ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎನ್ಆರ್ ಐ ಕೋಟಾ- ಎಐಡಿಎಸ್ಓ ಆಕ್ಷೇಪ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 26- ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾ ಅಳವಡಿಸಲು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ನಡೆಸಿರುವ ಚಿಂತನೆಯನ್ನು ಖಂಡಿಸಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿಗಳಾದ ಕಂಬಳಿ ಮಂಜುನಾಥ ಈ ಕೆಳಗಿನ ಹೇಳಿಕೆಯನ್ನು ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆರ್ ಐ ಕೋಟಾಗೆ ಅನುಮತಿ ನೀಡುವಂತೆ ಎನ್ ಎಂ ಸಿ ( ನ್ಯಾಷನಲ್ ಮೆಡಿಕಲ್ ಕಮಿಷನ್) ಗೆ ಕೋರಿದೆ.
ಈ ನಡೆಯು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಖಾಸಗೀಕರಣದ ಮಹಾದ್ವಾರಗಳನ್ನು ತೆರೆಯುವುದರಿಂದ ಎಐಡಿಎಸ್ಓ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತದೆ. 2018ರಲ್ಲಿ ಎನ್ ಆರ್ ಐ ಕೋಟಾದ ಪ್ರಸ್ತಾಪ ಬಂದಾಗ ಕರ್ನಾಟಕದ ವಿದ್ಯಾರ್ಥಿಗಳು ಯಶಸ್ವಿಯಾಗಿ ಅದನ್ನು ವಿರೋಧಿಸಿ ಹಿಮ್ಮೆಟ್ಟಿದ್ದರು.
ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕವು ವರ್ಷಕ್ಕೆ 80000/- ರೂಪಾಯಿಯಷ್ಟಿದ್ದು ಇದನ್ನೇ ಬಡ ವಿದ್ಯಾರ್ಥಿಗಳು ಭರಿಸುವುದು ಕಷ್ಟಕರವಾಗಿದೆ. ಹೀಗಿರುವಾಗ, ಎನ್ ಆರ್ ಐ ಕೋಟಾದ ಅಳವಡಿಕೆಯು ಇನ್ನಷ್ಟು ಶುಲ್ಕ ಹೆಚ್ಚಳಕ್ಕೆ ಹಸಿರು ನಿಶಾನೆ ನೀಡುತ್ತದೆ ಮತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಅವಕಾಶಗಳನ್ನು ಕಿತ್ತುಕೊಳ್ಳುತ್ತದೆ.
ಸರ್ಕಾರಿ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟ ಅಳವಡಿಸುವುದು ಪ್ರಜಾತಾಂತ್ರಿಕ ಶಿಕ್ಷಣದ ಮೇಲಿನ ನೇರ ದಾಳಿಯಾಗಿದೆ ಮತ್ತು ಇದು ಕ್ಯಾಂಪಸ್ ನಲ್ಲಿ ತಾರತಮ್ಯವನ್ನು ಉಂಟುಮಾಡುತ್ತದೆ. ವೈದ್ಯಕೀಯ ಶಿಕ್ಷಣವು ಒಂದು ವೇಳೆ ತನ್ನ ಪ್ರಜಾತಾಂತ್ರಿಕ ಗುಣಲಕ್ಷಣವನ್ನು ಕಳೆದುಕೊಂಡರೆ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ತತ್ಪರಿಣಾಮವಾಗಿ ಸಮರ್ಥ ವೈದ್ಯರು ಸೃಷ್ಟಿಯಾಗದೆ ಇಡೀ ದೇಶದ ವೈದ್ಯಕೀಯ ವ್ಯವಸ್ಥೆಯು ಇದರಿಂದ ಬಾಧಿಸಲ್ಪಡುತ್ತದೆ.
ಸಂಸ್ಥೆಯನ್ನು ನಡೆಸಲು ಹಣದ ಕೊರತೆ ಇದೆ ಎಂದು ರಾಜ್ಯ ಸರ್ಕಾರವು ಹೇಳುತ್ತದೆ! ಈ ರೀತಿ ಶುಲ್ಕ ಹೆಚ್ಚಳಕ್ಕೆ ವೇದಿಕೆ ಸಜ್ಜು ಗೊಳಿಸಲಾಗುತ್ತಿದೆ ಮತ್ತು ತತ್ಪರಿಣಾಮವಾಗಿ, ಕರ್ನಾಟಕದ ಯಾವ ಬಡ ವಿದ್ಯಾರ್ಥಿಯೂ ವೈದ್ಯರಾಗಲು ಸಾಧ್ಯವಿಲ್ಲ.
