
ಉತ್ತಮ ಆರೋಗ್ಯದಿಂದ ಸಮೃದ್ಧ ಜೀವನ : ಡಾ.ಮಂಜುನಾಥ ಬ್ಯಾಲಹುಣಸಿ
ಕರುನಾಡ ಬೆಳಗು ಸುದ್ದಿ
ಕುಕನೂರು, 29- ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯವೇ ಪ್ರಮುಖವಾಗಿದ್ದು ಉತ್ತಮ ಆರೋಗ್ಯದಿಂದ ಸಮೃದ್ಧ ಜೀವನವನ್ನು ಕಾಣಬಹುದಾಗಿದೆ ಎಂದು ಕುಕನೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ ಬ್ಯಾಲಹುಣಸಿ ಹೇಳಿದರು.
ಪಟ್ಟಣದ ವಿದ್ಯಾನಂದ ಗುರುಕುಲ ವಿದ್ಯಾಲಯದ ಆವರಣದಲ್ಲಿರುವ ಡಾ ಜಿ ಎಸ್ ಮೇಲುಕೋಟೆ ಗ್ರಾಮೀಣ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ವಿದ್ಯಾನಂದ ಗುರುಕುಲ ವಿದ್ಯಾಲಯ ಇವರುಗಳ ಸಹಯೋಗದಲ್ಲಿ ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಯಿತು.
ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಡಾ.ಮಂಜುನಾಥ ಬ್ಯಾಲಹುಣಸಿ ಮಾತನಾಡುತ್ತಾ ವಯಸ್ಕರದಲ್ಲಿ ಹಲವಾರು ರೀತಿಯ ಆರೋಗ್ಯದ ಏರಿಳಿತಗಳು ಉಂಟಾಗುತ್ತಿದ್ದು ಅವುಗಳಿಂದ ಸಮಸ್ಯೆಗಳಾದಲ್ಲಿ ತಕ್ಷಣವೇ ಸೂಕ್ತ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದರಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ. ಉತ್ತಮ ಆರೋಗ್ಯದಿಂದ ಪ್ರತಿಯೊಬ್ಬರ ಜೀವನ ಸಮೃದ್ಧವಾಗಿರುತ್ತದೆ ಎಂದು ಹೇಳಿದರು.
ಹದಿಹರೆಯದವರ ಆಪ್ತ ಸಮಾಲೋಚಕ ಕಳಕಪ್ಪ ಬಂಡಿ ಮಾತನಾಡುತ್ತ ಹದಿಹರೆಯದವರಿಗೆ ಆಗುವ ದೈಹಿಕ,ಮಾನಸಿಕ,ಶಾರೀರಿಕ ಬದಲಾವಣೆಗಳ ಕುರಿತು ವಿವರವಾದ ಮಾಹಿತಿಯನ್ನು ತಿಳಿಸಿದರು.
ಯೋಗ ಗುರು ಪ್ರವೀಣ್ ದಾಸ ವಿದ್ಯಾರ್ಥಿಗಳಿಗೆ ಯೋಗ ಮತ್ತು ಜ್ಞಾನದ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎನ್ ಆರ್ ಕುಕನೂರು, ಸಹ ಪ್ರಾಚಾರ್ಯ ಅಮರೇಶ ಮಡ್ಡಿಕೇರಿ, ಉಪನ್ಯಾಸಕ ವರ್ಗ, ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.