ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ : ನ್ಯಾ.ಹೇಮಲತಾ ಬಿ.ಎಚ್.ಸಲಹೆ
ಕರುನಾಡ ಬೆಳಗು ಸುದ್ದಿ
ವಿಜಯನಗರ,15- ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹೊಸಪೇಟೆ, ಕಂದಾಯ ಇಲಾಖೆ, ಆಹಾರ ಇಲಾಖೆ ಹೊಸಪೇಟೆ ಮತ್ತು ಕಿರಾಣಿ ವರ್ತಕರ ಸಂಘ ಹೊಸಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವು ಮಾರ್ಚ 15ರಂದು ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಹೇಮಲತಾ ಬಿ.ಹುಲ್ಲೂರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಹಕರು ವಸ್ತುಗಳ ಗುಣಮಟ್ಟ ನೋಡಿ ಖರೀದಿಸಬೇಕು. ವಸ್ತು ಖರೀದಿಸಿದಾಗ ರಶೀದಿ ಪಡೆಯಬೇಕು. ಜಾಗತಿಕ ಮಾರುಕಟ್ಟೆ ದೊಡ್ಡದಾಗುತ್ತಿದ್ದು, ಎಲ್ಲ ವ್ಯಾಪಾರಸ್ಥರು ಲಾಭಕ್ಕಾಗಿ ಪೈಪೋಟಿ ಮಾಡುತ್ತಿದ್ದು, ಲಾಭದ ಉದ್ದೇಶದಿಂದಾಗಿ ಆಹಾರ ಪದಾರ್ಥ ಮತ್ತು ಇನ್ನಿತರ ವಸ್ತುಗಳಲ್ಲಿ ಕಲಬೆರಕೆ ಮಾಡಿ ಇದರಿಂದಾಗಿ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರನ್ನು ಸಲ್ಲಸಬಹುದು ಎಂದು ಹೇಳಿದರು.
ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಹೊಸಪೇಟೆ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಕಿಶನ್ ಬಿ.ಮಾಡಲಗಿ ಅವರು ಮಾತನಾಡಿ, ಪ್ರತಿ ವರ್ಷ ಮಾರ್ಚ್ 15 ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಆಚರಿಸುತ್ತೇವೆ. ಗ್ರಾಹಕರಿಗೆ ಗ್ರಾಹಕ ಹಕ್ಕುಗಳ ಬಗ್ಗೆ ಕಾನೂನಿನ ಅರಿವು ಕಡಿಮೆ ಇದೆ. ನಾವು ತೆಗೆದುಕೊಂಡ ಸರಕಿನ ಗುಣಮಟ್ಟ ಸರಿ ಇರಬೇಕು. ಒಂದು ವಸ್ತುವನ್ನು ಅದರ ಬೆಲೆಗಿಂತ ಹೆಚ್ಚಿನ ಬೆಲೆ ಕೊಟ್ಟು ಕೊಂಡುಕೊಳ್ಳಬಾರದು. ಒಂದು ವೇಳೆ ವಸ್ತುವಿನ ಗುಣ ಮಟ್ಟ ಕಡಿಮೆ ಇದ್ದರೆ ಗ್ರಾಹಕರು ಧೈರ್ಯವಾಗಿ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸಪೇಟೆಯ ಉಪ ತಹಸೀಲ್ದಾರರಾದ ಅಮರನಾಥ, ಹೊಸಪೇಟೆಯ 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಂಜೀವ್ಕುಮಾರ ಜಿ., 3ನೇ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಚೈತ್ರ ಜೆ., ಆಹಾರ ಇಲಾಖೆಯ ಆಹಾರ ಶಿರಸ್ತೇದಾರರಾದ ಜಿ.ಹೆಚ್.ರುದ್ರಪ್ಪ, ಆಹಾರ ನಿರೀಕ್ಷಕರಾದ ಡಿ.ಎಮ್.ನಾಗೇಂದ್ರ ನಾಯಕ್, ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಲಕನ್ ಆರ್ ಮಸಗುಪ್ಪಿ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷರಾದ ಮುಗದ ನಾಗರಾಜ್, ವಕೀಲರ ಸಂಘದ ಅಧ್ಯಕ್ಷರಾದ ಕೆ.ಪ್ರಹ್ಲಾದ್, ಕಿರಾಣಿ ವರ್ತಕರ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ ಮೂರ್ತಿ ಹಾಗೂ ತಾಲೂಕು ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.
