Dotihal

ಕುಷ್ಟಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಅದ್ದೂರಿ ಸ್ವಾಗತ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,17- ಜಿಲ್ಲೆಯಲ್ಲಿ ಜನವರಿ 26 ರಿಂದ ಫೆಬ್ರವರಿ 23 ರವರೆಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಶನಿವಾರದಂದು (ಫೆ.17) ಕುಷ್ಟಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ನಡೆಯಿತು.

ಕುಷ್ಟಗಿ ತಾಲ್ಲೂಕಿನ ದೋಟಿಹಾಳ ಗ್ರಾಮದಲ್ಲಿ ಜಾಥಾ ಮೆರವಣಿಗೆಗೆ ಕುಂಭ ಮೆರವಣಿಗೆ, ಪೂಜಾ ಕಾರ್ಯಕ್ರಮದ ಮೂಲಕ ಸಂಭ್ರಮದ ಸ್ವಾಗತ ಕೋರಿದರು. ಅದರಂತೆ ಕ್ಯಾದಿಗುಪ್ಪ, , ಹೂಲಗೇರಾ, ಅಂಟರಠಾಣಾ, ಕಾಟಾಪುರ ಹಾಗೂ ಕಬ್ಬರಗಿಯಲ್ಲಿ ಜಾಥಾ ಮೆರವಣಿಗೆಗೆ ಬೈಕ್ ರ‍್ಯಾಲಿ, ಪೂರ್ಣ ಕುಂಭದ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು. ಜಾಥಾ ವೇಳೆ ಮಕ್ಕಳು ವಿವಿಧ ಛದ್ಮ ವೇಷಗಳಲ್ಲಿ ಮೆರವಣಿಗೆಗೆ ಮೆರುಗು ನೀಡಿದರು. ಹಾಗೂ ಗ್ರಾಮಗಳಲ್ಲಿ ಸಂವಿಧಾನ ಪೀಠಿಕೆ ಓದುವುದು, ಪ್ರಮುಖ ರಸ್ತೆಗಳಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರಿಂದ ಜಾಥಾವನ್ನು ನಡೆಸಲಾಯಿತು.

ಮುಂದುವರೆದು ಹನುಮಸಾಗರ, ಜಾಗೀರ ಗುಡದೂರ, ಹನುಮನಾಳ, ತುಗ್ಗಲದೋಣಿ, ಬಿಳೇಕಲ್ ಹಾಗೂ ಮಾಲಗಿತ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ನಡೆಯಲಿದೆ. ಗ್ರಾಮಸ್ಥರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಗತ್ಯ ಸಹಕಾರ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜು ತಳವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ಗ್ರಾಮಗಳ ಮುಖಂಡರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು, ಶಿಕ್ಷಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!