oppo_2

oppo_2

ಅತೀ ಹೆಚ್ಚು ಬಾರಿಗೆ ರಕ್ತದಾನ ಮಾಡಿದ ದಾಖಲೆ : ವಿಶೇಷ ಸನ್ಮಾನ

ಕರುನಾಡ ಬೆಳಗು ಸುದ್ದಿ

ವಿಜಯನಗರ, 14- ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಸನ್ಮಾನಿಸಿ ಅಭಿನಂಧಿಸಿ ಪ್ರಮಾಣ ಪತ್ರಗಳನ್ನು ಕೊಡುವುದರ ಮೂಲಕ ರಕ್ತದಾನದ ವಿಶೇಷ ಸಂದೇಶ ಸಾರುವ ಕಾರ್ಯಕ್ರಮವು ಜೂನ್ 14ರಂದು ನಡೆಯಿತು.

90 ಬಾರಿ ರಕ್ತದಾನ ಮಾಡಿದ ನಂದಕುಮಾರ್, 50 ಬಾರಿ ರಕ್ತದಾನ ಮಾಡಿದ ಎ.ಕೆ.ದೀಪಕ್ ಕುಮಾರ್, ನವೀನ್ ನಾಯ್ಡು, 42 ಬಾರಿ ರಕ್ತದಾನ ಮಾಡಿದ ಮಂಜುನಾಥ್, 32 ಬಾರಿ ರಕ್ತದಾನ ಮಾಡಿದ ಸದ್ದಾಂ ಹುಸೇನ್, 30 ಬಾರಿ ರಕ್ತದಾನ ಮಾಡಿದ ಮೈಲಪ್ಪ ಅಂಕಸಮುದ್ರ ಮತ್ತು ಎಸ್ ವಿಜಯಕುಮಾರ ಹಾಗೂ ಇನ್ನಿತರು ಸೇರಿದಂತೆ ಅತೀ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳಿಗೆ ಗೌರವ ಸನ್ಮಾನ ಮಾಡಿ ಅಭಿನಂದನಾ ಪತ್ರವನ್ನು ನೀಡಲಾಯಿತು.

ವಿಶ್ವ ರಕ್ತದಾನಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಬೆಂಗಳೂರು, ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ಬೆಂಗಳೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮಿತಿ (ರಕ್ತ ಸುರಕ್ಷತ) ವಿಜಯನಗರ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕ ವಿಜಯನಗರ ಇವರಿಂದ ಕಾರ್ಯಕ್ರಮ ನಡೆಯಿತು.

‘20 ವರ್ಷಗಳ ರಕ್ತದಾನದ ಸಂಭ್ರಮ: ಧನ್ಯವಾದ ರಕ್ತ ದಾನಿಗಳೆ’, ‘ನಿಮ್ಮ ಜೀವದಾನದ ಕೊಡುಗೆ ಅತ್ಯಮೂಲ್ಯವಾದುದು’ ಎಂಬ 2024ರ ಘೋಷವಾಕ್ಯದೊಂದಿಗೆ ತಾಲೂಕು ಆರೋಗ್ಯ ಅಧಿಕಾರಿಗಳ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಶಂಕರ ನಾಯಕ್ ಎಲ್. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡಲು ಯಾರು ಭಯಪಡಬೇಡಿ. ಎಲ್ಲರೂ ರಕ್ತ ದಾನ ಮಾಡಬಹುದು. ಯುವ ಜನತೆಯು ರಕ್ತದಾನ ಮಾಡಿ ಸಮಾಜಕ್ಕೆ ಪ್ರೇರಣೆಯಾಗಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯವಾಗಿರುತ್ತೀರಿ. ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಜೀವನ ಉಳಿಸಬೇಕು. ರಕ್ತಕ್ಕೆ ಬಹಳ ಪ್ರಾಮುಖ್ಯತೆಯಿದೆ. 18ರಿಂದ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನ ಆರೋಗ್ಯವಂತರು ರಕ್ತದಾನ ಮಾಡಬಹುದು ಎಂದು ಹೇಳಿದರು.

ಇದೇ ವೇಳೆ ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ರಕ್ತದಾನ ಮಹಾದಾನ. ರಕ್ತವು ಜೀವವನ್ನು ಉಳಿಸುತ್ತದೆ. ಎಲ್ಲರೂ ರಕ್ತದಾನ ಮಾಡಿ ಜೀವ ಉಳಿಸಿ, ಇತರರಿಗೂ ರಕ್ತದಾನ ಮಾಡುವಂತೆ ನೀವು ಪ್ರೇರೆಪಿಸಬೇಕು ಎಂದು ಸಲಹೆ ನೀಡಿದರು. ಎರಡು ತಿಂಗಳಿಗೊಮ್ಮೆ ಆಶಾಕಾರ್ಯಕರ್ತೆಯರ ಬ್ಲಡ್ ಕ್ಯಾಂಪ್‌ಗಳನ್ನು ಮಾಡಬೇಕು ಹಾಗೂ ಜಿಲ್ಲೆಯ 5 ಕಡೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೊಗ ನಿರ್ಮೂಲಣಾಧಿಕಾರಿ ಡಾ.ಜಗದೀಶ್ ಪಾಟೀಲ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ವಿನಯ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಷಣ್ಮುಖ ನಾಯಕ, ತಾಲೂಕು ಆರೋಗ್ಯಾಧಿಕಾರಿ ಡಾ.ಭಾಸ್ಕರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಡಾ.ಬಸವರಾಜ್, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿಜಯನಗರ ಮಹಾವಿದ್ಯಾಲಯದ ಎನ್.ಸಿ.ಸಿ ವಿದ್ಯಾರ್ಥಿಗಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!