ಸಂವಿಧಾನ ಜಾಗೃತಿ ಜಾಥಾ: ಸಿರುಗುಪ್ಪ ಪಟ್ಟಣದಲ್ಲಿ ಸಂಭ್ರಮದ ಸೊಬಗು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,7- ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ, ಸಂವಿಧಾನ ಜಾಗೃತಿ ಜಾಥಾವು ವಿವಿಧೆಡೆ ನಡೆಯುತ್ತಿದೆ, ಅಂಗವಾಗಿ ಸಿರುಗುಪ್ಪ ತಾಲ್ಲೂಕಿನ ಬಲಕುಂದಿ, ಹಳೇಕೋಟೆ ಗ್ರಾಮಗಳ ಗ್ರಾಮ ಪಂಚಾಯಿತಿಗಳ ಮಾರ್ಗದಲ್ಲಿ ಮತ್ತು ಇತ್ತೀಚಿನ ಸಿರುಗುಪ್ಪ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿದ ಸಂಭ್ರಮದ ವಾತಾವರಣ ಮನೆಮಾಡಿತು.
ಜಾಥಾವನ್ನು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿಯೂ ಕಳಸ, ಪೂರ್ಣ ಕುಂಭ ಹೊತ್ತ ಮಹಿಳೆಯರು, ಸಾಂಸಕೃತಿಕ ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ವಿವಿಧ ಜನಪ್ರತಿನಿಧಿಗಳು, ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು.
ಸಿರುಗುಪ್ಪ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಿರಂತರ ಒಂದು ಕಿಲೋಮೀಟರ್ ಜೊತೆಗೆ ಜನರಿಂದ ಕೂಡಿದ ಸಂವಿಧಾನದ ಜಾಗೃತಿ ಜಾಥಾದ ಮೆರವಣಿಗೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಉಪನ್ಯಾಸಕರು ಭಾಗವಹಿಸಿದ್ದು ವಿಶೇಷವಾಗಿತ್ತು.
ಹಳೇಕೋಟೆ ಗ್ರಾಮಸ್ಥ ನಂದೀಶ ಅವರು ಮಾತನಾಡಿ, ಸಂವಿಧಾನದ ಬಗ್ಗೆ ಅರಿಯಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವು ಸರ್ವರ ಅಭಿವೃದ್ಧಿಯನ್ನು ಒಳಗೊಂಡಿದೆ. ಶಿಕ್ಷಕರಿಗೆ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಹಳೇಕೋಟೆ ಗ್ರಾಮದ ಶಿಕ್ಷಕ ದುರ್ಗಪ್ಪ ಅವರು ಮಾತನಾಡಿ, ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ವ್ಯಕ್ತಿ, ಸಮಾನತೆ, ಸ್ವಾತಂತ್ರ್ಯ, ಗೌರವ ನೀಡಿದೆ. ಈ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು ಎಂದು ಕರೆ ನೀಡಿದರು.
