ಗುರು ಸ್ಮರಣೆ : ಉಮಾ ಕಲ್ಮಠ
” ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ. ಪರಿ ಪರಿ ಶಾಸ್ತ್ರವ ಓದಿದರೇನು? ವ್ಯರ್ಥವಾಯಿತು ಭಕುತಿ.” ಎಂಬ ಕನಕದಾಸರ ಈ ಮಾತುಗಳು ಗುರುವಿನ ಮಹತ್ವವನ್ನು ಎತ್ತಿ ತೋರಿಸುತ್ತವೆ.ಗುರುವಾಣಿಯನ್ನು ದೇವವಾಣಿ ಎಂದು ಹೇಳಲಾಗುತ್ತದೆ. ಅಂದರೆ ಸಮಾಜದಲ್ಲಿ ಗುರುವಿಗೆ ಅತ್ಯಂತ ಪವಿತ್ರ ಸ್ಥಾನವನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಗುರು ಎಂದರೆ ಕೇವಲ ಅಕ್ಷರ ಕಲಿಸಿದವರಷ್ಟೇ ಅಲ್ಲದೆ, ಒಬ್ಬ ವ್ಯಕ್ತಿಗೆ ಬೇಕಾಗಿರುವ ಒಳ್ಳೆಯ ಗುಣಗಳನ್ನು, ಸಂಸ್ಕಾರಗಳನ್ನು, ಕಲಿಸಿದವರೆಲ್ಲರೂ ಗುರುಗಳೇ. ಒಂದಕ್ಷರ ಕಲಿಸಿದಾತಂ ಗುರು ಎಂದು ಹೇಳಲಾಗುತ್ತದೆ.
ಪ್ರತಿಯೊಬ್ಬರ ಮೊದಲ ಗುರು ತಾಯಿ ಆಗಿರುತ್ತಾಳೆ. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು. ಹುಟ್ಟಿದಾಗಿನಿಂದಲೇ ನಮಗೆ ತಾಯಿಯೇ ಗುರುವಾಗಿರುತ್ತಾಳೆ. ಶಾಲೆಗೆ ಹೊರಟ ನಂತರ ಶಿಕ್ಷಕರು ನಮಗೆ ಗುರುವಾಗುತ್ತಾರೆ. ತಂದೆ ತಾಯಿಗಳಿಂದ ಜೀವನದ ಪಾಠ ಕಲಿತರೆ ಗುರುಗಳಿಂದ ಬದುಕಿನ ಪಾಠ ಕಲಿಯುತ್ತೇವೆ. ತಂದೆ ತಾಯಿಯರು ನಮಗೆ ಜೀವವನ್ನು ಕೊಡುತ್ತಾರೆ. ಆದರೆ ಗುರುಗಳು ಜೀವನವನ್ನು ರೂಪಿಸುತ್ತಾರೆ. ಇಂತಹ ಗುರುಗಳ ದಿನಾಚರಣೆಯನ್ನು ಪ್ರತಿ ವರ್ಷ ಭಾರತೀಯ ಸಂಪ್ರದಾಯದಂತೆ ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಅಂದು ವೇದವ್ಯಾಸರ ಹುಟ್ಟಿದ ದಿನವೂ ಹೌದು. ಅಂದು ಗೌತಮ ಬುದ್ಧ ಮೊದಲ ಉಪದೇಶ ನೀಡಿದ ದಿನವೂ ಹೌದು. ಹಾಗಾಗಿ ಈ ಹುಣ್ಣಿಮೆಗೆ ಬುದ್ಧ ಪೂರ್ಣಿಮೆ ಎಂದು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಇಂದಿನ ದಿನ ತುಂಬಾ ವಿಶೇಷವಾಗಿರುವ ದಿನ ನಮಗೆಲ್ಲ ಅಕ್ಷರಧಾರೆಯನ್ನು ಎರೆದ ಪ್ರತಿಯೊಬ್ಬ ಗುರುವಿಗೂ ನಮಿಸುವ ಸುದಿನ.
