ವಿಜಯನಗರ : ಬಕ್ರಿದ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಶಾಂತಿ ಸಭೆ
ಕರುನಾಡ ಬೆಳಗು ಸುದ್ದಿ
ವಿಜಯನಗರ 14- ಜೂನ್ 17ರಂದು ನಡೆಯಲಿರುವ ಬಕ್ರಿದ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಶಾಂತಿ ಸಭೆಯು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಅವರ ಸಮ್ಮುಖದಲ್ಲಿ ಜೂನ್ 13ರಂದು ನಡೆಯಿತು.
ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲ್ನಲ್ಲಿ ನಡೆದ ಶಾಂತಿ ಸಭೆಯಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಹಲವಾರು ಸಲಹೆಗಳನ್ನು ನೀಡಿದರು.
ಬಕ್ರಿದ್ ಹಿನ್ನೆಲೆಯಲ್ಲಿ ಈದ್ಗಾ ಮೈದಾನವನ್ನು ಶುಚಿಗೊಳಿಸಬೇಕು. ಅಲ್ಲಿ ಕುಡಿಯುವ ನೀರು, ವಿದ್ಯುತ್ ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಮುಸಲ್ಮಾನ ಬಂಧುಗಳು ಅಂದು ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಿ ಸಹಕರಿಸಬೇಕು ಎಂದು ಅಂಜುಮನ್ ಸಮಿತಿಯ ಅಧ್ಯಕ್ಷರಾದ ಇಮಾನ್ ನಿಯಾಜ್ ಮತ್ತು ಹಿರಿಯ ಮುಖಂಡರಾದ ಬಡಾವಲಿ ಅವರು ಕೋರಿದರು.
ಬಕ್ರಿದ್ ಹಬ್ಬವು ಇದುವರೆಗೆ ವಿಜಯನಗರ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದೆ. ಹೆದ್ದಾರಿಯಲ್ಲಿ ಈದ್ಗಾ ಮೈದಾನ ಇರುವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕು ಎಂದು ಶಿವಪ್ಪನಾಯಕ ಕೂಡ್ಲಿಗಿ ಅವರು ಸಲಹೆ ಮಾಡಿದರು. ಇದುವರೆಗೆ ಜಿಲ್ಲೆಯಲ್ಲಿ ನಾವೆಲ್ಲರೂ ಸೇರಿ ಎಲ್ಲಾ ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಣೆ ಮಾಡಿದ್ದೇವೆ. ಯಾವುದೇ ಅವಘಡಗಳಿಗೆ ಅವಕಾಶವಿರದ ಹಾಗೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುತ್ತೇವೆ ಎಂದು ಕಮಲಾಪುರದ ಮೆಹಬೂಬ ಪಾಷ ಅವರು ತಿಳಿಸಿದರು.
ಕೊಟ್ಟೂರಿನಲ್ಲಿ ಅಲ್ಲಿನ ಸ್ಥಳೀಯ ಆಡಳಿತ ಗಮನ ಹರಿಸಿ ಪ್ರಾರ್ಥನಾ ಮಂದಿರದ ರಸ್ತೆಗಳನ್ನು ಸರಿಪಡಿಸಿಕೊಡಬೇಕು ಎಂದು ಅಲ್ಲಿನ ಮುಖಂಡರು ಮನವಿ ಮಾಡಿದರು.
ಸಾರ್ವಜನಿಕರ ಸಲಹೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರು, ವಿದ್ಯುತ್ ಪೂರೈಕೆ ಸೇರಿದಂತೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲಾಗುವುದು. ಸಭೆಯಲ್ಲಿ ವಿವಿಧ ಮುಖಂಡರು ನೀಡಿದ ಸಲಹೆಯಂತೆ ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಹಬ್ಬದ ದಿನ ಮಳೆಯಾದಲ್ಲಿ ಸೂಕ್ತವಾದ ವ್ಯವಸ್ಥೆ ಮಾಡಬೇಕು. ಸಭೆಯಲ್ಲಿ ನಿರ್ದೇಶನ ನೀಡಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ನಾನಾ ವ್ಯವಸ್ಥೆಗಳನ್ನು ಕಲ್ಪಿಸಲು ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ, ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ತಾಲೂಕುಮಟ್ಟದಲ್ಲಿ ಹಾಗೂ ಠಾಣಾ ಮಟ್ಟದದಲ್ಲಿ ಶಾಂತಿ ಸಭೆಗಳು ನಡೆಯುತ್ತಿವೆ. ಶಾಂತಯುತವಾಗಿ ಹಬ್ಬ ನಡೆಯುವಂತೆ ಜಿಲ್ಲೆಯ ಸಾರ್ವಜನಿಕರು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
16-18 ವಯಸ್ಸಿನೊಳಗಿನ ಕೆಲವು ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ವಿಷಯಗಳನ್ನು ಹರಿಬಿಟ್ಟು ಅದರಿಂದ ಅವಘಡಗಳು ಸಂಭವಿಸುತ್ತವೆ. ಯಾವುದೇ ಧರ್ಮದ ಯುವಕರಿರಲಿ ಅಂತವರಿಗೆ ಹಿರಿಯ ನಾಗರಿಕರು ತಿಳಿ ಹೇಳಬೇಕು. ಶಾಂತಿ ಕದಡದ ಹಾಗೆ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ., ಸಹಾಯಕ ಆಯುಕ್ತರಾದ ಮೊಹಮ್ಮದ್ ಅಲಿ ಅಕ್ರಮ ಷಾಹ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲೀಂ ಪಾಶಾ ಸೇರಿದಂತೆ ಪೊಲೀಸ್ ಇಲಾಖೆಯ ಇನ್ನೀತರ ಅಧಿಕಾರಿಗಳು ಮತ್ತು ವಿವಿಧ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಬಕ್ರಿದ್ ಹಿನ್ನೆಲೆ ಮದ್ಯೆ ಮಾರಾಟ ನಿಷೇಧಿಸಿ ಆದೇಶ : ಜೂನ್ 17 ರಂದು ಬಕ್ರೀದ್ ಹಬ್ಬ ಮತ್ತು ಜೂನ್ 18 ರಂದು ಬಾಸಿಖುದ್ದಾ ಆಚರಣೆ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಶಾಂತ ರೀತಿಯಿಂದ ಹಬ್ಬ ಆಚರಿಸುವ ಸಲುವಾಗಿ ಜೂನ್ 16ರಂದು ಬೆಳಿಗ್ಗೆ 6 ಗಂಟೆಯಿAದ ಜೂನ್ 18ರ ರಾತ್ರಿ 10 ಗಂಟೆಯವರೆಗೆ ವಿಜಯನಗರ ಜಿಲ್ಲೆಯ ಹೊಸಪೇಟೆ, ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಕೊಟ್ಟೂರು ತಾಲೂಕು ವ್ಯಾಪ್ತಿಯಲ್ಲಿನ ಮದ್ಯದಂಗಡಿ, ಬಾರ್, ರೆಸ್ಟೋರೆಂಟ್ ಮತ್ತು ಇತರೆ ಸ್ಥಳಗಳಲ್ಲಿ ಮದ್ಯ ಮಾರಾಟ ಮಾಡದಂತೆ ಹಾಗೂ ಮದ್ಯದಂಗಡಿಗಳನ್ನು ಮುಚ್ಚುವಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಆದೇಶ ಹೊರಡಿಸಿದ್ದಾರೆ.
