಯಾಗಿದ್ದು, ನಮ್ಮದೇ ಆದ ಕಾರ್ಯಕರ್ತರ ಪಡೆಯಿದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂಡೂರಿನ ಕುರೇಕೊಪ್ಪ ಎನ್.ಸೋಮಪ್ಪ, ಕಂಪ್ಲಿ ರಾಜು ನಾಯ್ಕ್, ವಿಜಯನಗರ ಜಿಲ್ಲಾಧ್ಯಕ್ಷ ಕೊಟ್ರೇಶ, ಬೈಲೂರು ಲಕ್ಷ್ಮಿಕಾಂತ್ ರೆಡ್ಡಿ, ವಂಡ್ರಿ, ಅದ್ದಿಗೆರಿ ರಾಮಣ್ಣ, ಸೇರಿದಂತೆ ಇತರರು ಇದ್ದರು. ಇದಕ್ಕೂ ಮುನ್ನ ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ವಿಶೇಷ ಹೋಮ, ಹವನ, ವಿಶೇಷ ಪೂಜೆಗಳು ನಡೆದವು. ಕಳೆದ ಕೆಲ ವರ್ಷಗಳಿಂದ ಮಂಕಾಗಿದ್ದ ಜಿಲ್ಲಾ ಕಚೇರಿ ಜನರಿಂದ ತುಂಬಿ ತುಳುಕುತ್ತಿತ್ತು