ಒಮ್ಮೆ ಕಬಿರದಾಸರು ಗುರು ಗೋವಿಂದರೊಡನೆ ಇದ್ದಾಗ ದೇವರು ಪ್ರತ್ಯಕ್ಷರಾಗುತ್ತಾರೆ. ಆಗ ಕಬೀರ ದಾಸರು ಮೊದಲ ನಮನವನ್ನು ಗುರುವಿಗೆ ಸಲ್ಲಿಸುತ್ತಾರೆ. ಆಗ ಗುರು ಗೋವಿಂದರು ಕಬೀರದಾಸರನ್ನು ಪ್ರಶ್ನಿಸುತ್ತಾರೆ,. ನಿನ್ನೆದುರಿಗೆ ದೇವರು ಪ್ರತ್ಯಕ್ಷರಾದರೂ ಅವರಿಗೆ ನಮಸ್ಕರಿಸುವುದನ್ನು ಬಿಟ್ಟು ನನಗೆ ಏಕೆ ನಮಸ್ಕರಿಸಿದೆ? ಎಂದು ಕೇಳುತ್ತಾರೆ. ಆಗ ಕಬೀರದಾಸರು ಉತ್ತರಿಸುತ್ತಾರೆ ಆ ದೇವರು ಸಾಕ್ಷಾತ್ಕಾರಗೊಳ್ಳಲು ನೀವು ತಾನೇ ಕಾರಣ. ಹಾಗಾಗಿ ನನ್ನ ಪ್ರಥಮ ಪ್ರಣಾಮಗಳು ನನ್ನ ಗುರುವಿಗೆ ನಂತರ ನಾನು ದೇವರಿಗೆ ನಮಸ್ಕರಿಸುತ್ತೇನೆ ಎಂದು ಉತ್ತರಿಸುತ್ತಾರೆ. ಹೀಗೆ ಕಬೀರದಾಸರು ಗುರುವಿನ ಮಹತ್ವವನ್ನು ತಿಳಿಸಿಕೊಡುತ್ತಾರೆ.
ಛತ್ರಿಯು ಮಳೆಯನ್ನು ನಿಲ್ಲಿಸುವುದಿಲ್ಲ ಬದಲಿಗೆ ನಮಗೆ ಮಳೆಯಲ್ಲಿ ನಿಲ್ಲುವ ಧೈರ್ಯವನ್ನು ಕೊಡುತ್ತದೆ ಹಾಗೆಯೇ ಆತ್ಮವಿಶ್ವಾಸವು ನಮಗೆ ಯಶಸ್ಸನ್ನು ಕೊಡದಿದ್ದರೂ ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ಕೊಡುತ್ತದೆ ಇಂತಹ ಶಕ್ತಿಯನ್ನು ಕೊಡುವವರು ಗುರುಗಳು. ಮನೆ ಕಟ್ಟಲು ಹಣ ಬೇಕು, ಮನಸ್ಸು ಕಟ್ಟಲು ಗುಣಬೇಕು ಹಣದಿಂದ ಕಟ್ಟಿದ ಮನೆಯಲ್ಲಿ ಎಲ್ಲರೂ ಇರುತ್ತಾರೆ ಆದರೆ ಗುಣದಿಂದ ಕಟ್ಟಿದ ಮನೆಯಲ್ಲಿ ಯೋಗ್ಯರಷ್ಟೇ ನೆಲೆಸುತ್ತಾರೆ. ಅಂತಹ ಯೋಗ್ಯರನ್ನು ನಿರ್ಮಾಣ ಮಾಡುವವರು ಗುರುಗಳು.
