WhatsApp Image 2024-05-09 at 6.18.11 PM

ಕಾರ್ಯಕರ್ತರ ಉತ್ಸಾಹವೇ ಪ್ರೇರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 9- ಲೋಕಸಭಾ ಚುನಾವಣೆಯ ಮತದಾನ ಮುಗಿದ ಬಳಿಕ ಕೆಲ ರಾಜಕಾರಣಿಗಳು ವಿಶ್ರಾಂತಿಯ ಮೊರೆ ಹೋದರೆ ಬಿಜೆಪಿಯ ನಾಯಕರು ಹಾಗೂ ಮುಖಂಡರು ಬುಧವಾರ ಪಕ್ಷದ ಕಚೇರಿಯಲ್ಲಿ ’ಚಹಾ ಪೇ ಚರ್ಚಾ’ ನಡೆಸಿದರು.

ಜಿಲ್ಲಾ ಪಂಚಾಯಿತಿ ವ್ಯಾಪ್ತಿವಾರು ನಡೆದ ಸಭೆಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ‘ಕಳೆದ 45 ದಿನಗಳಿಂದ ನನ್ನ ಜೊತೆ ಬೆನ್ನೆಲುಬಾಗಿ ನಿಂತು ಪ್ರತಿಕ್ಷಣ ಉತ್ಸಾಹ ಮತ್ತು ಮಾರ್ಗದರ್ಶನ ನೀಡಿದ ಪಕ್ಷದ ಎಲ್ಲರಿಗೂ ಧನ್ಯವಾದ ಸಲ್ಲಿಸುವೆ. ಬೂತ್ ಗೆದ್ದರೆ ದೇಶ ಗೆದ್ದಂತೆ ಎನ್ನುವ ನಮ್ಮ ಪಕ್ಷದ ಅಭಿಯಾನವನ್ನು ಎಲ್ಲರ ಮನೆ ಹಾಗೂ ಮನಕ್ಕೆ ತಲುಪಿಸಿದ್ದೀರಿ’ ಎಂದರು.

‘ಬಿರು ಬಿಸಿಲಿನಲ್ಲಿಯೂ ಪ್ರಚಾರದ ಜವಾಬ್ದಾರಿ ಹೊತ್ತು ಮತದಾನದ ಪ್ರಮಾಣ ಹೆಚ್ಚಾಗಲು ಎಲ್ಲ ಬೂತ್‌ ಮಟ್ಟದ ಕಾರ್ಯಕರ್ತರು ಶ್ರಮಿಸಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರೂ ತಾವೇ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಿದ್ದಾರೆ. ಸಮಯ, ಸಂಪರ್ಕದ ವ್ಯತ್ಯಾಸ ಹೀಗೆ ಅನೇಕ ವಿಷಯಗಳ ನಡುವೆಯೂ ಅನೇಕ ಸಮುದಾಯಗಳ ಮುಖಂಡರು ನನ್ನ ಬೆನ್ನಿಗೆ ನಿಂತಿದ್ದಾರೆ. ಮತದಾನದ ತನಕ ನಿಷ್ಠಾವಂತ ಕಾರ್ಯಕರ್ತರು ಮಾಡಿದ ಕೆಲಸ ಅನನ್ಯ’ ಎಂದು ಹೇಳಿದರು.

‘ದೊಡ್ಡ ಗ್ರಾಮಗಳಲ್ಲಿ ಬಿಜೆಪಿ ಪರವಾದ ಅಲೆಯಿದೆ. ಅನೇಕ ಒತ್ತಡಗಳ ನಡುವೆಯೂ ಕಾರ್ಯಕರ್ತರು ಕೆಲಸ ಮಾಡಿದ್ದು, ಅವರ ಉತ್ಸಾಹವೇ ನನಗೆ ಪ್ರೇರಣೆಯಾಗಿದೆ’ ಎಂದು ಸಭೆಯಲ್ಲಿ ಹೇಳಿದರು. ಇದೇ ವೇಳೆ ಕಾರ್ಯಕರ್ತರು ಹಾಗೂ ಮುಖಂಡರು ತಮ್ಮ ಕ್ಷೇತ್ರದಲ್ಲಿ ಆದ ಮತದಾನ ಪ್ರಮಾಣ, ಪಕ್ಷಕ್ಕೆ ಲಭಿಸಬಹುದಾದ ಮತಗಳ ಬಗ್ಗೆ ಅಂದಾಜು ಮಾಹಿತಿ ನೀಡಿದರು.

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಪಕ್ಷದ ಮುಖಂಡರಾದ ಅಪ್ಪಣ್ಣ ಪದಕಿ, ಡಾ. ಕೆ.ಜಿ. ಕುಲಕರ್ಣಿ, ರಾಜು ಬಾಕಳೆ, ಬಿ.ಎಂ. ಭೂಸನೂರಮಠ, ರಾಘವೇಂದ್ರ ಪಾನಘಂಟಿ, ಪೀರಾ ಹುಸೇನ್‌ ಹೊಸಳ್ಳಿ, ನೀಲಕಂಠಯ್ಯ ಹಿರೇಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!