ಡಾ. ತೊಂಟದ ಸಿದ್ದರಾಮ ಮಹಾ ಸ್ವಾಮಿಗಳಿಂದ
ಬಾ... ನಲ್ಲೆ”ಹನಿಗವನಗಳ ಕೃತಿ ಲೋಕಾರ್ಪಣೆ
ಕರುನಾಡ ಬೆಳಗು ಸುದ್ದಿ
ಕುಕನೂರ -03ಒಂದು ವಿಷಯದ ಬಗ್ಗೆ ಕೆಲವೇ ಪದಗಳನ್ನು ಬಳಸಿ ಹನಿಗವನಗಳ ರೂಪದಲ್ಲಿ ಸೆರೆಹಿಡಿಯುವುದು ಅದ್ಭುತ ಕಲೆ. ಒಂದೆರಡು ಸಾಲಿನಲ್ಲಿ ವಿಶಾಲ ಅರ್ಥ ಕೊಡುವ ಹನಿಗವನ ಹೆಚ್ಚು ಆಹ್ಲಾದವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಭೋಜರಾಜ ಸೊಪ್ಪಿಮಠ ತುಂಬಾ ಅರ್ಥಪೂರ್ಣವಾದ ಮತ್ತು ಮನಸ್ಸಿಗೆ ಕಚಿಗುಳಿ ಇಡಬಲ್ಲ ಹನಿಗವನ ರಚಿಸಿದ್ದಾರೆ ಎಂದು ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
2674ನೇ ಶಿವಾನುಭವದಲ್ಲಿ ಭೋಜರಾಜ ಸೊಪ್ಪಿಮಠರ “ಬಾ…ನಲ್ಲೆ” ಹನಿಗವನಗಳ ಕೃತಿ ಗದಗ ತೋಟದಾರ್ಯ ಮಠದಲ್ಲಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿ,.
ಒಬ್ಬ ಕವಿಯಾದವನಿಗೆ ಭಾಷಾ ಪಾಂಡಿತ್ಯವಿರಬೇಕು. ಚಮತ್ಕಾರದ ರೀತಿಯಲ್ಲಿ ಶಬ್ದಗಳನ್ನು ಬಳಸಿಕೊಳ್ಳುವ ಜಾಣ್ಮೆ ಇರಬೇಕು. ಹೇಳಬೇಕಾದ ವಿಷಯವನ್ನು ಕೆಲವೇ ಪದಗಳಲ್ಲಿ ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ನೇರವಾಗಿ ಹೇಳಬೇಕು. ಹಾಗಾದಾಗಲೇ ಆತನೊಬ್ಬ ಯಶಸ್ವಿ ಕವಿಯಾಗಲು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ಭೋಜರಾಜ ಸೊಪ್ಪಿಮಠ ಹಿಡಿತ ಸಾಧಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಭೋಜರಾಜ ಸೊಪ್ಪಿಮಠ ದಂಪತಿಗಳನ್ನು ಸನ್ಮಾನಿಸಲಾಯಿತು ವೇದಿಕೆಯ ಮೇಲೆ ಉಪನ್ಯಾಸಕಿ ಪ್ರಿಯಾಂಕಾ ನಡುವಿನಮನಿ, ಯೋಗಾಚಾರ್ಯ ಸಂಗಮೇಶ ಕೆ ಮೇಲ್ಮುರಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪುರಶೆಟ್ಟರ್, ವಿವೇಕಾನಂದಗೌಡ ಮುಂತಾದವರು ಉಪಸ್ಥಿತರಿದ್ದರು.
