IMG-20240306-WA0026

ಅಂಧ ಅನಾಥ ಮಕ್ಕಳನ್ನು ನನ್ನ ಉಡಿಗೆ ಹಾಕಿ : ಪೂಜಾರಿ ದುರ್ಗೇಶ ಸ್ನಾತಕೋತ್ತರ ಅಂಧ ವಿದ್ಯಾರ್ಥಿ

ಕರುನಾಡ ಬೆಳಗು ಸುದ್ದಿ 

ಹೊಸಪೇಟೆ,6- ನನ್ನಂತಹ ಅಂಧ ಅನಾಥ ಮಕ್ಕಳನ್ನು ನನ್ನ ಉಡಿಗೆ ಹಾಕಿ, ನನಗಿನ್ನೇನು ಬೇಡ ಎಂದು ಡಾ. ಪುಟ್ಟರಾಜ ಗವಾಯಿಗಳು ಹೇಳಿದ್ದರು ಎಂದು ಸ್ನಾತಕೋತ್ತರ ವಿದ್ಯಾರ್ಥಿ ಪೂಜಾರಿ ದುರ್ಗೇಶ ಅವರು ಹೆಮ್ಮೆಯಿಂದ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಷಡ್ಜ ವೇದಿಕೆಯಲ್ಲಿ ದಿನಾಂಕ 5.3.2024ರಂದು ಇಳಿಹೊತ್ತಿನಲ್ಲಿ ಸ್ವರಸಂಚಾರ ವೇದಿಕೆಯಿಂದ ಏರ್ಪಡಿಸಲಾಗಿದ್ದ ಪಂ.ಪುಟ್ಟರಾಜ ಗವಾಯಿಗಳು ಹಾಗೂ ಡಾ.ಗಂಗೂಬಾಯಿ ಹಾನಗಲ್ ಅವರ ಜನ್ಮ ಶತಮಾನೋತ್ಸವ ನಿಮಿತ್ಯ ವಿಶೇಷ ಉಪನ್ಯಾಸಗಳು ಮತ್ತು ಗಾಯನ ಕಾರ್ಯಕ್ರಮದಲ್ಲಿ ಪೂಜಾರಿ ದುರ್ಗೇಶ ಅವರು ಪಂ.ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡುತ್ತ ಮಾತನಾಡಿದರು.

ಪುಟ್ಟರಾಜರು ಜನಿಸಿದ 6 ತಿಂಗಳಲ್ಲಿ ದೃಷ್ಟಿಹೀನರಾಗುತ್ತಾರೆ. ಸಂಸ್ಕೃತ, ಹಿಂದಿ, ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ತ್ರಿಭಾಷಾ ಪಂಡಿತರಾಗಿ ಉಭಯಗಾನ ವಿಶಾರದರಾಗುತ್ತಾರೆ ಎಂದು ತಿಳಿಸುತ್ತ, ಸ್ವತಃ ನಾನು ಅಂಧನಾಗಿದ್ದೇನೆ. ನನ್ನಂತಹ ಅನೇಕ ಅಂಧರಿಗೆ ಪುಟ್ಟರಾಜರು ಜೀವನ ಕಟ್ಟಿಕೊಟ್ಟಿದ್ದಾರೆ ಎಂದು ಮನತುಂಬಿ ಮಾತನಾಡಿದರು.

ಮತ್ತೋರ್ವ ಉಪನ್ಯಾಸಕರಾದ ಬಿ.ಪಿ.ಎ. 2ನೇ ಸೆಮಿಸ್ಟರ್ ವಿದ್ಯಾರ್ಥಿಯಾದ ಸಿ.ದುರ್ಗೇಶ ಅವರು ಡಾ.ಗಂಗೂಬಾಯಿ ಹಾನಗಲ್ ಅವರ ಜೀವನ ಚರಿತ್ರೆ ಕುರಿತು ಮಾತನಾಡುತ್ತ, ನೂರು ರಾಗಗಳ ಒಡತಿಯಾದ ರಾಗದೇವತೆ ಗಂಗೂಬಾಯಿ ಅವರು ಗುರು ಸವಾಯಿ ಗಂಧರ್ವರಲ್ಲಿ ಸಂಗೀತ ದೀಕ್ಷೆ ಪಡೆದು, ಕಿರಾಣ ಘರಾಣೆಯಲ್ಲಿ ಪ್ರಭುತ್ವ ಸಾಧಿಸಿ, ತನ್ನ ಗಂಡು ಧ್ವನಿಯಲ್ಲಿ ಸಂಗೀತ ಹಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದ್ದಾರೆ. ನನ್ನಂತಹ ಹಿಂದೂಸ್ತಾನಿ ಸಂಗೀತ ವಿದ್ಯಾರ್ಥಿಗಳಿಗೆ ಕಲಿಯಲು ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಹೊಸಪೇಟೆಯ ವಾರ್ತಾಭಾರತಿ ಪತ್ರಿಕೆಯ ಮಹಮ್ಮದ್ ಗೌಸ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ನೀವೆಲ್ಲರೂ ಸಂಗೀತದಲ್ಲಿ ಸಾಧನೆ ಮಾಡಿ ವಿದೇಶಿಗಳಿಗೆ ಹೋಗಿ ಗಂಗೂಬಾಯಿ ಹಾನಗಲ್‌ರಂತೆ ಹೆಸರು ತರಬೇಕು. ನಿಮಗೆ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳಿದ್ದರೂ ಮಾನ್ಯ ಕುಲಪತಿಯವರ ಗಮನಕ್ಕೆ ತನ್ನಿ. ಅವರು ಸರ್ಕಾರದ ಗಮನಕ್ಕೆ ತರುತ್ತಾರೆ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ ಡಾ. ಡಿ.ವಿ.ಪರಮಶಿವಮೂರ್ತಿ ಅವರು ತಂಬೂರಿ ಮೀಟುವ ಮೂಲಕ ಸ್ವರಸಂಚಾರ ವೇದಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯ ಮೇಲಿದ್ದ ಎಲ್ಲ ಗಣ್ಯರು ಪಂ. ಪುಟ್ಟರಾಜ ಗವಾಯಿಗಳು ಹಾಗೂ ಡಾ.ಗಂಗೂಬಾಯಿ ಹಾನಗಲ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.

ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಅವರು ಮಾತನಾಡುತ್ತ ವಿಭಾಗದಲ್ಲಿ ನಾವು ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದೇವೆ. ವಿದ್ಯಾರ್ಥಿ ಮಿತ್ರರಿಂದ ಇಂತಹ ಉಪನ್ಯಾಸಗಳಲ್ಲಿ ಮಾತನಾಡಿಸುವುದು ಸಾಮಾನ್ಯ ವಿಷಯವಲ್ಲ. ಕೀಳರಿಮೆ, ಹಿಂಜರಿಕೆ ಬಿಟ್ಟು ನಿಮ್ಮಲ್ಲಿರುವ ಪ್ರತಿಭೆಯನ್ನು ನೀವು ಹೊರಹಾಕಬೇಕು. ನಿಮ್ಮಲ್ಲಿ ಜೀವನೋತ್ಸಾಹ ಮತ್ತು ಅದಮ್ಯವಾದ ಸಂಕಲ್ಪ ಶಕ್ತಿ ಇದೆ. ನೀವು ಒಬ್ಬೊಬ್ಬರು ಪುಟ್ಟರಾಜ ಗವಾಯಿ, ಗಂಗೂಬಾಯಿ ಹಾನಗಲ್‌ರಾಗಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ನಂತರ ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರಾದ ಪಂ. ವಿರೂಪಾಕ್ಷಪ್ಪ ಇಟಗಿ ಅವರು ದುರ್ಗಾ ರಾಗದಲ್ಲಿ ಜೈಮಾತಾ ಭವಾನಿ ಮತ್ತು ಕಮಾಜ್ ರಾಗದಲ್ಲಿ ಒಂದು ಠುಮುರಿ ಗಾಯನ ಹಾಗೂ ಭೈರವಿ ರಾಗದಲ್ಲಿ ನೀ ಎನಗೆ ಗುರುವಾಗಬೇಕೆಂದು ಗಾಯನದ ಮೂಲಕ ಮನಸೆಳೆದರು. ಪಿಎಚ್.ಡಿ., ಬಿ.ಪಿ.ಎ., ಎಂ.ಎ. ಸಂಗೀತ ವಿದ್ಯಾರ್ಥಿಗಳಾದ ಚೌಡಿಬಾಯಿ, ಜ್ಯೋತಿ, ಹನುಮಂತ, ಲಾವಣ್ಯ ಕೊರ್ತಿ, ರಾಜೇಶ ಹಳೇಮನೆ, ರವಿವರ್ಮ, ಕವನ, ಶರಣಮ್ಮ, ಮಧುಸೂಧನ ಮೊದಲಾದವರು ಪುಟ್ಟರಾಜ ಗವಾಯಿಗಳಿಗೆ ಮತ್ತು ಗಂಗೂಬಾಯಿ ಹಾನಗಲ್ ಅವರಿಗೆ ಗಾಯನ ಸೇವೆ ಮಾಡಿದರು. ಉಪನ್ಯಾಸ ಮಾಡಿದ ಪೂಜಾರಿ ದುರ್ಗೇಶ ಮತ್ತು ಸಿ. ದುರ್ಗೇಶ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ವೇದಿಕೆಯಲ್ಲಿ ಹೊಸಪೇಟೆಯ ಪತ್ರಕರ್ತರಾದ ಬಿ.ಎಚ್.ಎಸ್.ರಾಜು, ಮಂಜುನಾಥ ಲಕ್ಕೀಮರ ಉಪಸ್ಥಿತರಿದ್ದರು. ವಿದ್ಯಾರ್ಥಿ ಗುಂಡಿ ಭರತ್ ಸ್ವಾಗತಿಸಿದರು. ವಿದ್ಯಾರ್ಥಿ ವೇದಿಕೆಯ ಸಂಚಾಲಕರಾದ ರಾಜೇಶ್ ಹಳೆಮನೆ ನಿರೂಪಿಸಿದರು. ಲಕ್ಷ್ಮಿ ವಂದಿಸಿದರು. ಸಂಗೀತ ವಿಭಾಗದ ಅಧ್ಯಾಪಕರು, ತಬಲಾ ಸಾಥಿದಾರರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!