IMG-20240402-WA0047

ಶೆಡ್ಯೂಲ್ ಬ್ಯಾಂಕಿನತ್ತ ಸುಕೋ ಬ್ಯಾಂಕಿನ ಹೆಜ್ಜೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 2- 2023-2024ರ ಆರ್ಥಿಕ ಸಾಲಿನಲ್ಲಿ ಸುಕೋ ಬ್ಯಾಂಕ್ 1114 ಕೋಟಿ ರೂಪಾಯಿ ಕೇವಣಿ ಸಂಗ್ರಹ ಮಾಡಿ ತನ್ನ ಗುರಿಯನ್ನು ಮೀರಿ ಸಾಧನೆ ಮಾಡಿ, ಶೇ. 19.86 ರಷ್ಟು ಪ್ರಗತಿಯನ್ನು ಸಾಧಿಸಿ ಎಲ್ಲಾ ತೆರಿಗೆಗಳ ಪಾವತಿಯ ನಂತರ ನಿವ್ವಳ ಒಟ್ಟು 6.23 ಕೋಟಿ ರೂಪಾಯಿ ಮೊತ್ತದ ಲಾಭಾಂಶವನ್ನು ಗಳಿಕೆ ಮಾಡಿದೆ.

ಸುಕೋ ಬ್ಯಾಂಕ್‌ನ ಅಧ್ಯಕ್ಷರಾದ ಮೋಹಿತ್ ಮಸ್ಕಿ ಅವರು ಸುದ್ದಿಗಾರರಿಗೆ ಮಂಗಳವಾರ ಈ ಮಾಹಿತಿ ನೀಡಿದ್ದು, ಬ್ಯಾಂಕು ಈವರೆಗೆ 1828 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಅಲ್ಲದೇ, ಶೆಡ್ಯೂಲ್ ಬ್ಯಾಂಕ್ ಆಗುವಲ್ಲಿ ದಾಪುಗಾಲನ್ನಿಟ್ಟು ಸಹಕಾರಿ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಮತ್ತು ಭರವಸೆಯ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 1800 ಕೋಟಿ ರೂಪಾಯಿ ಠೇವಣಿ ಸಂಗ್ರಹ ಮತ್ತು 850 ಕೋಟಿ ರೂಪಾಯಿ ಸಾಲ ವಿತರಣೆಯ ಗುರಿಯನ್ನು ಹೊಂದಿದೆ ಎಂದರು.

ಸುಕೋ ಬ್ಯಾಂಕ್‌ ಉಳಿತಾಯ ಖಾತೆಯ ಗ್ರಾಹಕರಿಗೆ ಉಳಿತಾಯ ಖಾತೆಯ ದೈನಂದಿನ ಮೊತ್ತಕ್ಕೆ ಶೇ. 7.50% ಬಡ್ಡಿಯನ್ನು ಪ್ರತಿ ತಿಂಗಳು ಪಾವತಿಸುವ ವ್ಯವಸ್ಥೆಯನ್ನು ಮಾರ್ಚ್ 2024 ರಿಂದ ಜಾರಿ ಮಾಡಲಾಗಿದೆ. ಈ ಬಡ್ಡಿಯು ನಿಶ್ಚಿತ ಠೇವಣಿಯ ಬಡ್ಡಿಗೆ ಸರಿಯಾಗಿ (ಎಫ್‌ಡಿ ಬಡ್ಡಿ)ಗೆ ಇದೆ. ಈ ಸೌಲಭ್ಯವನ್ನು ಎಲ್ಲಾ ಗ್ರಾಹಕರು ಪಡೆಯಲಿದ್ದಾರೆ ಎಂದರು.

ಸುಕೋ ಬ್ಯಾಂಕ್‌ 11,901 ಮಹಿಳಾ ಗ್ರಾಹಕರಿಗೆ 156 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಸಾಲ ಸೌಲಭ್ಯ ಪಡೆದಿರುವ ಮಹಿಳಾ ಗ್ರಾಹಕರು ಗೃಹ ಮತ್ತು ಗುಡಿ ಕೈಗಾರಿಕೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಆರ್ಥಿಕ ಸ್ವಾವಲಂಬನೆ ಪಡೆದಿದ್ದಾರೆ. ಈ ಮೂಲಕ ಮಹಿಳಾ ಗ್ರಾಹಕರಲ್ಲಿ ಆರ್ಥಿಕ ಪರಿಣಿತಿ ಹೆಚ್ಚಿ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿದೆ. ಸುಕೋ ಬ್ಯಾಂಕಿನ 86 ಗ್ರಾಹಕರು ಪಿಎಂಇಜಿಪಿ ಮತ್ತು 23 ಗ್ರಾಹಕರು ಪಿಎಂಎಫ್ಎಂಇ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆದು ಸ್ವ ಉದ್ಯೋಗ ಪ್ರಾರಂಭಿಸಿದ್ದಾರೆ ಎಂದರು.

