ಕೋಟಯ್ಯಕ್ಯಾಂಪ್ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ
ಸಹಕಾರಿ ಉತ್ಕೃಷ್ಟತೆ ಮತ್ತು ಶ್ರೇಷ್ಠತೆ ಪ್ರಶಸ್ತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 11- ಜಿಲ್ಲೆಯ ಗಂಗಾವತಿ ತಾಲೂಕಿನ ಕೋಟಯ್ಯಕ್ಯಾಂಪ್ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸಹಕಾರಿ ಉತ್ಕೃಷ್ಟತೆ ಮತ್ತು ಶ್ರೇಷ್ಠತೆ ಪ್ರಶಸ್ತಿ 2023ರ ಮೊದಲ ಬಹುಮಾನ ಮತ್ತು ಪ್ರಶಸ್ತಿ ಲಭಿಸಿದೆ.
ಗುರುವಾರ ಬೆಂಗಳೂರಿನ ಪದ್ಮನಾಭ ನಗರದ RICM ಸಭಾಂಗಣ ದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ರಾಜ್ಯ ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಭಾ.ಆ.ಸೇ ಇವರಿಂದ ಸಂಘದ ಅಧ್ಯಕ್ಷ ನೆಕ್ಕಂಟಿ ಸತ್ಯನಾರಾಯಣ ಹಾಗೂ ಕಾರ್ಯದರ್ಶಿ ಸಿ.ಹೆಚ್.ಸುರೇಶ್ ಇವರು ಸ್ವೀಕರಿಸಿದರು.
ರಾಷ್ಟ್ರೀಯ ಸಹಕಾರ ಅಭಿವೃದ್ಧಿ ಸಂಸ್ಥೆ (NCDC) ಪ್ರಾದೇಶಿಕ ಕಚೇರಿ ಬೆಂಗಳೂರು ಇವರಿಂದ ಪ್ರತಿ ವರ್ಷ ವಿವಿಧ ವರ್ಗಗಳ ಪ್ರಾಥಮಿಕ ಸಹಕಾರ ಸಂಘಗಳಿಗೆ ನೀಡಲಾಗುವ *ಎನ್ ಸಿ ಡಿ ಸಿ ಪ್ರಾದೇಶಿಕ ಪ್ರಶಸ್ತಿಗಳು, ಅಡಿಯಲ್ಲಿ ಡೈರಿ ಪ್ರಾಥಮಿಕ ಸಹಕಾರ ಸಂಘಗಳ ವಿಭಾಗದಿಂದ ನೀಡುವ ಪ್ರಶಸ್ತಿ ಇದಾಗಿದೆ
ಈ ಕಾರ್ಯಕ್ರಮದಲ್ಲಿ ಎನ್ ಸಿ ಡಿ ಸಿ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ತನಿಷಾ ಲಾಲ್, ಸಹಕಾರ ಸಂಘಗಳ ಅಪರ ನಿಬಂಧಕ ಕಲ್ಲಪ್ಪ ಮತ್ತು ಸಹಕಾರ ಇಲಾಖೆಯ ಮತ್ತು NCDC ಅಧಿಕಾರಿಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪ್ರಶಸ್ತಿ ವಿಜೇತ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕಳೆದ 2021 ರಲ್ಲಿಯೂ ಈ ಸಂಘವು ದ್ವಿತೀಯ ಬಹುಮಾನವನ್ನು ಪಡೆದಿರುವುದು ವಿಶೇಷ ವಾಗಿದೆ.
