ಬಳ್ಳಾರಿ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ
ಕರುನಾಡ ಬೆಳಗು ಸುದ್ದಿ
ವಿಜಯನಗರ, 19- ನಗರದ ಚರ್ಚ್ ಕಾಂಪ್ಲೆಕ್ಸ್ ನಲ್ಲಿರುವ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಯು. ಆಂಜನೇಯಲು ಬಳ್ಳಾರಿ ಲೋಕಸಭಾ 2024ರ ಚುನಾವಣೆಯ ಮತದಾನ ಬಹಿಷ್ಕಾರ ಮಾಡುತ್ತಿರುವುದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ಜಿಲ್ಲಾಡಳಿತ ಮತ್ತು ನಗರಸಭೆ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹೊಸಪೇಟೆ ತಾಲೂಕಿನ ಕೊಂಡನಾಯಕನ ಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಶಿವಜ್ಯೋತಿ ಬಡಾವಣೆಯಲ್ಲಿ ಸುಮಾರು 1000 ರಿಂದ 1500 ನಿವೇಶನಗಳು ಇವೆ. ಇದರಲ್ಲಿರುವ ಲೇ-ಔಟ್ಗಳು 2004 ರಿಂದ 2007 ರ ಮಧ್ಯದ ಅವಧಿಯಲ್ಲಿ ಜಿಲ್ಲಾಧಿಕಾರಿ, ಬಳ್ಳಾರಿರವರಿಂದ ಎನ್.ಎ. ಆಗಿರುತ್ತವೆ. ಆಗ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರವು ಆಗಿನ ಸರ್ಕಾರಿ ನಿಯಮಾನುಸಾರ ಲೇ- ಔಟ್ ಮಾಲೀಕರಿಗೆ ಷರತ್ತುಗಳೊಂದಿಗೆ ವಸತಿ ವಿನ್ಯಾಸಕ್ಕೆ ಅನುಮೋದನೆ ನೀಡಿ ಮಾರಾಟಕ್ಕೆ ಬಿಡುಗಡೆ ಪ್ರಮಾಣ ಪತ್ರ ನೀಡಿರುತ್ತಾರೆ. ಈ ಆದೇಶದ ಮೇರೆಗೆ ಆಗಿನಿಂದ ನಗರಸಭೆ, ಹೊಸಪೇಟೆ ನಗರಸಭೆ ಫಾರಂ-3 ನೀಡುತ್ತಾ ಬಂದಿದ್ದು ಮತ್ತು ಲೇ-ಔಟ್ ಮಾಲೀಕರಿಂದ ಸಾರ್ವಜನಿಕರಾದ ನಾವುಗಳು ನಿವೇಶನ ಖರೀದಿ ಮಾಡಿ ಹೊಸಪೇಟೆ ಉಪ-ನೊಂದಣಿ ಕಛೇರಿಯಲ್ಲಿ ನೊಂದಣಿ ಮಾಡಿಸಿಕೊಂಡಿರುತ್ತದೆ.
ನಂತರ ಈ ಬಡಾವಣೆ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಹೊಸಪೇಟಗೆ ವರ್ಗಾವಣೆ ಆಗಿರುತ್ತದೆ. ಈ ಬಡಾವಣೆಯನ್ನು ಆಗಿನ ಸಮಯದಲ್ಲಿ ಲೇ-ಔಟ್ ಮಾಲೀಕರು ಷರತ್ತುಗಳನ್ನು ಉಲ್ಲಂಘಿಸಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿ ಮಾಡಿರುವುದಿಲ್ಲ. ನಂತರ ಸುಮಾರು 100-150 ನಿವೇಶನದಾರರು ಹಂಪಿ ಪ್ರಾಧಿಕಾರಕ್ಕೆ ಅಭಿವೃದ್ಧಿ ಶುಲ್ಕ ಕಟ್ಟಿ ಕಟ್ಟಡ ಪರವಾನಿಗೆ ಪಡೆದು ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಈ ಬಡಾವಣೆಯ ನಿವಾಸಿಗಳು ಈಗಲೂ ಮನೆ ತೆರಿಗೆ ಮತ್ತು ಖಾಲಿ ನಿವೇಶನಗಳಿಗೆ ತೆರಿಗೆಯನ್ನು ಹೊಸಪೇಟೆ ನಗರ ಸಭೆಗೆ ಕಟ್ಟುತ್ತಿದ್ದೇವೆ. 2020 ನೇ ಸಾಲಿನವರೆಗೆ ಅಂದರೆ ಸುಮಾರು 15 ವರ್ಷಗಳ ಕಾಲ ನಗರ ಸಭೆ ಫಾರಂ-3 ವಿತರಣೆ ಮಾಡಿದ್ದು ಮತ್ತು ನೊಂದಣಿ ಕಛೇರಿಯಲ್ಲಿ ನಿವೇಶನಗಳ ನೊಂದಣಿ ಪ್ರಕ್ರಿಯೆ ನಡೆದಿರುತ್ತದೆ.
