Session Photos (14)

ರಾಜ್ಯದ ತೆರಿಗೆಯ ಪಾಲು ಅನುಕ್ರಮವಾಗಿ ಏರಿಕೆ ಆಗುವ ಬದಲು ಇಳಿಕೆಯಾಗುತ್ತಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ 

ಕರುನಾಡ ಬೆಳಗು ಸುದ್ದಿ

ಬೆಂಗಳೂರು,15- ಕರ್ನಾಟಕ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಸಂದಾಯವಾಗುವ ತೆರಿಗೆಯು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದರೂ ಸಹ ಕೇಂದ್ರದಿಂದ ರಾಜ್ಯಕ್ಕೆ ಸ್ವೀಕೃತವಾಗುವ ತೆರಿಗೆ ಪಾಲು ಅದಕ್ಕೆ ಅನುಕ್ರಮವಾಗಿ ಏರಿಕೆ ಆಗುವ ಬದಲು ಕಡಿಮೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ವಿಧಾನ ಪರಿಷತ್ ಕಲಾಪದ ವೇಳೆ ಯು.ಬಿ. ವೆಂಕಟೇಶ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ರಾಜ್ಯಗಳಿಂದ ಸಂಗ್ರಹವಾದ ತೆರಿಗೆಯನ್ನು ಕೇಂದ್ರ ಸರ್ಕಾರವು ಅದಕ್ಕನುಗುಣ ವಾಗಿ ಹಂಚಿಕೆ ಮಾಡುತ್ತಿಲ್ಲ. ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಪ್ರಮುಖ ರಾಜ್ಯವಾಗಿದ್ದರೂ ಸಹ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಸಿಕ್ಕಿರುವ ತೆರಿಗೆಯ ಪಾಲು ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಹಳಷ್ಟು ಕಡಿಮೆಯಾಗಿದೆ.

ಕೇಂದ್ರ ಸರ್ಕಾರದ ಒಟ್ಟು ತೆರಿಗೆ ಸಂಗ್ರಹಣೆಯಲ್ಲಿ ಸೆಸ್ ಹಾಗೂ ಸರ್ ಚಾರ್ಜ್‍ಗಳನ್ನು ಹೊರತುಪಡಿಸಿ ಶೇಕಡ 41ರಷ್ಟು ಪಾಲನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ತೆರಿಗೆ ಹಂಚಿಕೆ ಒಟ್ಟು ಮೊತ್ತದಲ್ಲಿ ಹೆಚ್ಚು ತೆರಿಗೆ ಸಂಗ್ರಹಣೆ ಮಾಡುವ ರಾಜ್ಯಗಳಿಗೆ ಕಡಿಮೆ ಪಾಲನ್ನು ನೀಡುತ್ತಿದ್ದು, ಹೆಚ್ಚಿನ ಪಾಲನ್ನು ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಿಗೆ ಅಥವಾ ಕಡಿಮೆ ತೆರಿಗೆ ಸಂಗ್ರಹಣೆ ಮಾಡುತ್ತಿರುವ ರಾಜ್ಯಗಳಿಗೆ ನೀಡಲಾಗುತ್ತಿದೆ.

ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ 2ನೇ ರಾಜ್ಯವಾಗಿದೆ. ಮೊದಲನೆ ರಾಜ್ಯ ಮಹಾರಾಷ್ಟ್ರ. ಹೀಗಿದ್ದರೂ ಸಹ ರಾಜ್ಯಗಳಿಗೆ ಹಂಚಿಕೆಯಾಗುವ ಒಟ್ಟು ತೆರಿಗೆ ಪಾಲಿನಲ್ಲಿ ಶೇಕಡ 3.64 ರಷ್ಟು ಮಾತ್ರ ನೀಡಲಾಗುತ್ತಿದೆ. ಅದರೆ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯಕ್ಕಿಂತ ಕಡಿಮೆ ಪ್ರಗತಿ ಹೊಂದಿ ರುವ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಿಗೆ ಹೆಚ್ಚಿನ ಪಾಲನ್ನು ನೀಡಲಾಗುತ್ತಿದೆ.

15ನೇ ಹಣಕಾಸು ಆಯೋಗದ ಶಿಫಾರಸ್ಸಿನಿಂದ ರಾಜ್ಯಕ್ಕೆ ತೆರಿಗೆ ಪಾಲು ಕಡಿಮೆಯಾಗಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಆಗಿರುವ ನಷ್ಟವನ್ನು ಸರಿಪಡಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಹಲವಾರು ಪತ್ರಗಳನ್ನು ಬರೆದು ಮನವಿಯನ್ನು ಸಹ ಸಲ್ಲಿಸಿದೆ ಎಂದು ತಿಳಿಸಿದರು.

ಪ್ರಸ್ತುತ 16ನೇ ಹಣಕಾಸು ಆಯೋಗಕ್ಕೆ Terms of Reference ಗೆ ರಾಜ್ಯದ ವತಿಯಿಂದ ಹಲವು ಸಲಹೆಗಳನ್ನು ನೀಡಲಾಗುವುದು. ಅಲ್ಲದೆ ಸದರಿ ಹಣಕಾಸು ಆಯೋಗಕ್ಕೆ ಮೆಮೊರಾಂಡಮ್ ಮೂಲಕ ಹೆಚ್ಚಿನ ತೆರಿಗೆ ಪಾಲು ಮತ್ತು ಅನುದಾನವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಕೋರಿಕೆಯನ್ನು ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!