WhatsApp Image 2024-03-11 at 3.04.04 PM

ಸರ್ಕಾರ 6 ತಾಲ್ಲೂಕು ಬರಪೀಡಿತ ಘೋಷಣೆ ಹಿನ್ನೆಲೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮುಂಜಾಗ್ರತ ಕ್ರಮ: ಎಂ.ಎಸ್.ದಿವಾಕರ

ಕರುನಾಡ ಬೆಳಗು ಸುದ್ದಿ

ವಿಜಯನಗರ,11- 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯ ಒಟ್ಟು 6 ತಾಲ್ಲೂಕುಗಳನ್ನು ಸರ್ಕಾರವು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿದ್ದು, ಜಿಲ್ಲೆಯಲ್ಲಿ ಬರಗಾಲ ನಿರ್ವಹಣೆಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಗಾಲ ನಿರ್ವಹಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ಒಟ್ಟು 13 ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ. ದಿನಾಂಕ 06.11.2023ರ ಸರಕಾರದ ಆದೇಶದನ್ವಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬರಗಾಲ ನಿರ್ವಾಹಣೆಗಾಗಿ ಮುಂಜಾಗ್ರತ ಕ್ರಮಗಳ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಲಾದ ತಾಲ್ಲೂಕು ಟಾಸ್ಕ್ ಪೋರ್ಸನ 19 ಸಭೆಗಳನ್ನು ಸಹ ನಡೆಸಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 2,92,330 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇದನ್ನು 18 ವಾರಗಳವರೆಗೆ ಉಪಯೋಗಿಸಬಹುದಾಗಿದೆ. ಪಶು ಸಂಗೋಪನೆ ಇಲಾಖೆಯಿಂದ ಈಗಾಗಲೇ ಜಿಲ್ಲೆಗೆ 12,057 ಮೇವಿನ ಮಿನಿಕಿಟ್ಸ್ ಸರಬರಾಜಾಗಿದ್ದು, ಈ ಎಲ್ಲಾ ಕಿಟ್‌ಗಳನ್ನು ಒಟ್ಟು 12,044 ರೈತರಿಗೆ ವಿತರಿಸಲಾಗಿದೆ. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಂತರ ರಾಜ್ಯ ಮೇವು ಸಾಗಾಣಿಕೆಯನ್ನು ನಿರ್ಭಂದಿಸಿ ಆದೇಶಿಸಲಾಗಿದೆ. ಮೇವು ಖರೀದಿಸಲು 85 ಜನ ರೈತರು ಟೆಂಡರ್ ಮುಖಾಂತರ ಮೇವು ಮಾರಾಟ ಮಾಡಲು ಮುಂದೆ ಬಂದಿರುತ್ತಾರೆ.

ನೀರಿನ ಕೊರತೆ ಉಂಟಾಗಬಹುದಾದ ಗ್ರಾಮಗಳು : ಜಿಲ್ಲೆಯ 333 ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಹೊಸಪೇಟೆ ತಾಲೂಕಿನಲ್ಲಿ 30 ಗ್ರಾಮಗಳು ಮತ್ತು 15 ವಾರ್ಡಗಳಲ್ಲಿ, ಹಡಗಲಿ ತಾಲ್ಲೂಕಿನಲ್ಲಿ 50 ಗ್ರಾಮಗಳು, ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ 43 ಗ್ರಾಮ ಮತ್ತು 4 ವಾರ್ಡಗಳು, ಹರಪನಹಳ್ಳಿ ತಾಲ್ಲೂಕಿನಲ್ಲಿ 128 ಗ್ರಾಮ ಮತ್ತು 27 ವಾರ್ಡಗಳು, ಕೊಟ್ಟೂರು ತಾಲ್ಲೂಕಿನಲ್ಲಿ 21 ಗ್ರಾಮ ಹಾಗೂ ಕೂಡ್ಲಿಗಿ ತಾಲ್ಲೂಕಿನಲ್ಲಿ 61 ಗ್ರಾಮಗಳಲ್ಲಿ ಒಟ್ಟು ಜಿಲ್ಲೆಯಲ್ಲಿ 333 ಗ್ರಾಮಗಳು ಹಾಗೂ 46 ವಾರ್ಡ್ಗಳಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಉದ್ಭವಿಸಬಹುದು ಎಂದು ಗುರುತಿಸಲಾಗಿದೆ.

