
ಸ್ಥಳೀಯ ಉತ್ಪನ್ನಗಳಿಗೆ ನೇರವಾಗಿ
ಮಾರುಕಟ್ಟೆಗೆ ಮೇಳಗಳು ಸಹಕಾರಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೩- ಆರ್ಥಿಕ ಸ್ವಾವಲಂಬನೆಗಾಗಿ ಸ್ಥಳೀಯವಾಗಿ ಉತ್ಪಾದಿಸಿದ ವಸ್ತುಗಳಿಗೆ ನೇರ ಮಾರುಕಟ್ಟೆ ಸೌಲಭ್ಯ ಒದಗಿಸಲು ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಆರ್.ಲಿಂಗರಾಜು ಅವರು ಹೇಳಿದರು.
ನವದೆಹಲಿಯ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ, ಬೆಂಗಳೂರು ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿ,(ಕಾವೇರಿ ಹ್ಯಾಂಡಲೂಮ್ಸ್), ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಗಡಿಗಿ ಚೆನ್ನಪ್ಪ ವೃತ್ತದ ಬಳಿಯ ಗಾಂಧಿ ಭವನದಲ್ಲಿ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜ.02ರಿಂದ ಜ.15ರವರೆಗೆ (14 ದಿನಗಳವರೆಗೆ) ಏರ್ಪಡಿಸಲಾದ ರಾಜ್ಯ ಮಟ್ಟದ ವಿಶೇಷ ಕೈಮಗ್ಗ ಮೇಳ ವಸ್ತ್ರಸಿರಿ-2024 ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರು ಮತ್ತು ನೇಕಾರರು ಇಬ್ಬರೂ ಬಡವರ್ಗದವರಾಗಿದ್ದೂ, ಸ್ವಾವಲಂಬಿ ಬದುಕುಗಾಗಿ ತಾವೇ ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವುದು ಅತ್ಯಂತ ಶ್ಲಾಘನೀಯ ಕೆಲಸ. ಇದರಿಂದ ಅನೇಕ ಉತ್ಪಾದಕರಿಗೆ ನೇರವಾಗಿ ಮಾರುಕಟ್ಟೆಯಲ್ಲಿ ಮತ್ತು ಉದ್ಯಮದಲ್ಲಿ ತೊಡಗಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಜಿಪಂ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಬಿ.ವಿಠಲ ರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಜ.02ರಿಂದ 15ರ ವರೆಗೆ 14 ದಿನಗಳ ವರೆಗೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಸಾರ್ವಜನಿಕರು ಮತ್ತು ನಗರವಾಸಿಗಳು `ಕೈ ಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ’ದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಮೇಳದಲ್ಲಿ ಉತ್ತಮ ವಿವಿಧ ನಮೂನೆಯ ಬಣ್ಣ ಬಣ್ಣದ ಹತ್ತಿ ಮತ್ತು ರೇಷ್ಮೆ ಸೀರೆ, ಟವೆಲ್, ಗುಡಾರ, ಲುಂಗಿ, ಬೆಡ್‍ಶೀಟ್, ಮೊಳಕಾಲ್ಮೂರು ಸೀರೆ, ಗದ್ವಾಲ್ ಸೀರೆ, ಕೈವಸ್ತ್ರ, ಕಂಬಳಿ, ಉಣ್ಣೆ ರಗ್ಗು, ಡೋರ್ ಮ್ಯಾಟ್, ವಾಲ್ ಹ್ಯಾಂಗಿಗ್ಸ್, ಡ್ರೆಸ್ ಮೆಟಿರಿಯಲ್, ಖಾದಿ ಬಟ್ಟೆಗಳು, ಸಂಡೂರಿನ ಲಮಾಣಿ ಕಸೂತಿ ಉತ್ಪನ್ನಗಳು ಲಭ್ಯವಿರಲಿವೆ. ಕೈಮಗ್ಗ ನೇಕಾರರಿಂದ ನೇರವಾಗಿ ಗ್ರಾಹಕರಿಗೆ ಶೇ.20 ರಷ್ಟು ರಿಯಾಯಿತಿ ದರದಲ್ಲಿ ಸಿಗಲಿವೆ ಎಂದರು. ಮೇಳದಲ್ಲಿ ಸ್ಥಳೀಯ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಒಟ್ಟು 61 ಮಳಿಗೆಗಳನ್ನು ಹಾಕಲಾಗಿತ್ತು. ನಂತರದಲ್ಲಿ ಮಹಾನಗರ ಪಾಲಿಕೆಯ ಉಪಮಹಾಪೌರರಾದ ಬಿ.ಜಾನಕಿ ಅವರು ಮಳಿಗೆಗಳನ್ನು ಸಾಂಕೇತಿಕವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಕಾವೇರಿ ಹ್ಯಾಂಡ್‍ಲೂಮ್ಸ್‍ನ ಅಧ್ಯಕ್ಷರಾದ ಬಿ.ಜೆ.ಗಣೇಶ್, ಕಾವೇರಿ ಹ್ಯಾಂಡ್‍ಲೂಮ್ಸ್‍ನ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷರಾದ ಎನ್.ವಿರೂಪಾಕ್ಷ, ಉತ್ತರ ವಲಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ವೀರೇಶ್ ಎಸ್.ಢವಳೆ, ಜವಳಿ ಮಂತ್ರಾಲಯದ ನೇಕಾರರ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಮಾರಿಮುತ್ತು, ಸಹಾಯಕ ನಿರ್ದೇಶಕರಾದ ಮಹಾಂತೇಶ್ ಕಂಚಿನ ಮಠ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.