ಸರ್ಕಾರದ ಯಾವುದೇ ಆದೇಶವಿಲ್ಲದೇ ಮಾರ್ಚ್ 2020 ರಿಂದ ನಗರಸಭೆ ಹೊಸಪೇಟೆ ಈ ನಿವೇಶನಗಳಿಗೆ ಫಾರಂ-3 ನೀಡುವುದು ತಡೆಹಿಡಿದಿರುತ್ತಾರೆ. ಈ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಿಗೆ ವಿಚಾರಿಸಿದಾಗ ಸದರಿ ಬಡಾವಣೆಯಲ್ಲಿ ಅಭಿವೃದ್ಧಿ ಕಾಮಗಾರಿ ಆಗಿರುವುದಿಲ್ಲ ಕಾರಣ ಫಾರಂ-3 ತಡೆಹಿಡಿಯಲಾಗಿದೆ ಎಂದು ದಿನಾಂಕ: 11/03/2022 ಸಭೆಯ ನಡುವಳಿಕೆಯ ಮುಖಾಂತರ ತಿಳಿಸಿರುತ್ತಾರೆ. ಆದರೆ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಜಿಲ್ಲಾಡಳಿತವು ಕೂಡಲೇ ಯಾವುದೆ ಕ್ರಮ ಕೈಗೊಳ್ಳದೇ 15 ವರ್ಷಗಳ ಕಾಲ ಸುಮ್ಮನಿದ್ದು ಈಗ ಅಂದರೆ ದಿನಾಂಕ: 11-03-2022 ರಂದು ಜಿಲ್ಲಾಧಿಕಾರಿಗಳು ನಡೆಸಿದ ಸಭೆಯ ನಡುವಳಿಕೆಯಲ್ಲಿ ಲೇ-ಔಟ್ಗಳು ಅಭಿವೃದ್ಧಿ ಕಾಮಗಾರಿ ಆಗಿರುವುದಿಲ್ಲ ಅಂತಾ ಫಾರಂ-3 ವಿತರಿಸಲು ತಡೆಹಿಡಿದಿರುತ್ತಾರೆ. ಇಲ್ಲಿಯೂ ಸಹಾ ಜಿಲ್ಲಾಧಿಕಾರಿಗಳ ಆಡಳಿತ ವೈಪಲ್ಯ ಆಗಿರುತ್ತದೆ.
ಫಾರಂ-3 ತಡೆಹಿಡಿದಿರುವುದರಿಂದ ನಮಗೆ ಸರ್ಕಾರಿ ಸೌಲತ್ತುಗಳು ಪಡೆಯಲು, ಮಕ್ಕಳ ವಿಧ್ಯಾಬ್ಯಾಸ ಮತ್ತು ಮಕ್ಕಳ ಮದುವೆ ಇತರೆ ಕರಣಗಳಿಗಾಗಿ ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಆಗಿರುವುದಿಲ್ಲ. ಪೋಷಕರಿಂದ ಮಕ್ಕಳಿಗೆ ಆಸ್ತಿ ಪಾಲು ಭಾಗ ಮಾಡಿಕೊಡಲು ಇನ್ನೂ ಅನೇಕ ಸೌಲಭ್ಯಗಳಿಂದ ತೊಂದರೆ ಅನುಭವಿಸುತ್ತಿದ್ದೇವೆ. ಈಗ್ಗೆ ಸುಮಾರು 2 ವರ್ಷಗಳಿಂದ ಬಡಾವಣೆಯ ನಿವಾಸಿಗಳು ಮತ್ತು ನಿವೇಶನದಾರರು ಅಭಿವೃದ್ಧಿ ಶುಲ್ಕ ಕಟ್ಟಲು ಸಿದ್ದರಿದ್ದೇವೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಹಿಂದೆ 2013 ರಿಂದ 2016 ರವರೆಗೆ ಹಂಪಿ ಪ್ರಾಧಿಕಾರವು ನಿವೇಶನದಾರರಿಂದ ಶುಲ್ಕ ಕಟ್ಟಿಸಿಕೊಂಡು ಫಾರಂ-3 ಕಟ್ಟಡ ಪರವಾನಿಗೆ ನೀಡಿದಂತೆ ನಮ್ಮಿಂದ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಫಾರಂ- 3 ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ನಮ್ಮ ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸಬೇಕು. ತಪ್ಪಿದಲ್ಲಿ ಹಾಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುತ್ತೇವೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಾರಾಯಣರಾವ್, ಆಂಜನೇಯ, ವೆಂಕಟರಾಮ ಶಾಸ್ತ್ರಿ, ಗೋಪಾಲ್, ಚೆನ್ನಬಸವ ಇತರರಿದ್ದರು.