ಖಾಸಗಿ ಬೋರ್ವೆಲ್ ಮುಖಾಂತರ ಈಗಾಗಲೇ ಜಿಲ್ಲೆಯಲ್ಲಿ 67 ಗ್ರಾಮಗಳಲ್ಲಿ 73 ಖಾಸಗಿ ಕೊಳವೆಬಾವಿಗಳ ಮುಖಾಂತರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ತಾಲೂಕು ಮಟ್ಟಗಳಲ್ಲಿ ಟಾಸ್ಕ್-ಫೊರ್ಸ್ ಸಮಿತಿಯನ್ನು ರಚಿಸಲಾಗಿದ್ದು, ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ತಹಸೀಲ್ದಾರರ ಮತ್ತು ಕುಡಿಯುವ ನೀರಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ಮಾಡಿ ಸಮಸ್ಯೆಯಿರುವ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿವಾರ ನಿಯಮಿತ ಪರಿಶೀಲನೆ ನಡೆಸಿ ಬರ ಪರಿಸ್ಥಿತಿಯ ಬಗ್ಗೆ ಮತ್ತು ನೀರಿನ ಕೊರತೆ ನೀಗಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಹಲವಾರು ಕ್ರಮ ವಹಿಸಲಾಗಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಅವಶ್ಯ ಕ್ರಮಗಳನ್ನು ಕೈಗೊಂಡು ಒಟ್ಟಾರೆಯಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಯಾವುದೇ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ಮನವಿ ಬಂದ 24 ಗಂಟೆಗೊಳಗಾಗಿ ಕಡ್ಡಾಯವಾಗಿ ಸ್ಪಂದಿಸಬೇಕು ಎಂದು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯ ಮತ್ತು ಎಲ್ಲಾ ತಹಶೀಲ್ದಾರರ ಕಚೇರಿಯಲ್ಲಿ ಬರಗಾಲ ಎದುರಿಸುವ ಸಂಬಂಧ ಸಹಾಯವಾಣಿ (ಹೆಲ್ಫ್ ಲೈನ್ ನಂಬರ್) ಆರಂಭಿಸಲಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ತಕ್ಷಣವೆ ಗ್ರಾಮೀಣ ಕುಡಿಯುವ ನೀರು ಸರಬುರಾಜು ಹಾಗೂ ನೈರ್ಮಲ್ಯ ಇಲಾಖೆ ಮತ್ತು ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರು ಮತ್ತು ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ಥಳಿಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ತುರ್ತು ಕ್ರಮಕೈಗೊಂಡು ನೀರು ಪೂರೈಕೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಅಲ್ಲದೇ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಗುರುತಿಸಿದಂತೆ, ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳತ್ತ ಗಮನ ಹರಿಸಿ ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.

ಸಹಾಯ ವಾಣಿ : ಈ ಸಹಾಯವಾಣಿ ಕೇಂದ್ರಗಳು ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5:30 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತವೆ.

ಸಹಾಯವಾಣಿ ಸಂಖ್ಯೆಗಳು : ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಜಿಲ್ಲಾ ವಿಪತ್ತು ತುರ್ತು ನಿರ್ವಾಹಣಾ ಕೇಂದ್ರ ವಾಟ್ಸ್-ಆಪ್ ನಂಬರ್ 81232444428, ತಾಲ್ಲೂಕು ಸಹಾಯವಾಣಿ ಸಂಖ್ಯೆಗಳಾದ ಹೊಸಪೇಟೆ ಸ.ಸಂ: 08394-224208, ಹಗರಿಬೊಮ್ಮನಹಳ್ಳಿ ಸ.ಸಂ: 08397-238255, ಕೂಡ್ಲಿಗಿ ಸ.ಸಂ: 08391-220225, ಕೊಟ್ಟೂರು ಸ.ಸಂ: 08391-225400, ಹಡಗಲಿ ಸ.ಸಂ: 08399-240238 ಹಾಗೂ ಹರಪನಹಳ್ಳಿ ಸ.ಸಂ: 08398-286260, 8095258337 ಗೆ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!