ಒಳ್ಳೆಯತನಕ್ಕೆ ಸೋಲಿರಬಹುದು ಆದರೆ ಎಂದಿಗೂ ಸಾವಿರುವುದಿಲ್ಲ. ಅಂತಹ ಒಳ್ಳೆಯತನವನ್ನು ಕಲಿಸುವವರು ಗುರುಗಳು. ಮಳೆ ಹನಿ ಸಣ್ಣದಿರಬಹುದು ಅದು ಬಿಡದೆ ಸುರಿದರೆ ದೊಡ್ಡ ದೊಡ್ಡ ನದಿಗಳು ಪ್ರಯತ್ನ ಸಣ್ಣದಾದರೂ ಪರವಾಗಿಲ್ಲ ನಿರಂತರವಾಗಿದ್ದರೆ ದೊಡ್ಡ ಸಾಧನೆ ಮಾಡಲು ಸಾಧ್ಯವಿದೆ ಎಂಬ ಕಲಾಂರವರ ಮಾತನ್ನು ನಮಗೆಲ್ಲ ತಿಳಿಸಿಕೊಟ್ಟಿರುವಂತಹ, ನನ್ನ ಜೀವನದಲ್ಲಿ ನನ್ನ ಬದುಕಿಗೆ ಬೆಳಕನ್ನು ನೀಡಿರುವಂತಹ ನನ್ನ ಎಲ್ಲ ಗುರುಬಳಗಕ್ಕೆ ನನ್ನ ಕೋಟಿ ಕೋಟಿ ನಮನಗಳು.
“ಬಂಧುಗಳೆಂಬುವರು ಬಂದುಂಡು ಹೋಗುವರು, ಬಂಧನವನ್ನರಿಯರು ಗುರುಗಳಿಗಿಂತ ಅನ್ಯ ಬಂಧುಗ ಳುಂಟೆ ಸರ್ವಜ್ಞ.” ಎಂಬಂತೆ ಗುರುಗಳ ಮಹತ್ವವನ್ನು ಸಾರುವ ಅನೇಕ ನುಡಿಗಳನ್ನು ಕೇಳಿದ್ದೇವೆ. ಹರ ಮುನಿದರೂ ಗುರು ಕಾಯುವನು. ಕೆಲವೊಮ್ಮೆ ದೇವರು ನಮ್ಮ ಮೇಲೆ ಸಿಟ್ಟಾದರೂ ಗುರುಗಳು ಮಾತ್ರ ನಮ್ಮನ್ನು ಸದಾ ಕಾಲ ಕಾಯುತ್ತಾರೆ. ತಮ್ಮ ಶಿಷ್ಯ ಬಳಗ ಹೆಚ್ಚಿನದನ್ನು ಸಾಧಿಸಿದಾಗ ಸಂತೋಷಪಡುವ ವ್ಯಕ್ತಿ ಜಗತ್ತಿನಲ್ಲಿ ಅದು ಗುರು ಮಾತ್ರ. ಶಿಷ್ಯನ ಸಾಧನೆ ಕಂಡು ಗುರು ಎಂದೂ ಅಸೂಯೆಪಡುವುದಿಲ್ಲ, ಬದಲಾಗಿ ಆತನ ಸಾಧನೆಗೆ ಇನ್ನೂ ಹೆಚ್ಚಿನ ಹೆಮ್ಮೆಪಡುತ್ತಾರೆ.
ಹುಟ್ಟಿದಂದಿನಿಂದ ಹಿಡಿದು ಇಲ್ಲಿಯವರೆಗೂ ನನ್ನ ಬದುಕಿಗೆ ಬೆಳಕಾದ ಎಲ್ಲ ನನ್ನ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 🙏🙏.
ಶ್ರೀಮತಿ -ಉಮಾ ಗವೀಶ ಕಲ್ಮಠ ಶಿಕ್ಷಕಿ.
ಸರಕಾರಿ ಪ್ರೌಢಶಾಲೆ ಹಟ್ಟಿ (ಅಳವಂಡಿ )ಕೊಪ್ಪಳ.
