
ಹೊಸ ಅಪರಾಧಿಕ ಕಾನೂನುಗಳ ಅರಿವು ಅತ್ಯವಶ್ಯಕ : ನ್ಯಾ. ಸಿ.ಚಂದ್ರಶೇಖರ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಜನ ಸಾಮಾನ್ಯರಿಗೆ ಸೂಕ್ತ ರಕ್ಷಣೆಯನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಹಲವು ಮಾರ್ಪಾಡುಗಳೊಂದಿಗೆ ಜಾರಿಗೆ ತರಲಾಗುತ್ತಿರುವ ಹೊಸ ಅಪರಾಧಿಕ ಕಾನೂನುಗಳ ಬಗ್ಗೆ ಅರಿವು ಅತ್ಯವಶ್ಯಕವಾಗಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಚಂದ್ರಶೇಖರ್ ಅವರು ಹೇಳಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು, ಕೊಪ್ಪಳ ಜಿಲ್ಲಾ ವಕೀಲರ ಸಂಘ ಹಾಗೂ ಯಲಬುರ್ಗಾ, ಕುಷ್ಟಗಿ, ಗಂಗಾವತಿ ವಕೀಲರ ಸಂಘಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜೂನ್ 29ರಿಂದ ಜುಲೈ 3ರವರೆಗೆ ಹಮ್ಮಿಕೊಳ್ಳಲಾಗಿದ್ದ ಐದು ದಿನಗಳ “ಜಿಲ್ಲಾ ಮಟ್ಟದ ಕಾನೂನು ಕಾರ್ಯಗಾರ” ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಅಪರಾಧಿಕ ಕಾನೂನುಗಳಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ಸಾಕ್ಷ್ಯ ಅಧಿನಿಯಮ-2023 ದೇಶಾದ್ಯಂತ ಜುಲೈ 1ರಿಂದ ಜಾರಿಗೆಯಾಗಲಿವೆ. ಈ ಹೊಸ ಕಾನೂನುಗಳ ಬಗ್ಗೆ ತಿಳಿದುಕೊಳ್ಳಲು ಎಲ್ಲಾ ಹಿರಿಯ ಮತ್ತು ಕಿರಿಯ ವಕೀಲರು ಮತ್ತು ಕಾನೂನು ವಿದ್ಯಾಲಯದ ವಿದ್ಯಾರ್ಥಿಗಳು `ಟ್ಯಾಕ್ಸ್ಮನ್ ಆ್ಯಪ್’ (taxmann app)ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದ ಅವರು ಆ್ಯಪ್ ಬಳಕೆ, ನೋಂದಣಿ ಕುರಿತಂತೆ ಖುದ್ದಾಗಿ ಪ್ರಾತ್ಯಕ್ಷತೆ ಮೂಲಕ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ ಕಣವಿ ಅವರು ಮಾತನಾಡಿ, ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸ ನೂತನ ಅವಿಷ್ಕಾರಗಳಿಗೆ ಹೊಸ ಕಾನೂನುಗಳು ಅತ್ಯಂತ ಸಮರ್ಪಕವಾಗಿದ್ದು, ಈ ಉದ್ದೇಶದಿಂದ ಹೊಸ ಅಪರಾಧಿಕ ಕಾನೂನುಗಳು ಜಾರಿಗೆಯಾಗುತ್ತಿವೆ. ಜುಲೈ 1ರಿಂದ ಜಾರಿಯಾಗಲಿರುವ ಹೊಸ ಅಪರಾಧಿಕ ಕಾನೂನುಗಳ ಕುರಿತು ಜಾಗೃತಿ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಕಾನೂನು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಗಾರದಲ್ಲಿ ಪ್ರತಿ ದಿನ ಹೊಸ ಕಾನೂನುಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ನ್ಯಾಯಾಧೀಶರು, ಹಿರಿಯ ವಕೀಲರು ಹಾಗೂ ಕಾನೂನು ಉಪನ್ಯಾಸಕರಿಂದ ವಿಶೇಷ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ವಕೀಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರುಗಳಾದ ಎಸ್.ಎಸ್.ಮಿಠ್ಠಲಕೋಡ ಹಾಗೂ ಎಸ್.ಆಸೀಫ್ ಅಲಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ ಮಾಜಿ ಸದಸ್ಯರು ಹಾಗೂ ಕರ್ನಾಟಕ ಮಹಿಳಾ ವಕೀಲರ ಒಕ್ಕೂಟದ ಅಧ್ಯಕ್ಷರಾದ ಸಂಧ್ಯಾ ಬಿ ಮಾದಿನೂರು, ಗೌರವಾನ್ವಿತ ಪ್ರಧಾನ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರಾದ ಸರಸ್ವತಿದೇವಿ, ಹುಚ್ಚವರಿ ಜಿಲ್ಲಾ ತ್ವರಿತ (ಪೊಕ್ಸೋ) ನ್ಯಾಯಾಧೀಶರಾದ ಕುಮಾರ ಡಿ.ಕೆ., ಹಿರಿಯ ಸಿವಿಲ್ ಮತ್ತು ಸಿ.ಜೆ.ಎಂ ನ್ಯಾಯಾಧೀಶರಾದ ಮಹಾಂತೇಶ ಸಂಗಪ್ಪ ದರಗದ, ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಭಾಗ್ಯಲಕ್ಷ್ಮೀ, ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಆದಿತ್ಯಕುಮಾರ್ ಹೆಚ್.ಆರ್., ಜಿಲ್ಲಾ ಸರ್ಕಾರಿ ವಕೀಲರಾದ ಆಸೀಫ್ ಸರ್ಧಾರ್, ಅಪರ ಜಿಲ್ಲಾ ಸರ್ಕಾರಿ ವಕೀಲರಾದ ಬೆಳ್ಳೆಪ್ಪ ಸಿ ಗಬ್ಬೂರ, ಗಂಗಾವತಿ ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮುಸಾಲಿ, ಯಲಬುರ್ಗಾ ವಕೀಲರ ಸಂಘದ ಅಧ್ಯಕ್ಷರಾದ ಪ್ರಕಾಶ ಎಸ್ ಬೇಲೇರಿ, ಕುಷ್ಟಗಿ ವಕೀಲರ ಸಂಘದ ಅಧ್ಯಕ್ಷರಾದ ವಿಜಯಮಹಾಂತೇಶ, ಕೊಪ್ಪಳ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಬಿ.ವಿ ಸಜ್ಜನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಲ್ ಹಾದಿಮನಿ, ಜಂಟಿ ಕಾರ್ಯದರ್ಶಿ ಸಂತೋಷ ಸಿ ಕವಲೂರ, ಖಜಾಂಚಿ ರಾಜಾಸಾಬ ಬೆಳಗುರ್ಕಿ ಸೇರಿದಂತೆ ಹಿರಿಯ ಹಾಗೂ ಕಿರಿಯ ವಕೀಲರು, ಕಾನೂನು ವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ವಕೀಲರಾದ ರವಿಚಂದ್ರ ಮಾಟಲದಿನ್ನಿ ಅವರು ಪ್ರಾರ್ಥನೆ ಗೀತೆ ಹಾಡಿದರೆ, ವಕೀಲರಾದ ಹನುಮಂತರಾವ್ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ವಕೀಲರಾದ ಬಿ.ಎಸ.ವೀರಪ್ಪ ಅವರು ವಂದಿಸಿದರು. ಬಳಿಕ ಗೋಷ್ಠಿ ನಡೆಯಿತು.