ಹೆಣ್ಣುಮಕ್ಕಳು ಶಿಕ್ಷಣ ಪಡೆದುಕೊಳ್ಳುವುದು ಬಹಳ ಮುಖ್ಯ : ಪ್ರಿಯಾ ದಿಗ್ವಿಜಯ್
ಕರುನಾಡ ಬೆಳಗು ಸುದ್ದಿ
ಧಾರವಾಡ,24- ಹೆಣ್ಣುಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕಾದ್ದು ಬಹಳ ಮುಖ್ಯ ಮಿಲಾನ್ ಸಂಸ್ಥೆಯಿಂದ ‘ಗರ್ಲ್ ಐಕಾನ್’ ಗಳೆಂದು ಆಯ್ಕೆಯಾದ ನೀವೆಲ್ಲಾ, ಮುಂದಿನ ದಿನಗಳಲ್ಲಿ ನೀಡಲಾಗುವ ತರಬೇತಿಯನ್ನು ಸರಿಯಾದ ಕ್ರಮದಲ್ಲಿ ಪಡೆದುಕೊಂಡು ನಿಮ್ಮ ಸುತ್ತಮುತ್ತಲಿನ ಸಮುದಾಯದ ಹೆಣ್ಣುಮಕ್ಕಳೊಂದಿಗೆ ಹಂಚಿಕೊಳ್ಳಿ ಎಂದು ಮಿಲಾನ್ ಸಂಸ್ಥೆಯ ಪ್ರೋಗ್ರಾಂ ಆಫೀಸರ್ ಆದ ಪ್ರಿಯಾ ದಿಗ್ವಿಜಯ್ ಹೇಳಿದರು.
ಧಾರವಾಡದ ಜ್ಞಾನ ವಿಕಾಸ ತರಬೇತಿ ಸಂಸ್ಥೆಯ ಆವರಣದಲ್ಲಿ ಮಿಲಾನ್ ಸಂಸ್ಥೆಯು ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊಬೈಲ್, ಶಾಲಾಚೀಲ, ಪುಸ್ತಕ ಮತ್ತಿತರ ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಧಾರವಾಡ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಸುಮಾರು 120 ಹೆಣ್ಣುಮಕ್ಕಳನ್ನು 2023-24ನೇ ಸಾಲಿನ ‘ಗರ್ಲ್ ಐಕಾನ್ ಫೆಲೊಶಿಪ್’ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು.
‘ಮಿಲಾನ್ ಸಂಸ್ಥೆ’ಯು ಕಳೆದ ಏಳು ವರ್ಷಗಳಿಂದ ಇದೇ ಮಾದರಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಹದಿಹರೆಯದ ಹೆಣ್ಣುಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ನಾಯಕತ್ವದ ತರಬೇತಿಯನ್ನು ನೀಡುತ್ತಿದೆ. ಹೀಗೆ ಆಯ್ಕೆಯಾದ ಬಾಲಕಿಯರನ್ನು ‘ಗರ್ಲ್ ಐಕಾನ್’ ಎಂದು ಗುರುತಿಸಲಾಗುತ್ತದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಈ ಬಾಲಕಿಯರಿಗೆ ವ್ಯಕ್ತಿತ್ವ ವಿಕಸನ, ಹದಿಹರೆಯದವರ ಆರೋಗ್ಯ ಮತ್ತು ಶಿಕ್ಷಣದ ಮಹತ್ವದ ಕುರಿತಾಗಿ ತರಬೇತಿಗಳನ್ನು ನೀಡುವ ಮೂಲಕ ಅವರು ತಮ್ಮ ಹಾಗೂ ತಮ್ಮಂತಹ ಇತರ ಬಾಲಕಿಯರ ಬದುಕಿನಲ್ಲಿ ಬದಲಾವಣೆಯ ನಾಂದಿ ಹಾಡಲು ಉತ್ತೇಜಿಸುವುದು ಮಿಲಾನ್ ಸಂಸ್ಥೆಯ ಉದ್ದೇಶವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಕಂಡು ಬರುವಂತಹ ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣ ಹತ್ಯೆ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು, ಜಾತಿಭೇದ, ವರದಕ್ಷಿಣೆ, ಮಕ್ಕಳ ಮೇಲಾಗುವ ದೌರ್ಜನ್ಯಗಳ ವಿರುದ್ಧ ಹೆಣ್ಣುಮಕ್ಕಳು ಧ್ವನಿ ಎತ್ತಲು ಪ್ರೇರೆಪಿಸಲಾಗುತ್ತದೆ. ಕರ್ನಾಟಕದಲ್ಲಿ ‘ಮಿಲಾನ್ ಸಂಸ್ಥೆ’ಯು ಪ್ರಸ್ತುತ ಸುಮಾರು 1500ಕ್ಕೂ ಹೆಚ್ಚು ಬಾಲಕಿಯರನ್ನು ‘ಗರ್ಲ್ ಐಕಾನ್’ ಮತ್ತು ‘ಗರ್ಲ್ ಐಕಾನ್ ಸ್ವಯಂಸೇವಕ’ರನ್ನು ಹೊಂದಿದೆ’ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ‘ಮಿಲಾನ್ ಸಂಸ್ಥೆ’ಯ ಪ್ರೊಗ್ರಾಂ ಆಫೀಸರ್ ಪ್ರಿಯಾ ದಿಗ್ವಿಜಯ್, ಅಸಿಸ್ಟೆಂಟ್ ಪ್ರೊಗ್ರಾಂ ಆಫೀಸರ್ ನಾಗವೇಣಿ ಪಟ್ಟಣಶೆಟ್ಟಿ, ಕಾರ್ಯಕ್ರಮ ಸಂಯೋಜಕರಾದ ಪೂಜಾ ಎಮ್. ಗಡಗಿ ಮತ್ತು ಸಿಮ್ರಿನ್, ಸೌಕರ್ಯಕಾರರಾದ ವಿದ್ಯಾ ಶಿವರಾಮ್, ಸಹಾಯಕ ಕಾರ್ಯಕ್ರಮ ಸಂಯೋಜಕರಾದ ರೂಪ ಮರಿಗೌಡರ್ ಹಾಗೂ ಯೋಜನೆಯ ಸಹಾಯಕರಾದ ಕಾವ್ಯಾ ಯಾದವಣ್ಣವರ್, ಸರಿತಾ ಹಬೀಬ್, ಈಶ್ವರಿ ಜುತ್ಲಾರ್, ಸಕ್ಕುಬಾಯಿ ಹುನಗೋಡ್, ಪಾರ್ವತಿ ಹಡಪದ, ರಕ್ಷಿತಾ ಉಮೇಶ್, ಸಿಂಧು ಲೋಕೇಶ್, ಮೇಘಾ ಕಾಂಬಲಿ, ದುರ್ಗಮ್ಮ ಪೂಜಾರ್, ಶ್ರದ್ಧಾ ಆಲೂರ್, ಜ್ಯೋತಿ ನಾಯ್ಕರ್, ದೀಕ್ಷಿತಾ ನಾಯಕ್, ರಾಧಿಕಾ ರಾಮನಕೊಪ್ಪ, ರಶ್ಮಿ ಬಸವರಾಜ್, ಗೌರವ್ವ ಹಿರಾಬಾಳೆ, ಹುಲಿಗೆಮ್ಮಾ ದೊಡ್ಮನಿ, ಸೌಮ್ಯ,ದೀಪಾ ಮುಂತಾದವರು ಹಾಜರಿದ್ದರು.