2024-25ರ ಆರ್ಥಿಕ ಸಾಲಿನಲ್ಲಿ ಗ್ರಾಹಕರಿಗೆ ಡಿಜಿಟಲ್ ವ್ಯವಸ್ಥೆಯಲ್ಲಿ (ತಂತ್ರಜ್ಞಾನದ ಮೂಲಕ) ಸಾಲ ಮಂಜೂರಾತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ಗ್ರಾಹಕರಿಗೆ ಸುಲಭವಾಗಿ – ತ್ವರಿತವಾಗಿ ಸಕಾಲದಲ್ಲಿ ಸಾಲ ಸಿಗಲಿದೆ ಎಂದರು.

ಸುಕೋ ಬ್ಯಾಂಕ್ ವಿವಿಧ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಲೈಫ್ ಇನ್ಸೂರೆನ್ಸ್ ಮತ್ತು ಇತರೆ ಇನ್ಸೂರೆನ್ಸ್ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಗ್ರಾಹಕರಿಗೆ ಕೇಂದ್ರ ಸರ್ಕಾರದ ಪಿಎಂಎಸ್ ಬಿವೈ ವಿಮಾ ಸೌಲಭ್ಯವನ್ನೂ ನೀಡಲಾಗುತ್ತಿದೆ. ಗ್ರಾಹಕರು ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದರು.

ಗ್ರಾಹಕರ ಕುಂದುಕೊರತೆಗಳ ತ್ವರಿತ ನಿವಾರಣೆಗಾಗಿ ಸೋಷಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಗ್ರಾಹಕರು ತಮ್ಮ ಸಮಸ್ಯೆಗಳನ್ನು ವಾಟ್ಸಪ್, ಫೇಸ್ ಬುಕ್, ಟ್ವಿಟರ್, ವೆಬ್ ಸೈಟ್ ಮತ್ತು ಶಾಖೆಗಳಲ್ಲಿ ದೂರು ಸಲ್ಲಿಸಿದಲ್ಲಿ ತ್ವರಿತವಾಗಿ ಪರಿಹರಿಸಲಾಗುತ್ತದೆ ಎಂದರು.

ನಮ್ಮ ಬ್ಯಾಂಕ್‌ ಸಿಬ್ಬಂದಿಗಳ ಹಿತಕ್ಕಾಗಿ ಸಿಬ್ಬಂದಿಗಳಿಗೆ ಶೇ. 20 ರಷ್ಟು ವೇತನವನ್ನು ಹೆಚ್ಚಳ ಮಾಡಲಾಗಿದೆ. ಕಳೆದ ಆರ್ಥಿಕ ಸಾಲಿನಲ್ಲಿ 38 ನೂತನ ಅಧಿಕಾರಿಗಳನ್ನು ನೇಮಕಾತಿ ಮಾಡಲಾಗಿದೆ. 40 ಅಧಿಕಾರಿಗಳಿಗೆ ಪದೋನ್ನತಿ ಮಾಡಲಾಗಿದೆ. ಬ್ಯಾಂಕಿನ ಸಿಬ್ಬಂದಿಯವರಿಗೆ ರೂ.10 ಲಕ್ಷ ಮೊತ್ತದ ಜೀವ ವಿಮೆ ಹಾಗೂ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ರೂ.4 ಲಕ್ಷ ಮೊತ್ತದ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.

ಸುಕೋ ಬ್ಯಾಂಕ್ ಕರ್ನಾಟಕಾದ್ಯಂತ ವ್ಯವಹಾರ ನಡೆಸಲು ಪರವಾನಿಗೆ ಪಡೆದಿದ್ದು, ಪ್ರಸ್ತುತ 12 ಜಿಲ್ಲೆಗಳಲ್ಲಿ 29 ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸುಕೋ ಬ್ಯಾಂಕ್‌ನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರತ್ಯಕ್ಷವಾಗಿ – ಪರೋಕ್ಷವಾಗಿ ನೆರವಾಗುತ್ತಿರುವ ಷೇರುದಾರರು, ಗ್ರಾಹಕರು, ಹಿತೈಷಿಗಳು ಮತ್ತು ಸಿಬ್ಬಂದಿ ವರ್ಗದ ಸಹಕಾರವನ್ನು ಬ್ಯಾಂಕ್‌ನ ಆಡಳಿತ ಮಂಡಳಿಯು ಕೃತಜ್ಞತಾಪೂರ್ವಕವಾಗಿ ಸದಾ ಸ್ಮರಿಸುತ್ತದೆ ಎಂದು ಹೇಳಿದರು.

ಸುಕೋ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಎಸ್ ರವಿಸುಧಾಕರ್, ಸುಕೋ ಬ್ಯಾಂಕ್‌ನ ಬೋರ್ಡ್ ಸೆಕ್ರೇಟರಿ ವಿಠಲರಾವ್, ಪ್ರಧಾನ ವ್ಯವಸ್ಥಾಪಕರಾದ ಟಿ.ಎನ್ ಈಶ್ವರನ್ ಮತ್ತು ಶ್ರೀನಿವಾಸರಾವ್ ಅಂಬೇಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!