ಮೇಲ್ಮನೆಯ ಎಲ್ಲ ಸ್ಥಾನ ಗೆಲ್ಲಲು ಪ್ರಯತ್ನ : ಆರ್.ಅಶೋಕ್
ಕರುನಾಡ ಬೆಳಗು ಸುದ್ದಿ
ಬೆಂಗಳೂರು: ಚುನಾವಣೆ ನಡೆಯುತ್ತಿರುವ ವಿಧಾನಪರಿಷತ್ತಿನ ಎಲ್ಲ 6 ಸ್ಥಾನಗಳಲ್ಲಿ ಗೆಲ್ಲಲು ಮಾಡಬೇಕಾದ ಪ್ರಯತ್ನದ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಮುಖರ ಸಭೆಯು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಆರ್.ಅಶೋಕ್ ಅವರು, ಬೂತ್ನಲ್ಲಿ ಮತದಾರರನ್ನು ಹುಡುಕಿ ಅವರಿಗೆ ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಲು ವಿನಂತಿಸಬೇಕು. ವಿಧಾನಸಭಾ ಮಟ್ಟದಲ್ಲಿ ಸಭೆ ನಡೆಸಬೇಕೆಂದು ನಿರ್ಧರಿಸಿದ್ದಾಗಿ ತಿಳಿಸಿದರು. ಪಕ್ಷದ ಪ್ರಮುಖರು, ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದೆ ಎಂದರಲ್ಲದೆ, ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆ ಸಂಬಂಧ ಯಾರು ಅಭ್ಯರ್ಥಿಗಳು ಎಂದು ಕೇಂದ್ರದ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. ಈ ವಿಚಾರದಲ್ಲಿ ಗೊಂದಲಗಳೇನೂ ಇಲ್ಲ ಎಂದು ನುಡಿದರು.
ಫೋನ್ ಟ್ಯಾಪಿಂಗ್ ಎಂಬುದು ಅಕ್ರಮ : 40-50 ಲಕ್ಷ ಕೊಟ್ಟರೆ ಚೀನಾದಿಂದ ಇಂಥ ಫೋನ್ ಟ್ಯಾಪಿಂಗ್ ಯಂತ್ರ ಅಕ್ರಮವಾಗಿ ಸಿಗುತ್ತದೆ. ಫೋನ್ ಟ್ಯಾಪಿಂಗ್ ಎಂಬುದು ಅಕ್ರಮ. ಚೀನಾದಿಂದ ಖರೀದಿಸಿದ ಫೋನ್ ಟ್ಯಾಪಿಂಗ್ ಯಂತ್ರಗಳು ಕರ್ನಾಟಕಕ್ಕೆ ಎಷ್ಟು ಬಂದಿವೆÉ? ಯಾರ್ಯಾರ ಮನೆಯಲ್ಲಿ ಇದೆ? ಎಂಬುದನ್ನು ಪತ್ತೆ ಮಾಡಬೇಕು ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ವಿರೋಧ ಪಕ್ಷದವರ ಫೋನ್ ಟ್ಯಾಪಿಂಗ್ ಮಾಡುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ನನಗೂ ಹೇಳಿದ್ದಾರೆ. ಸರಕಾರ ಫೋನ್ ಟ್ಯಾಪಿಂಗ್ ಮಾಡುತ್ತಿಲ್ಲ ಎಂದಾದರೆ ಇಂಥ ಯಂತ್ರಗಳು ಎಲ್ಲೆಲ್ಲಿ ಇವೆ ಎಂದು ತನಿಖೆ ಮಾಡಲಿ. ಅಂಥ ಯಂತ್ರಗಳನ್ನು ವಶಕ್ಕೆ ಪಡೆಯಲಿ. ಆಗ ಯಾರು ಮಾಡಿದ್ದಾರೆ, ಯಾರು ಮಾಡಿಸಿದ್ದಾರೆ ಎಂಬ ಅಂಶ ಬಯಲಿಗೆ ಬರಲಿದೆ ಎಂದರು.
ಕುಮಾರಸ್ವಾಮಿಯವರು ಅವರಿಗೆ ಇರುವ ಮಾಹಿತಿಯಲ್ಲಿ ಇದನ್ನು ಹೇಳಿದ್ದಾರೆ. ಯಾರೇ ಆಗಲಿ; ಈ ಥರ ಫೋನ್ ಟ್ಯಾಪಿಂಗ್ ಮಾಡುವುದು ಅಪರಾಧ. ಅಂಥವರನ್ನೆಲ್ಲ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು. ಫೋನ್ ಟ್ಯಾಪಿಂಗ್ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.
ಈ ವಿಷಯವನ್ನು ಸರಕಾರವು ಸಿಬಿಐ ತನಿಖೆಗೆ ಒಪ್ಪಿಸಲಿ. ಸರಕಾರ ಇಂಥ ಅಕ್ರಮ ಮಾಡಿಲ್ಲ ಎಂದು ಧೈರ್ಯದಿಂದ ಹೇಳುವುದಾದರೆ ಸಿಬಿಐ ತನಿಖೆ ಮಾಡಿಸಲಿ. ಫೋನ್ ಟ್ಯಾಪಿಂಗ್ ಯಂತ್ರಗಳನ್ನು ಬೇರೆ ದೇಶದಿಂದ ಖರೀದಿಸಿರುವ ಸಾಧ್ಯತೆ ಇದ್ದು, ಇಲ್ಲಿನ ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ನುಡಿದರು. ಅದು ಬಿಟ್ಟು ನಾವು ಮಾಡಿಲ್ಲ ಎಂದರೆ ಯಾರು ನಂಬುತ್ತಾರೆ ಎಂದು ಅವರು ತಿಳಿಸಿದರು.
