ಯಲಬುರ್ಗಾಕ್ಕೆ ಬಜೆಟ್ನಲ್ಲಿ ಬಂಪರ್ ಕೊಡುಗೆ
ಎಲ್ಲ ಕ್ಷೇತ್ರಗಳಿಗೂ ಸಮತೋಲನದ ಆಯವ್ಯಯ
ಬ್ಲಾಕ್ ಕಾಂಗ್ರೆಸ್ ವಕ್ತಾರ ಆನಂದ ಉಳ್ಳಾಗಡ್ಡಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 07- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಂಡಿಸಿದ ೨೦೨೪-೨೫ನೇ ಸಾಲಿನ ದಾಖಲೆಯ ೧೬ನೇ ಬಜೆಟ್ ಮಂಡಿಸಿದ್ದಾರೆ. ಎಲ್ಲ ಕ್ಷೇತ್ರಗಳಿಗೂ ಆಯವ್ಯಯ ಸಮತೋಲನದಿಂದ ಕೂಡಿದೆ. ಬಜೆಟ್ನಲ್ಲಿ ಯಲಬುರ್ಗಾ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ವಕ್ತಾರ ಆನಂದ ಉಳ್ಳಾಗಡ್ಡಿ ತಿಳಿಸಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಜನಪರ ಅಭಿವೃದ್ಧಿ ಪೂರಕ ಬಜೆಟ್ ಇದಾಗಿದೆ.ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬಜೆಟ್ನಲ್ಲಿ ಹೆಚ್ಚು ಒತ್ತು ನೀಡಿದೆ.
ತಾಲೂಕಿನ ಯುವಕ, ಯುವತಿಯರ ಶೈಕ್ಷಣಿಕ ಉದ್ದೇಶಕ್ಕಾಗಿ ೬ ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಬಿಎಸ್ಸಿ ನರ್ಸಿಂಗ್ ಕಾಲೇಜು ಸ್ಥಾಪನೆ. ಪಟ್ಟಣದ ಕ್ರೀಡಾಂಗಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣ ಎಂದು ನಾಮಕರಣ ಮಾಡುವ ಮೂಲಕ ಅದರ ಅಭಿವೃದ್ಧಿಗೆ ೬ ಕೋಟಿ ರೂ., ಮ್ಯಾದನೇರಿ ಕ್ರಾಸ್ (ಎನ್ಎಚ್-೫೦)ದಿಂದ ಕಾತ್ರಾಳ ಕ್ರಾಸ್ (ಎನ್ಎಚ್-೩೬೭) ವರಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅನುದಾನ ಮೀಸಲು, ತಳಕಲ್ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 90 ಕೋಟಿ ರೂ., ರೋಣ ತಾಲೂಕಿನ ಕೋಟಮುಚಗಿ ಗ್ರಾಮದಿಂದ ಕುಕನೂರು ತಾಲೂಕಿನ ವೀರಾಪುರ ಗ್ರಾಮದವರೆಗೆ ಹಿರೇಹಳ್ಳ ಹೂಳೆತ್ತುವ ಕಾಮಗಾರಿಗೆ 60 ಕೋಟಿ ರೂ. ಅನುದಾನವನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ರಾಜ್ಯದಲ್ಲೇ ಯಲಬುರ್ಗಾ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನವನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ತಂದು ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ, ಶಿಕ್ಷಣ ಕ್ಷೇತ್ರಗಳಿಗೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಮೀಸಲಿರಿಸಿದ್ದಾರೆ. ಸುಮಾರು ೪.೦೯ ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಆನಂದ ಉಳ್ಳಾಗಡ್ಡಿ, ಪ್ರಮುಖರಾದ ಶಿವನಗೌಡ ದಾನರೆಡ್ಡಿ, ಶರಣಪ್ಪ ಗಾಂಜಿ ಅಭಿನಂದನೆ ತಿಳಿಸಿದ್ದಾರೆ.
