ನಾಡಿನದ್ಯಂತ ಜಲಕ್ಷಾಮ ನೀರಿನ ಮಿತ ಬಳಕೆ ಕುರಿತು ನಾಗರಿಕರಿಗೆ ಸಾಮಾಜಿಕ ಆಂದೋಲನ ಬೇಕಿದೆ : ಲಕ್ಕಿಮರದ ಮಂಜುನಾಥ
ಕರುನಾಡ ಬೆಳಗು ಸುದ್ದಿ
ವಿಜಯನಗರ,11- ರಾಜ್ಯದಲ್ಲಿ ಈ ಬಾರಿ ಮಳೆಯಾಗದೆ ಜಲ ಕ್ಷಾಮ ಅವರಿಸಿದ್ದು ನಾಡಿನ ಜನತೆ ಕಂಗಲಾಗಿದ್ದಾರೆ. ಸರ್ಕಾರವು ನೀರಿನ ಮಿತ ಬಳಕೆ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲು ಸಾಮಾಜಿಕ ಆಂದೋಲನ ವಾಗಬೇಕಿದೆ.
ಸರ್ಕಾರವಂತೂ ಅಧಿಕಾರಿಗಳೊಂದಿಗೆ ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಅನುಧಾನ ಕೊಡುತ್ತಾ ನೀರಿನ ದಾಹ ತೀರಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಕುಡಿಯಲು ಮತ್ತು ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲದೇ ಪರದಾಡುತ್ತಿದ್ದಾರೆ. ಇನ್ನೂ ಮೂರರಿಂದ ನಾಲ್ಕು ತಿಂಗಳ ಕಾಲ ಮಳೆಗಾಗಿ ಕಾಯಬೇಕಾಗಿದೆ.
ಇಂತಹ ಸಂಧರ್ಭದಲ್ಲಿ ನೀರಿನ ಸಮಸ್ಯೆ ಇದೇ ಎಂದು ತಿಳಿದಿದ್ದರೂ ಜನರು ನೀರನ್ನು ಮಿತ ಬಳಕೆ ಮಾಡದೇ ಪ್ರತಿದಿನ ತಮ್ಮ ವಾಹನಗಳನ್ನು ಪೈಪ್ ಮೂಲಕ ನೀರು ಬಿಟ್ಟುಕೊಂಡು ತೊಳೆಯುವುದರಲ್ಲಿ ಮಗ್ನರಾಗಿದ್ದಾರೆ. ಇದರಿಂದ ಸರ್ಕಾರದ ನಗರ – ಸ್ಥಳೀಯ ಸಂಸ್ಥೆ ಗಳಾದ ನಗರ ಸಭೆ, ಪುರ ಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ಮೂಲಕ ಬಿಡುವ ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸದೇ ವ್ಯರ್ಥ ಮಾಡುತ್ತಿದ್ದು ಕಂಡು ಬರುತ್ತಿದೆ.
ಬಿದಿಕೊಳಾಯಿಗಳ ನೀರನ್ನು ಕುಡಿಯಲು ಮತ್ತು ಮನೆ ಬಳಕೆಗೆ ಶೇಖರಣೆ ಮಾಡಿಕೊಂಡ ನಂತರ ನಳದ ಟ್ಯಾಪನ್ನು ಬಂದ್ ಮಾಡದೇ ಹಾಗೇ ರಸ್ತೆ, ಚರಂಡಿಗಳಿಗೆ ಬಿಡುತ್ತಿರುವುದರಿಂದ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದು ಬರಗಾಲಕ್ಕೆ ಪುಷ್ಟಿ ನೀಡುವಂತಿದೆ. ಸರ್ಕಾರದಿಂದ ಆಡಳಿತದ ಅಧಿಕಾರಿಗಳು ಜನರಿಗೆ ನೀರು ಕೊಡಲು ಎಷ್ಟು ಶ್ರಮಿಸುತ್ತಿದ್ದಾರೆ ಮತ್ತು ಅದರ ಹಿಂದಿನ ಕಾರ್ಯ ವೈಕರ್ಯಗಳ ಬಗ್ಗೆ ಸಾರ್ವಜನಿಕರು ತಿಳಿದು ನೀರಿನ ಮಿತ ಬಳಕೆ ಮಾಡಬೇಕಿದೆ.
ಪ್ರಾಣಿ ಪಕ್ಷಿಗಳ ರೋದನೆ : ಪ್ರಾಣಿ ಪಕ್ಷಿಗಳು ನೀರಿಗಾಗಿ ಹಪಾ ಹಪಿಸುತ್ತಿವೆ. ಕಾಡಿನಲ್ಲಿರುವ ಜೀವರಾಶಿಗಳ ಗೋಳು ಹೇಳತೀರದು. ಮಾನವೀಯ ದೃಷ್ಟಿಯಿಂದ ಸಂಭಂದ ಪಟ್ಟ ಇಲಾಖೆಗಳಿಂದ ಅವುಗಳಿಗೆ ನಿರುಣಿಸುವ ಕೆಲಸ ಮಾಡಬೇಕಿದೆ.
