ಆನೆಗೊಂದಿ ಉತ್ಸವ : ಹಗ್ಗ-ಜಗ್ಗಾಟದಲ್ಲಿ ಹೊಸಕೇರಾ ತಂಡ ಜಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,9- ಆನೆಗೊಂದಿ ಉತ್ಸವ-2024ರ ಅಂಗವಾಗಿ ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಾರ್ಚ್ 9ರಂದು ಹಮ್ಮಿಕೊಂಡಿದ್ದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಗಂಗಾವತಿ ತಾಲ್ಲೂಕಿನ ಹೊಸಕೇರಾದ ದುರ್ಗಾ ಪರಮೇಶ್ವರಿ ತಂಡವು ಜಯಗಳಿಸಿದೆ.
ಮಾರ್ಚ್ 11 ಮತ್ತು 12ರಂದು ನಡೆಯಲಿರುವ ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿ ಉತ್ಸವ ನಿಮಿತ್ತ ಕುಸ್ತಿ, ಕಬಡ್ಡಿ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಇದರ ಭಾಗವಾಗಿ ಶನಿವಾರ ಜರುಗಿದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೊಸಕೇರಾದ ದುರ್ಗಾ ಪರಮೇಶ್ವರಿ ತಂಡವು ಇತ್ತೀಚೆಗೆ ನಡೆದ ಕನಕಗಿರಿ ಉತ್ಸವದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿತ್ತು.
ಆನೆಗೊಂದಿ ಉತ್ಸವದ ಹಗ್ಗ-ಜಗ್ಗಾಟದಲ್ಲಿ ಕೊಪ್ಪಳದ ನಾಗರಾಜ ನೇತೃತ್ವದ ತಂಡ ದ್ವಿತೀಯ ಹಾಗೂ ಕನಕಗಿರಿಯ ತಾಲ್ಲೂಕಿನ ಹನುಮನಾಳ ತಂಡವು ತೃತೀಯ ಸ್ಥಾನ ಪಡೆದಿದ್ದು, ಈ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಣೆ ಮಾಡಲಾಯಿತು.