ಭೂಮಿಯಲ್ಲಿ ಅಂತರ್ಜಲ ಕುಸಿಯುತ್ತಿದ್ದು ಎಷ್ಟೋ ಕೊಳವೆ ಬಾವಿಯಲ್ಲಿ ನೀರಿಲ್ಲದಂತಾಗಿದೆ. ನೀರಿನ ಸಾಂದ್ರತೆಯನ್ನು ಉಳಿಸಬೇಕಾದ ಜವಾಬ್ದಾರಿ ಜನರ ಮೇಲಿದೆ. ಅವಶ್ಯಕತೆಗೆ ತಕ್ಕಂತೆ ನೀರನ್ನು ಬಳಕೆಮಾಡಿದಲ್ಲಿ ಸಣ್ಣ ಪ್ರಾಮಾಣದಲ್ಲಾದರೂ ನೀರಿನ ಭವಣೆ ನೀಗಿಸಲು ಸಹಕಾರಿಯಾಗಬಹುದು.
ಬರಕ್ಕೆ ಕಾರಣ : ಬರವು ಹಲವಾರು ಕಾರಣಗಳಿಂದ ಉಂಟಾಗುತ್ತದೆ. ಅತೀಹೆಚ್ಚಾಗಿ ಅರಣ್ಯನಾಶ, ಕಡಿಮೆ ಮೇಲ್ಮೈ ನೀರಿನ ಹರಿವು, ಜಾಗತಿಕ ತಾಪಮಾನ ಮತ್ತು ಅತಿಯಾದ ನೀರಾವರಿಯಂತಹ ಮಾನವ ಚಟುವಟಿಕೆಗಳಿಂದ ಬರಗಳು ಸಂಭವಿಸುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ.
ಜೀವಿರಾಶಿಗಳ ಮೇಲೆ ಪರಿಣಾಮ : ಬರವು ನಾಗರಿಕರ ಮೇಲೆ ಬಹಳ ತೀವ್ರವಾಗಿ ಪರಿಣಾಮ ಬೀರುತ್ತದೆ . ಇದು ಮನುಕುಲ, ವನ್ಯಜೀವಿಗಳು ಮತ್ತು ಸಸ್ಯವರ್ಗದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಇದು ಕೃಷಿ ನಷ್ಟ, ಆರ್ಥಿಕ ನಷ್ಟ, ಜೊತೆಗೆ ವನ್ಯಜೀವಿ ನಷ್ಟವನ್ನು ಉಂಟುಮಾಡುತ್ತದೆ. ಇದಲ್ಲದೆ, ಇದು ಬೆಲೆಗಳಲ್ಲಿ ಹಣದುಬ್ಬರವನ್ನು ಉಂಟುಮಾಡುತ್ತದೆ ಮತ್ತು ಮಣ್ಣನ್ನು ಕ್ಷೀಣಿಸುತ್ತದೆ. ಇದು ಸಾವಿರಾರು ಜೀವಗಳ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳುತ್ತದೆ. ಕಾಡನ್ನು ಬೆಳೆಸಿದರೆ ಮಾತ್ರ ನಾಡನ್ನು ಉಳಿಸಲು ಸಾಧ್ಯವಾಗುತ್ತದೆ. ಮುಂದಿನ ಪೀಳಿಗೆಗಳು ಆರೋಗ್ಯದಿಂದ ಹಸನಾಗಿರಬೇಕಾದರೆ ಪರಿಸರ ಉಳಿವಿನ ಕುರಿತು ಆಂದೋಲನ ಅವಶ್ಯಕತೆ ಇದೆ ಎನ್ನುವುದು ಅಲ್ಲಗಳೆಯುವಹಾಗಿಲ್ಲ.
ನಾವು ಕೊಡುತ್ತಿರುವ ನೀರನ್ನು ಅಧಿಕೃತವಾಗಿ ಕುಡಿಯಲಿಕ್ಕೆ ಮತ್ತು ಮನೆಬಳಕೆಗೆ ಮಾತ್ರ ಉಪಯೋಗಿಸಬೇಕು. ಅನಧಿಕೃತವಾಗಿ ನೀರನ್ನು ಇತರೆ ಬೇರೆ ಬಳಕೆ ಮಾಡಿ ಪೋಲುಮಾಡುವುದು ಕಂಡುಬಂದರೆ, ಈ ಬಗ್ಗೆ ಗಮನಿಸಿ ಮುನಿಸಿಪಾಲಿಟಿ ಅಧಿಕಾರಿಗಳಿಗೆ ಮತ್ತು ಸಿ ಎಂ ಸಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
– ಎಂ. ಎಸ್. ದಿವಾಕರ
ವಿಜಯನಗರ ಜಿಲ್ಲಾಧಿಕಾರಿ.
